ತಮ್ಮ ಕಚೇರಿಯಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ಸಂಗ್ರಹಿಸಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕ ಇಮ್ರಾನ್ ಹುಸೇನ್ ಅವರಿಂದ ದೆಹಲಿ ಹೈಕೋರ್ಟ್ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ ಮುಂದಿನ ವಿಚಾರಣೆ ವೇಳೆಗೆ ಹುಸೇನ್ ಅವರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದೆ. ಅಲ್ಲದೆ ದೆಹಲಿ ಸರ್ಕಾರಕ್ಕೂ ನೋಟಿಸ್ ನೀಡಲಾಗಿದೆ.
ಇಡೀ ದೆಹಲಿ ಆಮ್ಲಜನಕಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಇಮ್ರಾನ್ ಅವರು ಅಕ್ರಮವಾಗಿ, ಕಾನೂನು ಬಾಹಿರವಾಗಿ ತಮ್ಮ ಕಚೇರಿಯಲ್ಲಿ ಆಮ್ಲಜನಕ ಸಿಲಿಂಡರ್‌ಗಳನ್ನು ದಾಸ್ತಾನು ಇಟ್ಟುಕೊಂಡಿದ್ದಾರೆ. ಇಮ್ರಾನ್ ಅವರ ಕಚೇರಿಯಲ್ಲಿ ಉಚಿತವಾಗಿ ಆಮ್ಲಜನಕ ಸಿಗಲಿದೆ ಎಂದು ಎಎಪಿ ಪಕ್ಷದ ದೆಹಲಿ ಘಟಕ ಟ್ವೀಟ್ ಮಾಡಿದ್ದನ್ನು ಆಧರಿಸಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದನ್ನು ತಡೆದ ಜಿಲ್ಲಾ ದಂಡಾಧಿಕಾರಿ ಶೈಲೇಶ್ ಕುಮಾರ್ ಯಾದವ್ ಅವರ ವಿರುದ್ಧ ತ್ರಿಪುರ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೆಂಗಸರು, ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆತರುವ ಅಗತ್ಯವೇನಿತ್ತು ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅವರನ್ನು ಸುರಕ್ಷಿತವಾಗಿ ಮನೆಗೆ ತೆರಳಲು ಅನುವು ಮಾಡುವ ದೃಷ್ಟಿಯಿಂದ ಠಾಣೆಗೆ ಕರೆತರಲಾಗಿತ್ತು ಎನ್ನುವ ರಾಜ್ಯ ಸರ್ಕಾರದ ಉತ್ತರವನ್ನು ಅಸಮಂಜಸ ಎಂದು ಪೀಠ ಹೇಳಿದೆ.
ತ್ರಿಪುರದ ರಾಜಧಾನಿ ಅಗರ್ತಲಾದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದನ್ನು ತಡೆದ ಜಿಲ್ಲಾ ದಂಡಾಧಿಕಾರಿ ಶೈಲೇಶ್ ಕುಮಾರ್ ಯಾದವ್ ಅವರ ವಿರುದ್ಧ ತ್ರಿಪುರ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಪೊಲೀಸ್ ಠಾಣೆಗೆ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹೆಂಗಸರು, ಮಕ್ಕಳನ್ನು ಕರೆತರುವ ಅಗತ್ಯವೇನಿತ್ತು ಎಂದು ನ್ಯಾಯಾಲಯ ಟೀಕಿಸಿದೆ.
ಗೋವಾಗೆ ಪ್ರವೇಶ ಬಯಸಿದ ಸಮಯದಿಂದ 72 ಗಂಟೆ ಒಳಗೆ ಕೋವಿಡ್ ನಕಾರಾತ್ಮಕ ವರದಿ ಪಡೆದಿರದ ವ್ಯಕ್ತಿಗಳಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಗುರುವಾರ ಗೋವಾ ಸರ್ಕಾರಕ್ಕೆ ಸೂಚಿಸಿದೆ. ನೆಗೆಟಿವ್ ವರದಿ ಅತ್ಯಗತ್ಯ ಎಂದು ಪ್ರಚಾರ ಮಾಡಲು ಸರ್ಕಾರಕ್ಕೆ ಸ್ವಲ್ಪ ಸಮಯ ಬೇಕಾಗುವುದರಿಂದ ಈ ನಿರ್ದೇಶನ ಮೇ 10ರಿಂದ ಜಾರಿಗೆ ಬರಲಿದೆ ಎಂದು ನ್ಯಾಯಾಲಯ ಘೋಷಿಸಿದೆ.
ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಎಂ ಎಸ್ ಜವಾಲ್ಕರ್ ಅವರಿದ್ದ ಪೀಠ ಸೂಕ್ತ ಸಂವಹನ ಮಾರ್ಗಗಳನ್ನು ಅನುಸರಿಸಿ ಈ ನಿರ್ದೇಶನವನ್ನು ತಕ್ಷಣವೇ ಪ್ರಚಾರ ಮಾಡಬೇಕಿದ್ದು ಇದರಿಂದ ಪ್ರಯಾಣಿಕರು ಮತ್ತು ಪ್ರವಾಸಿಗರ ಗಮನ ಸೆಳೆದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೂ ಈ ಆದೇಶ ಅಗತ್ಯ ವಸ್ತು ಪೂರೈಕೆ ಮಾಡುವವರಿಗೆ ಪ್ರವೇಶ ನಿರ್ಬಂಧಿಸುವುದಿಲ್ಲ. ಅದಕ್ಕೆ ತಕ್ಕಂತೆ ಮಾರ್ಗಸೂಚಿ ರೂಪಿಸುವ ಸರ್ಕಾರದ ಕಾರ್ಯಕ್ಕೂ ಅಡ್ಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ವೈಯಕ್ತಿಕ ಬಳಕೆಗೆ ಉಡುಗೊರೆಯಾಗಿ ಆಮ್ಲಜನಕ ಸಾಂದ್ರತೆಯನ್ನು ಆಮದು ಮಾಡಿಕೊಳ್ಳುವಲ್ಲಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ಹೇರಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಹಾಯ ಮಾಡಲು ಅಮಿಕಸ್ ಕ್ಯೂರಿಯನ್ನಾಗಿ ದೆಹಲಿ ಹೈಕೋರ್ಟ್ ಹಿರಿಯ ವಕೀಲ ಅರವಿಂದ್ ದಾತಾರ್ ಅವರನ್ನು ನೇಮಕ ಮಾಡಿಕೊಂಡಿದೆ.
ಇದೇ ವೇಳೆ ನ್ಯಾಯಾಲಯ ತಮ್ಮ ವಶದಲ್ಲಿರಿಸಿಕೊಂಡಿರುವ ಆಮ್ಲಜನಕ ಸಾಧನವನ್ನು ಕಸ್ಟಮ್ಸ್ ಅಧಿಕಾರಿಗಳು ಬಿಡುಗಡೆ ಮಾಡಬೇಕು ಎಂದು ನಿರ್ದೇಶಿಸಿತು. 85 ವರ್ಷದ ಅರ್ಜಿದಾರ ಕೋವಿಡ್ ರೋಗಿಯಾಗಿದ್ದು ಅವರ ಸೋದರಳಿಯ ಅಮೆರಿಕದಿಂದ ಉಡುಗೊರೆಯಾಗಿ ಆಮ್ಲಜನಕ ಸಾಧನವೊಂದನ್ನು ಕಳುಹಿಸಿಕೊಟ್ಟಿದ್ದರು. ಸಾಧನದ ಮೇಲೆ ಸರ್ಕಾರ ತೆರಿಗೆ ವಿಧಿಸಿದ್ದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು.