ಕೇರಳ ರಾಜ್ಯಕ್ಕೆ ಪೂರೈಸಲು ಉದ್ದೇಶಿಸಿರುವ ಲಸಿಕೆಯನ್ನು ಯಾವಾಗ ನೀಡಲಾಗುತ್ತದೆ ಎಂಬುದಕ್ಕೆ ಕಾಲಮಿತಿ ನಿಗದಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಕೇರಳ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ. ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಎಂ ಆರ್ ಅನಿತಾ ಅವರಿದ್ದ ವಿಭಾಗೀಯ ಪೀಠವು ಮೌಖಿಕ ಮನವಿ ಮಾಡಿದ್ದು, ಭಾರತ್ ಬಯೋಟೆಕ್ ತಯಾರಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯ ಪೇಟೆಂಟ್ ಹಕ್ಕನ್ನು ಇತರೆ ಉತ್ಪಾದಕರಿಗೆ ವರ್ಗಾಯಿಸುವುದರಿಂದ ಅವರೂ ಅದನ್ನು ಉತ್ಪಾದಿಸಲಿದ್ದಾರೆ ಎಂಬ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.
“ನಮಗೆ ಯಾವಾಗ ಲಸಿಕೆ ಪೂರೈಕೆಯಾಗುತ್ತದೆ?... ನೀವು ಲಸಿಕೆ ಪೂರೈಸಲು ತಡ ಮಾಡಿದರೆ ಹೊಸ ರೂಪಾಂತರಿ ವೈರಸ್ ಸೃಷ್ಟಿಯಾಗಿ ಜನರು ಅದರಿಂದ ಸಾಯಲಿದ್ದಾರೆ… ಕೇರಳ ರಾಜ್ಯಕ್ಕೆ ಸಂಬಂಧಿಸಿದ ಲಸಿಕೆ ವಿವರಣೆಯನ್ನು ಸಲ್ಲಿಸುವಂತೆ ನಿಮಗೆ ನಾವು ಸೂಚಿಸಿದ್ದೇವೆ… ಅದು ಎಲ್ಲಿ” ಎಂದು ಪೀಠವು ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.
ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವ ದುಬಾರಿ ಬೆಲೆಗೆ ಆಮ್ಲಜನಕ ಸಾಂದ್ರಕ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್ ಕಲ್ರಾಗೆ ದೆಹಲಿ ಹೈಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಅಲ್ಲದೇ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದೆ.
ಈ ಸಂದರ್ಭದಲ್ಲಿ ಕಲ್ರಾ ಅವರಿಗೆ ರಕ್ಷಣೆ ನೀಡಲು ನ್ಯಾಯಾಲಯ ಸಿದ್ಧವಿಲ್ಲ ಎಂದು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠ ಹೇಳಿತು.