ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.

Bar & Bench

ಹೊರ ರಾಜ್ಯಗಳಿಂದ ಬರುವ ಆಂಬುಲೆನ್ಸ್‌ಗಳನ್ನು ರಾಜ್ಯ ಸರ್ಕಾರ ತಡೆಯುವಂತಿಲ್ಲ: ತೆಲಂಗಾಣ ಹೈಕೋರ್ಟ್‌

ಹೊರರಾಜ್ಯಗಳಿಂದ ಚಿಕಿತ್ಸೆಗೆಂದು ಬರುವ ರೋಗಿಗಳನ್ನು ತಡೆಯುವಂತೆ ಇತ್ತೀಚೆಗೆ ತೆಲಂಗಾಣ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್‌ ತಡೆ ನೀಡಿದೆ. ಇಂತಹ ನಿರ್ಬಂಧಗಳಿಂದಾಗಿ ಸಂವಿಧಾನದ 15, 19 (1) ಹಾಗೂ 21ನೇ ವಿಧಿಯಡಿ ದೊರೆತ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗುತ್ತದೆ ಎಂದು ಅದು ಎಚ್ಚರಿಕೆ ನೀಡಿದೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು.

Ambulance

ರಾಜ್ಯ ಸರ್ಕಾರ ವಿಧಿಸಿರುವ ನಿರ್ಬಂಧ ಸೂಕ್ತವಲ್ಲ. ರೋಗಿಗಳನ್ನು ಕರೆತರುವ ಹೊರರಾಜ್ಯದ ಯಾವುದೇ ಆಂಬುಲೆನ್ಸ್‌ಗಳನ್ನು ತೆಲಂಗಾಣ ಪೊಲೀಸರು ತಡೆಯುವಂತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಇದೇ ವೇಳೆ ಲಾಕ್‌ಡೌನ್‌ ಅವಧಿಯಲ್ಲಿ ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸುವಂತೆ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಾಲಯ ರಾಜ್ಯದಲ್ಲಿ ಆಮ್ಲಜನಕ ವಿತರಣೆ ಹಾಗೂ ವೈದ್ಯಕೀಯ ಸಾಧನಗಳು, ಔಷಧಗಳ ಬೆಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ಕೇಳಿದೆ. ಮೇ 17ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ಕೊರೊನಾ ಹಿನ್ನೆಲೆ: ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ಕೂಡ ರದ್ದುಗಳಿಸುವಂತೆ ಕೋರಿ ಸುಪ್ರೀಂನಲ್ಲಿ ಅರ್ಜಿ

ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಗಳು ನಡೆಸಲು ಉದ್ದೇಶಿಸಿರುವ 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಮೂಲದ ವಕೀಲೆ ಮಮತಾ ಶರ್ಮ ಅವರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು ಮಂಡಳಿಗಳು ಅನಿರ್ದಿಷ್ಟಾವಧಿಯವರೆಗೆ 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿ ಅಧಿಸೂಚನೆ ಹೊರಡಿಸುವುದಕ್ಕೆ ತಡೆ ನೀಡಬೇಕೆಂದು ಕೋರಿದ್ದಾರೆ.

CBSE and Supreme Court

ಪ್ರಸಕ್ತ ಶೈಕ್ಷಣಿಕ ವರ್ಷದ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಮತ್ತು ಕಳೆದ ವರ್ಷ ಬಳಸಿದ ವಿಧಾನ ಉಪಯೋಗಿಸಿ ಅಂಕಗಳನ್ನು ಲೆಕ್ಕಹಾಕಬೇಕು. ಎರಡೂ ಪರೀಕ್ಷಾ ಮಂಡಳಿಗಳು ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವ ಮೂಲಕ ಕೋವಿಡ್‌ ತೀವ್ರತೆಯನ್ನು ಒಪ್ಪಿಕೊಂಡಿವೆ. ಆದರೆ 12ನೇ ತರಗತಿ ಪರೀಕ್ಷೆಗಳನ್ನು ಅನಿಯಂತ್ರಿತವಾಗಿ ಮುಂದೂಡುತ್ತಲೇ ಇದ್ದಾರೆ ಎಂದು ಪ್ರಮುಖವಾಗಿ ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಕೋವಿಡ್‌ ಹೊರತಾಗಿಯೂ ವಿಮಾನ ಸಿಬ್ಬಂದಿಯ ಮದ್ಯಸೇವನೆ ಪರೀಕ್ಷೆಗೆ ಸಂಪೂರ್ಣ ತಡೆ ನೀಡಲಾಗದು: ದೆಹಲಿ ಹೈಕೋರ್ಟ್‌

ವಿಮಾನ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್‌ಗಳಿಗೆ ಮದ್ಯಸೇವನೆ ಪರೀಕ್ಷೆ ನಡೆಸದೇಹೋದರೆ ಅದು ಪ್ರಯಾಣಿಕರ ಸುರಕ್ಷತೆ ಮೇಲೆ ಪರಿಣಾಮ ಬೀರುತ್ತದೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. ಕರ್ತವ್ಯಕ್ಕೆ ಹಾಜರಾಗುವ ಹನ್ನೆರಡು ಗಂಟೆಗಳ ಮೊದಲು ತಾವು ಮದ್ಯ ಸೇವಿಸಿಲ್ಲ ಎಂದು ಘೋಷಿಸುವುದನ್ನು ಸಿಬ್ಬಂದಿಗೆ ಕಡ್ಡಾಯಗೊಳಿಸಬೇಕು ಎಂದು ಕೂಡ ನ್ಯಾಯಾಲಯ ಸೂಚಿಸಿದೆ.

Airport

ಆ ಮೂಲಕ ಯಾದೃಚ್ಛಿಕ (Random) ವಿಧಾನದಲ್ಲಿ ಸಿಬ್ಬಂದಿಗೆ ಮದ್ಯಸೇವನೆ ತಪಾಸಣೆ ನಡೆಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಗೆ (ಡಿಜಿಸಿಎ) ಅವಕಾಶ ಮಾಡಿಕೊಟ್ಟ ನ್ಯಾಯಾಲಯ ಏರ್‌ ಟ್ರಾಫಿಕ್‌ ಕಂಟ್ರೋಲರ್ಸ್‌ ಗಿಲ್ಡ್‌ ಮತ್ತು ಇಂಡಿಯನ್‌ ಕಮರ್ಷಿಯಲ್ಲ್‌ ಪೈಲಟ್ಸ್‌ ಅಸೋಸಿಯೇಷನ್‌ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು. ಜೊತೆಗೆ ಸಿಸಿಟಿವಿ ಕಣ್ಗಾವಲಿನಲ್ಲಿಯೇ ಉಸಿರಾಟ ವಿಶ್ಲೇಷಣಾ ಪರೀಕ್ಷೆ ನಡೆಸುವಂತೆ ಕೂಡ ತಿಳಿಸಿತು.

ಜೆಎನ್‌ಯು ಒಳಗೆ ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ನಿರ್ದೇಶನ

ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ, ಅಧ್ಯಾಪಕರು ಹಾಗೂ ಅವರ ಕುಟುಂಬಸ್ಥರು ಸೇರಿದಂತೆ ದೆಹಲಿಯ ಜವಹಾರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 12,000 - 15,000 ಮಂದಿ ವಾಸಿಸುತ್ತಿದ್ದು ಅವರಿಗಾಗಿ ಪ್ರತ್ಯೇಕ ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸುವಂತೆ ದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ.

JNU campus

ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳುಳ್ಳ ಕೋವಿಡ್‌ ಆರೋಗ್ಯ ಕೇಂದ್ರ ಸ್ಥಾಪಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಸರ್ಕಾರ ಮತ್ತು ಸಂಬಂಧಪಟ್ಟವರಿಗೆ ಸೂಚಿಸಿದೆ. ಜೆಎನ್‌ಯು ವಿದ್ಯಾರ್ಥಿ ಸಂಘ, ಬೋಧಕರ ಸಂಘ ಹಾಗೂ ಇಬ್ಬರು ಜೆಎನ್‌ಯು ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ನಿರ್ದೇಶನ ನೀಡಲಾಗಿದೆ. ಮೇ 28ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.