Oxygen concentrator and Delhi HC
Oxygen concentrator and Delhi HC 
ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

Bar & Bench

ನಿರ್ದೇಶನ ಜಾರಿಗೊಳಿಸುವ ಸಾಧ್ಯತೆಯನ್ನು ಹೈಕೋರ್ಟ್‌ಗಳು ಪರಿಗಣಿಸಬೇಕು: ಅಲಾಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ಉತ್ತರ ಪ್ರದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ ಮೇ 17ರಂದು ನೀಡಿದ್ದ ನಿರ್ದೇಶನಗಳನ್ನು ವಾಸ್ತವದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ಅವುಗಳಿಗೆ ತಡೆ ನೀಡಿದೆ. ಜಾರಿಗೊಳಿಸಲು ಅಸಾಧ್ಯವಾದ ಆದೇಶಗಳನ್ನು ಹೊರಡಿಸುವುದರಿಂದ ಹೈಕೋರ್ಟ್‌ಗಳು ಅಂತರ ಕಾಯ್ದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ವಿನೀತ್‌ ಶರಣ್‌ ಮತ್ತು ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Justices Vineet Saran and Bhushan Gavai

ಹಿರಿಯ ವಕೀಲ ನಿಧೇಶ್‌ ಗುಪ್ತಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನ್ಯಾಯಾಲಯವು ನೇಮಿಸಿದೆ. ಕೋವಿಡ್‌ ರೋಗಿಗಳಿಗೆ ಕಾಯ್ದಿರಿಸಲಾದ ನರ್ಸಿಂಗ್‌ ಹೋಂಗಳ ಎಲ್ಲ ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಮಾಡಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ನಿರ್ದೇಶನ ನೀಡಿತ್ತು. “ತಾವು ನೀಡುವ ನಿರ್ದೇಶನಗಳನ್ನು ಜಾರಿಗೊಳಿಸುವ ಸಾಧ್ಯತೆಯನ್ನು ಹೈಕೋರ್ಟ್‌ಗಳು ಸಾಮಾನ್ಯವಾಗಿ ಪರಿಗಣಿಸಬೇಕು. ಜಾರಿಗೊಳಿಸಲು ಅಸಾಧ್ಯ ಎಂಬ ನಿರ್ದೇಶನಗಳನ್ನು ನೀಡಬಾರದು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನಾವು ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲಾಗದು: ಎಸ್‌ಜಿ ಮೆಹ್ತಾ ಕೋರಿಕೆಗೆ ಅಸಮ್ಮತಿಸಿದ ಸುಪ್ರೀಂ

ಕೋವಿಡ್‌ ಸಂಬಂಧಿ ಪ್ರಕರಣಗಳನ್ನು ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ನಡೆಸಲು ಆದೇಶಿಸುವಂತೆ ಕೋರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಕೋರಿಕೆಗೆ ಸುಪ್ರೀಂ ಕೋರ್ಟ್‌ನ ರಜಾಕಾಲೀನ ಪೀಠವು ಶುಕ್ರವಾರ ಅಸಮ್ಮತಿಸಿದೆ.

Supreme Court

ಸುಪ್ರೀಂ ಕೋರ್ಟ್‌ ಬೀಸು ಆದೇಶಗಳನ್ನು ಹೊರಡಿಸಲಾಗದು ಮತ್ತು ಹೈಕೋರ್ಟ್‌ಗಳ ಸ್ಥೈರ್ಯಗೆಡಿಸಲಾಗದು ಎಂದು ನ್ಯಾಯಮೂರ್ತಿಗಳಾದ ವಿನೀತ್‌ ಶರಣ್‌ ಮತ್ತು ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಅಲಾಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್‌ ವರ್ಮಾ ಮತ್ತು ಅಜಿತ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಉತ್ತರ ಪ್ರದೇಶದಲ್ಲಿ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಹೊರಡಿಸಿದ್ದ ನಿರ್ದೇಶನಗಳನ್ನು ಪ್ರಶ್ನಿಸಿದ್ದ ಉತ್ತರ ಪ್ರದೇಶ ಸರ್ಕಾರವನ್ನು ಮೆಹ್ತಾ ಪ್ರತಿನಿಧಿಸಿದ್ದರು. ಉತ್ತರ ಪ್ರದೇಶದ ಗ್ರಾಮೀಣ ಭಾಗದ ವೈದ್ಯಕೀಯ ವ್ಯವಸ್ಥೆಯನ್ನು ಗಮನಿಸಿದರೆ ರೋಗಿಗಳನ್ನು 'ದೇವರೇ ಕಾಪಾಡಬೇಕು' ಎಂದು ಹೇಳಿದ್ದ ಅಲಾಹಾಬಾದ್‌ ಹೈಕೋರ್ಟ್‌, ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪಾತ್ರವನ್ನು ಪರೀಕ್ಷೆಗೆ ಒಡ್ಡಿತ್ತು.

ಆಮ್ಲಜನಕ ಸಾಂದ್ರಕದ ಉಡುಗೊರೆಗೆ ಐಜಿಎಸ್‌ಟಿ ವಿಧಿಸುವುದು ಅಸಾಂವಿಧಾನಿಕ: ದೆಹಲಿ ಹೈಕೋರ್ಟ್‌

ವೈಯಕ್ತಿಕ ಬಳಕೆಗೆ ಉಡುಗೊರೆಯಾಗಿ ಆಮ್ಲಜನಕ ಸಾಂದ್ರಕ ಆಮದು ಮಾಡಿಕೊಂಡಿದ್ದಕ್ಕೆ ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಐಜಿಎಸ್‌ಟಿ) ವಿಧಿಸುವುದು ಅಸಾಂವಿಧಾನಿಕ ಎಂದು ಶುಕ್ರವಾರ ದೆಹಲಿ ಹೈಕೋರ್ಟ್‌ ಹೇಳಿದೆ. ವೈಯಕ್ತಿಕ ಬಳಕೆಗೆ ಉಡುಗೊರೆಯಾಗಿ ಆಮ್ಲಜನಕ ಸಾಂದ್ರಕ ಆಮದು ಮಾಡಿಕೊಂಡಿದ್ದಕ್ಕೆ ಶೇ. 12ರಷ್ಟು ಐಜಿಎಸ್‌ಟಿ ವಿಧಿಸುವ ಮೇ 1ರ ಅಧಿಸೂಚನೆಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಆಮ್ಲಜನಕ ಸಾಂದ್ರಕಗಳನ್ನು ವೈಯಕ್ತಿಕ ಬಳಕೆಗಾಗಿ ಖರೀದಿಸಲಾಗಿದ್ದು, ವ್ಯಾಪಾರ ಮಾಡಲು ಅಲ್ಲ ಎಂಬ ಒಪ್ಪಿಗೆ ಪತ್ರವನ್ನು ಆಮದು ಮಾಡಿಕೊಳ್ಳುವವರು ಸಂಬಂಧಪಟ್ಟವರಿಂದ ಪಡೆದು ಸಲ್ಲಿಸಬೇಕು ಎಂದು ನ್ಯಾಯಮೂರ್ತಿಗಳಾದ ರಾಜೀವ್‌ ಶಖ್ದೀರ್‌ ಮತ್ತು ತಲ್ವಂತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ. ಅಮೆರಿಕಾದಿಂದ ಉಡುಗೊರೆಯಾಗಿ ತಮ್ಮ ಸಂಬಂಧಿ ಆಮ್ಲಜನಕ ಸಾಂದ್ರಕ ಕಳುಹಿಸಿದ್ದರು ಎಂದು 85 ವರ್ಷದ ಕೋವಿಡ್‌ ಸೋಂಕಿತರೊಬ್ಬರು ಅರ್ಜಿ ಸಲ್ಲಿಸಿದ್ದರು.