ಕೋವಿಡ್ ಹಾಗೂ ಇತರೆ ರೋಗಿಗಳನ್ನು ಬಾಧಿಸುತ್ತಿರುವ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ರೋಗವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಸೋಮವಾರ ಗುಜರಾತ್ ಹೈಕೋರ್ಟ್ ಪ್ರಶ್ನಿಸಿದೆ. ಬ್ಲ್ಯಾಕ್ ಫಂಗಸ್‌ಗೆ ನೀಡುವ ಇಂಜೆಕ್ಷನ್ ಕೊರತೆ ಮತ್ತು ಆ ರೋಗಕ್ಕೆ ಚಿಕಿತ್ಸೆ ನೀಡಲು ಹೆಚ್ಚು ವೆಚ್ಚವಾಗುತ್ತಿರುವುದರತ್ತ ತಕ್ಷಣ ಗಮನಹರಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಬೆಲಾ ತ್ರಿವೇದಿ ಮತ್ತು ಭಾರ್ಗವ್ ಡಿ ತ್ರಿವೇದಿ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.
“ಮಾಂಸ ತಿನ್ನುವ ಕಪ್ಪು ಶಿಲೀಂಧ್ರಗಳ ಸೋಂಕಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯವು ಎದುರಿಸುತ್ತಿರುವ ಹೊಸ ಸವಾಲನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ. ಈ ರೋಗಕ್ಕೆ ನೀಡಲು ಬಳಸುವ ಇಂಜೆಕ್ಷನ್ ಕೊರತೆ ಎದುರಾಗಿದ್ದು, ರೋಗದ ಚಿಕಿತ್ಸಾ ವೆಚ್ಚದ ಸಮಸ್ಯೆಗಳು ಎದುರಾಗಿವೆ. ಇವುಗಳತ್ತ ರಾಜ್ಯ ಸರ್ಕಾರ ತುರ್ತು ಗಮನ ನೀಡಬೇಕಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ದೇಶದಲ್ಲಿ ಕೋವಿಡ್ ಲಸಿಕೆ ಕೊರತೆಯ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದ ಲಸಿಕೆ ಉತ್ಪಾದನಾ ಕಂಪನಿಗಳಿಂದ ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅನ್ನು ಮಧ್ಯಪ್ರದೇಶ ಹೈಕೋರ್ಟ್ ಮುಂದೆ ಸಲ್ಲಿಸಲಾಗಿದೆ.
ಜಾಗತಿಕ ಟೆಂಡರ್ ಮೂಲಕ ಇತರ ಉತ್ಪಾದಕರ ಕೋವಿಡ್ ಲಸಿಕೆ ಖರೀದಿಸುವ ಬಗ್ಗೆ ಗಮನಸೆಳೆದಿರುವ ಅರ್ಜಿದಾರರು ಜಾಗತಿಕ ಟೆಂಡರ್ ಆಹ್ವಾನಿಸಲು ಈಗಾಗಲೇ ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ಗಮನಸೆಳೆದಿದ್ದಾರೆ. ಟೆಂಡರ್ ಮೂಲಕ ಖರೀದಿಸಲಾದ ಲಸಿಕೆಗೆ ರಾಜ್ಯಗಳೇ ದರ ನಿಗದಿಗೊಳಿಸಬೇಕು ಎಂದು ವಕೀಲ ಸುನಿಲ್ ಗುಪ್ತಾ ಅವರು ವಕೀಲ ಸಿದ್ಧಾರ್ಥ್ ಆರ್ ಗುಪ್ತ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಕೋರಿದ್ದಾರೆ.
ಭಾರತದಲ್ಲಿ ಲಸಿಕೆ ತಯಾರಿಕೆಗಾಗಿ ಒಪ್ಪಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದ ವಿದೇಶಿ ಕೋವಿಡ್ ಲಸಿಕಾ ಉತ್ಪಾದಕರ ವಿವರ ಕೋರಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಿದ್ದ ಅರ್ಜಿದಾರರಿಗೆ ದೆಹಲಿ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿ, ಮನವಿಯನ್ನು ವಜಾಗೊಳಿಸಿದೆ. ಅರ್ಜಿದಾರರ ಜ್ಞಾನವನ್ನು ವೃದ್ಧಿಸುವ ಉದ್ದೇಶಕ್ಕಾಗಿ ಮನವಿಯನ್ನು ವಿಚಾರಣೆಗೆ ಪರಿಗಣಿಸುವುದರಲ್ಲಿ ಅರ್ಥವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
“ನಿಮ್ಮ ಜ್ಞಾನ ಹೆಚ್ಚಿಸಲು ನಾವು ರಿಟ್ ಮನವಿಯನ್ನು ವಿಚಾರಣೆಗೆ ಪರಿಗಣಿಸಲಾಗದು. ಅದಕ್ಕಾಗಿಯೇ ಒಂದು ಕಾಯಿದೆ ಇದೆ” ಎಂದ ಪೀಠವು ಮಾಹಿತಿ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಲು ಮನವಿದಾರರು ಸ್ವತಂತ್ರರು ಎಂದಿತು. “ಎಲ್ಲಾ ಸಣ್ಣ ಸಮಸ್ಯೆಗಳಿಗೆ ರಿಟ್ ಮನವಿ ಪರಿಹಾರವಲ್ಲ. ಪ್ರತಿಯೊಂದು ಐಡಿಯಾವನ್ನು ರಿಟ್ ಮನವಿಯಾಗಿ ಪರಿವರ್ತಿಸುವುದು ರೂಢಿಯಾಗಿದೆ. ನ್ಯಾಯಾಲಯದ ವ್ಯಾಪ್ತಿಯನ್ನು ಸಾರ್ವಜನಿಕರು ದುರ್ಬಳಕೆ ಮಾಡಿಕೊಳ್ಳಲಾಗದು” ಎಂದು ಪೀಠ ಹೇಳಿತು.