ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಕುಂಭ ಮೇಳ, ಚಾರ್ ಧಾಮ್ ಯಾತ್ರೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿಸುವ ಮೂಲಕ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸದ ಉತ್ತರಾಖಂಡದ ರಾಜ್ಯ ಸರ್ಕಾರದ ಬಗ್ಗೆ ಗುರುವಾರ ಉತ್ತರಾಖಂಡ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ಈ ಧಾರ್ಮಿಕ ಸಮಾವೇಶಗಳ ಸಂದರ್ಭದಲ್ಲಿ ಲಜ್ಜೆಹೀನವಾಗಿ ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ರಾಜ್ಯಕ್ಕೆ ಮುಜುಗರದ ಸನ್ನಿವೇಶ ಉಂಟಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ವರ್ಮಾ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
“ಮೊದಲಿಗೆ ನಾವು ಕುಂಭ ಮೇಳ ಆಯೋಜಿಸುವ ಮೂಲಕ ತಪ್ಪು ಮಾಡಿದೆವು. ಬಳಿಕ ಚಾರ್ ಧಾಮ್ ಯಾತ್ರೆ. ನಾವು ಪದೇಪದೇ ನಮಗೆ ಮುಜುಗರದ ಪರಿಸ್ಥಿತಿ ಸೃಷ್ಟಿಸಿಕೊಳ್ಳುತ್ತಿರುವುದೇಕೆ? ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.
ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ನೀತಿ ಜಾರಿಗೆ ತಂದರೆ ಮತ್ತು ಈ ಸಂಬಂಧ ಮಾರ್ಗಸೂಚಿ ಹೊರಡಿಸಿದರೆ ನಾವು ಅದನ್ನು ಅನುಷ್ಠಾನಗೊಳಿಸಲು ಸಿದ್ಧವಿದ್ದೇವೆ ಎಂದು ಬಾಂಬೆ ಹೈಕೋರ್ಟ್‌ಗೆ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ತಿಳಿಸಿದೆ.
ಹಿರಿಯರು ಮತ್ತು ವಿಶೇಷ ಚೇತನರಿಗೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲು ಬಿಎಂಸಿ ಸಿದ್ಧವಾಗಿದೆಯೇ ಎಂದು ಬುಧವಾರ ಬಾಂಬೆ ಹೈಕೋರ್ಟ್ ಪ್ರಶ್ನಿಸಿದ್ದಕ್ಕೆ ಸಂಬಂಧಿಸಿದಂತೆ ಬಿಎಂಸಿ ಇಂದು ಬಾಂಬೆ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಮೇಲಿನಂತೆ ಹೇಳಿದೆ. ಕೇಂದ್ರ ಸರ್ಕಾರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಕುರಿತು ಯಾವುದೇ ಯೋಜನೆ ಜಾರಿಗೊಳಿಸದಿದ್ದರೂ ಬಿಎಂಸಿ ಮನೆ ಬಳಿಗೆ ತೆರಳಿ ಲಸಿಕೆ ನೀಡಲು ಸಿದ್ಧವಾಗಿದ್ದರೆ ಅದಕ್ಕೆ ಅನುಮತಿ ನೀಡುವ ಇಂಗಿತವನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು ಬುಧವಾರ ಹೇಳಿತ್ತು.
ತಮಗೆ ಅಗತ್ಯವಾದ ಆಮ್ಲಜನಕ ಸಂಗ್ರಹಿಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಎಲ್ಲಾ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಸ್ವಂತದ ಆಮ್ಲಜನಕ ಘಟಕಗಳನ್ನು ನಿರ್ಮಿಸಿಕೊಳ್ಳಲು ಇದು ಸಕಾಲ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿದೆ.
ಕೋವಿಡ್ ವ್ಯಾಪಿಸಿದ್ದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಆಸ್ಪತ್ರೆಗಳು ಎದುರಿಸಿದ್ದ ಆಮ್ಲಜನಕ ಕೊರತೆಯ ಕಹಿ ಅನುಭವಗಳು ಪಾಠ ಕಲಿಸಲಿ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ. “ದೆಹಲಿಯ ಎನ್‌ಸಿಟಿಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆಯ ಕಹಿ ಅನುಭವವು ಎಲ್ಲರಿಗೂ, ಅದರಲ್ಲಿಯೂ ವಿಶೇಷವಾಗಿ ಆಸ್ಪತ್ರೆಗಳಿಗೆ ಕಲಿಯಬೇಕಾದ ಪಾಠ ಹೇಳಿದೆ” ಎಂದು ಪೀಠ ಅಭಿಪ್ರಾಯಪಟ್ಟಿತು.