ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ಮೂಲಕ ದೊಡ್ಡಮಟ್ಟದಲ್ಲಿ ಸಾವು ತಪ್ಪಿಸಬಹುದಿತ್ತು ಎಂದು ಬುಧವಾರ ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು ವೃದ್ಧರಿಗೆ ಮತ್ತು ಕಾಯಿಲೆಯಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುವ ಸಂಬಂಧದ ತನ್ನ ನೀತಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡುತ್ತಿರುವ ರೀತಿ ನೋಡಿದರೆ ಅಚ್ಚರಿಯಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ತಿಳಿಸಿದೆ. ಅಲ್ಲದೆ ತಾನು ಏಪ್ರಿಲ್ 22ರಂದು ನೀಡಿದ್ದ ಆದೇಶಕ್ಕೆ ಏಕೆ ಪ್ರತಿಕ್ರಿಯಿಸಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿತು. ಪ್ರಕರಣದ ಮುಂದಿನ ವಿಚಾರಣೆ ಮೇ 19ಕ್ಕೆ ನಿಗದಿಯಾಗಿದೆ.
ಆಮ್ಲಜನಕ ಸಾಂದ್ರಕ ಮತ್ತಿತರ ಚಿಕಿತ್ಸಾ ಸಾಧನಗಳಿಗೆ ಗರಿಷ್ಠ ಮಾರಾಟ ದರ (ಎಂಆರ್‌ಪಿ) ನಿಗದಿಪಡಿಸುವಲ್ಲಿ ವಿಫಲವಾದರೆ ಅವುಗಳನ್ನು ಅತಿಯಾದ ಬೆಲೆಗೆ ಮಾರಬಹುದು ಎಂದು ಆತಂಕ ವ್ಯಕ್ತಪಡಿಸಿರುವ ದೆಹಲಿ ಹೈಕೋರ್ಟ್ ಅವುಗಳಿಗೆ ಮಾರುಕಟ್ಟೆ ದರ ನಿಗದಿಪಡಿಸಲು ಇದು ಸಕಾಲ ಎಂದು ಹೇಳಿದೆ.
ಕೋವಿಡ್‌ಗೆ ಸಂಬಂಧಿಸಿದ ಔಷಧ ಮತ್ತು ಉಪಕರಣಗಳ ಕಾಳಸಂತೆ ಮಾರಾಟ ಮತ್ತು ಅಕ್ರಮ ಸಂಗ್ರಹಕ್ಕೆ ಸಂಬಂಧಿಸಿದಂತೆ ವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ಪೀಠ ಈ ಅಂಶವನ್ನು ತನ್ನ ಮಧ್ಯಂತರ ಆದೇಶದಲ್ಲಿ ದಾಖಲಿಸಿದೆ, 2020ರ ಜೂನ್‌ನಲ್ಲಿಯೇ ಆಮದುಗೊಂಡ ಉಪಕರಣಗಳ ಅಥವಾ ದೇಶೀಯ ಸಲಕರಣೆಗಳ ಬೆಲೆಗಳಿಗೆ ನಿಗದಿಪಡಿಸುವ ಕೂಗು ಎದ್ದಿತ್ತು. ಆದರೆ ಈ ಪ್ರಕ್ರಿಯೆ ಅಪೂರ್ಣವಾಗಿದೆ ಎಂದು ನ್ಯಾಯಾಲಯ ತಿಳಿಸಿದ್ದು ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಕೆಳಹಂತದ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹೈಕೋರ್ಟ್ ಆದೇಶಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ಯಾರಿಗೂ ಕಡಿವಾಣ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿತು.
ಆಮ್ಲಜನಕ ಕೊರತೆಯಿಂದ ಕೋವಿಡ್ ರೋಗಿಗಳು ಸಾವಿಗೀಡಾದರೆ ಅದು ಸಂವಿಧಾನದ 21ನೇ ವಿಧಿಯಡಿ ಒದಗಿಸಲಾಗಿರುವ ಜೀವಿಸುವ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗುತ್ತದೆ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ನ್ಯಾಯಪೀಠ ಬುಧವಾರ ತಿಳಿಸಿದ್ದು ಸರ್ಕಾರ ಹಾಗೂ ಅಧಿಕಾರಿಗಳಿಗೆ ಆಮ್ಲಜನಕ ಪೂರೈಕೆಗೆ ಎಲ್ಲಾ ಯತ್ನ ಮಾಡುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಂ ಎಸ್ ಸೋನಾಕ್ ಮತ್ತು ಎನ್ ಡಬ್ಲ್ಯೂ ಸಾಂಬ್ರೆ ಅವರಿದ್ದ ಪೀಠ ಆಮ್ಲಜನಕ ಕೊರತೆಯಿಂದಾಗಿ ರಾಜ್ಯದಲ್ಲಿ ಹಲವಾರು ಸಾವುಗಳು ಸಂಭವಿಸುತ್ತಿದ್ದು ನ್ಯಾಯಾಲಯ ಮತ್ತು ಅಧಿಕಾರಿಗಳು ಇದನ್ನು ನಿರಾಕರಿಸಲಾಗದು ಎಂದಿತು. ಒಂದು ಸಾಂವಿಧಾನಿಕ ನ್ಯಾಯಾಲಯವಾಗಿ ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಜೀವಿಸುವ ಹಕ್ಕಿನ ರಕ್ಷಣೆ ಮತ್ತು ಜೀವ ರಕ್ಷಣೆಗೆ ಮುಂದಾಗುವುದು ತನ್ನ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ.
ಆಮ್ಲಜನಕ ಸಾಂದ್ರಕ ಸಂಗ್ರಹ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿಯ ಉದ್ಯಮಿ ನವನೀತ್ ಕಲ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ತನ್ನ ತೀರ್ಪು ಕಾಯ್ದಿರಿಸಿದೆ. ನಗರದ ಸಾಕೇತ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಂದೀಪ್ ಗಾರ್ಗ್ ಅವರು ಗುರುವಾರ ಬೆಳಗ್ಗೆ ಹತ್ತಕ್ಕೆ ಪ್ರಕರಣ ಮುಂದೂಡಿದರು.
ಇದೇ ವೇಳೆ ಕಲ್ರಾ ಪರ ವಕೀಲ ವಿಕಾಸ್ ಪಹ್ವಾ ಪ್ರಕರಣದಲ್ಲಿ ಯಾವುದೇ ದೂರುದಾರರಿಲ್ಲ, ಅಲ್ಲದೆ ತನ್ನ ಕಕ್ಷೀದಾರರ ವಿರುದ್ಧ ಕಳೆದ ಕೆಲವು ವಿರುದ್ಧ ಸಂಚು ನಡೆಯುತ್ತಿತ್ತು. ತಮ್ಮನ್ನು ಸಿಲುಕಿಸಲಾಗುತ್ತಿದೆ ಎಂದು ಅವರು ಪೊಲೀಸರಿಗೆ ಈ ಹಿಂದೆ ದೂರು ಕೂಡ ಕೊಟ್ಟಿದ್ದರು. ಸಾಮಾಜಿಕ ಮಾಧ್ಯಮ ಆಧರಿಸಿ ಕಲ್ರಾ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮುಖದ ಮೇಲೆ ಆಕ್ಸಿಜನ್ ಮಾಸ್ಕ್, ಹಾಸಿಗೆಗೆ ಒರಗಿರುವ ದೇಹ, ನರ್ಸ್‌ಗಳು, ವೈದ್ಯರ ಓಡಾಟ. ಆತಂಕದ ವಾತಾವರಣ… ಇದೆಲ್ಲದರ ನಡುವೆಯೂ ನ್ಯಾಯವಾದಿಯೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಕೋವಿಡ್ ದೃಢಪಟ್ಟಿದ್ದ ವಕೀಲ ಸುಭಾಷ್ ಚಂದ್ರನ್ ಆಸ್ಪತ್ರೆಯಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿ ದೆಹಲಿ ಹೈಕೋರ್ಟ್‌ನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಕೀಲರ ಬದ್ಧತೆಯನ್ನು ನ್ಯಾಯಮೂರ್ತಿ ಪ್ರತಿಭಾ ಸಿಂಗ್ ತಮ್ಮ ಆದೇಶದಲ್ಲಿ ಶ್ಲಾಘಿಸಿದರು.