ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ಮಾಹಿತಿ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ. ಈ ಕುರಿತ ಮಾಹಿತಿ.

Bar & Bench

ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ಕೊರೊನಾ ಪರಿಸ್ಥಿತಿಯ ಕುರಿತು ಇಂದು ನಡೆದ ಪ್ರಮುಖ ಪ್ರಕರಣಗಳ ವಿಚಾರಣೆಯ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

ಜೂನ್‌ನಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎನ್ನುತ್ತೀರಿ, 14 ತಿಂಗಳಿನಿಂದ ಮಾಡಿದ್ದೇನು? ಕೇಂದ್ರಕ್ಕೆ ಬಿಸಿಮುಟ್ಟಿಸಿದ ಮದ್ರಾಸ್‌ ಹೈಕೋರ್ಟ್‌

"ಬಹುತೇಕ ಒಂದು ವರ್ಷ ಕಾಲ ಲಾಕ್‌ಡೌನ್‌ ಮಾಡಿದ ಹೊರತಾಗಿಯೂ ಕೋವಿಡ್‌ ಬಿಕ್ಕಟ್ಟು ಭೀಕರವಾಗಿದೆ. ಇಂತಹ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಏಕೆ ತಣ್ಣಗೆ ವರ್ತಿಸುತ್ತಿದೆ" ಎಂದು ಮದ್ರಾಸ್‌ ಹೈಕೋರ್ಟ್‌ ಗುರುವಾರ ಅಸಮಾಧಾನ ವ್ಯಕ್ತಪಡಿಸಿತು. ತಮಿಳನಾಡು ಮತ್ತು ಪುದುಚೆರಿಯಲ್ಲಿ ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ನೇತೃತ್ವದ ಪೀಠ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿತು.

Madras High Court, Principal Bench

ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್. ಶಂಕರನಾರಾಯಣನ್ ಅವರ ಎಲ್ಲಾ ವಾದಗಳೂ ಜೂನ್‌ ನಂತರ ಪರಿಸ್ಥಿತಿ ಸುಧಾರಿಸಲಿದೆ ಎಂಬುದರ ಸುತ್ತಲೇ ಇರುವುದು ಏಕೆ ಎಂದು ಪ್ರಶ್ನಿಸಿದ ಅದು "ಈಗ ಕ್ರಮ ಕೈಗೊಳ್ಳುವುದು ಅಗತ್ಯ" ಎಂದು ಹೇಳಿತು. ಕೋವಿಡ್‌ ಹೆಚ್ಚಳವಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಸರ್ಕಾರವನ್ನು ಶಂಕರನಾರಾಯಣನ್‌ ಸಮರ್ಥಿಸಿಕೊಂಡಾಗ ನ್ಯಾಯಾಲಯ “ಕಳೆದ ಹದಿನಾಲ್ಕು ತಿಂಗಳುಗಳಿಂದ ಸರ್ಕಾರ ಏನು ಮಾಡುತ್ತಿತ್ತು" ಎಂದು ಕುಟುಕಿತು.

ಕೋವಿಡ್‌ ಲಸಿಕೆ ಪಡೆಯಲು ಆಧಾರ್‌ ಅಗತ್ಯವೇ? ಕೇಂದ್ರ, ಮಹಾರಾಷ್ಟ್ರ ಸರ್ಕಾರದಿಂದ ಸ್ಪಷ್ಟನೆ ಕೇಳಿದ ಬಾಂಬೆ ಹೈಕೋರ್ಟ್‌

ಕೋವಿಡ್‌ ಲಸಿಕೆ ಪಡೆಯಲು ಆಧಾರ್‌ ಅಗತ್ಯವೇ ಎಂಬ ಪ್ರಮುಖ ಪ್ರಶ್ನೆಯನ್ನು ಬಾಂಬೆ ಹೈಕೋರ್ಟ್‌ ಗುರುವಾರ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳನ್ನು ಕೇಳಿದೆ. ಇದು ರಾಷ್ಟ್ರೀಯ ವಿಚಾರವಾಗಿರುವುದರಿಂದ ಕೇಂದ್ರ ಸರ್ಕಾರ ಕೂಡ ಪ್ರತಿಕ್ರಿಯಿಸಬೇಕು ಎಂದು ಅದು ಸೂಚಿಸಿದೆ. ಕೋವಿಡ್‌ ಪೀಡಿತರಿಗೆ ಲಸಿಕೆ ಒದಗಿಸಲು ಅದರಲ್ಲಿಯೂ ವಿಶೇಷವಾಗಿ ಆಧಾರ್‌ ಇಲ್ಲದ ಖೈದಿಗಳಿಗೆ ಲಸಿಕೆ ನೀಡುವಾಗ ಗುರುತಿನ ಚೀಟಿ ಕಡ್ಡಾಯ ಮಾಡುವ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅದು ಸೂಚಿಸಿದೆ.

ಖೈದಿಗಳ ಕುರಿತು ಆಳವಾಗಿ ಕೆಲಸ ಮಾಡುತ್ತಿರುವ ಟಾಟಾ ಸಾಮಾಜಿಕ ಸೇವಾ ಸಂಸ್ಥೆಯ ಅಪರಾಧಶಾಸ್ತ್ರ ಮತ್ತು ನ್ಯಾಯ ಕೇಂದ್ರದ ಸದಸ್ಯ ಪ್ರೊ. ವಿಜಯ ರಾಘವನ್‌ ಅವರ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ "ಆರೋಪಿ ಆಧಾರ್‌ ಹೊಂದಿದ್ದಾನೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಅನ್ವಯಿಸಲಾಗುತ್ತಿರುವ ಬಯೋಮೆಟ್ರಿಕ್‌ ವಿಧಾನವನ್ನು ಅಳವಡಿಸಲು ಸಾಧ್ಯವೇ" ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿತು.

ಚಿಕಿತ್ಸಾಲಯಗಳು ಅರಗಿನ ಮನೆಗಳಾಗಬಾರದು: ಆಸ್ಪತ್ರೆ ಅಗ್ನಿ ಅವಗಢ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಂಡ ಬಾಂಬೆ ಹೈಕೋರ್ಟ್‌

ಮಹಾರಾಷ್ಟ್ರ ಆಸ್ಪತ್ರೆ ಅಗ್ನಿ ಅವಗಢಗಳ ಕುರಿತಾದ ಅರ್ಜಿಯನ್ನು ಗುರುವಾರ ವಿಚಾರಣೆಗೆ ಪರಿಗಣಿಸಿರುವ ಬಾಂಬೆ ಹೈಕೋರ್ಟ್‌ ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ವಿವರ ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ನೇತೃತ್ವದ ಪೀಠ ಪಾಂಡವರನ್ನು ದಹಿಸಲು ಕೌರವರು ಸೃಷ್ಟಿಸಿದ್ದ ಅರಗಿನ ಮನೆಯಂತೆ ಆಸ್ಪತ್ರೆಗಳು ಇರಬಾರದು. ಆದರೆ ಅವು ಅರಗಿನ ಮನೆಗಳಾಗಿವೆ ಎಂದು ಆತಂಕ ವ್ಯಕ್ತಪಡಿಸಿತು.

ಕೋವಿಡ್‌ ಬಿಕ್ಕಟ್ಟಿನ ಅಸಮರ್ಪಕ ನಿರ್ವಹಣೆ ಮತ್ತು ಕೋವಿಡ್‌ ರೋಗಿಗಳಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಭಾಂಡುಪ್, ವಿರಾರ್‌, ನಾಸಿಕ್‌ ಹಾಗೂ ಥಾಣೆಯಲ್ಲಿ ನಡೆದ ಅಗ್ನಿ ಅವಗಢಗಳ ಬಗ್ಗೆ ಪೀಠ ಪ್ರಸ್ತಾಪಿಸಿತು. ಆಗ ಅದನ್ನು ಒಪ್ಪಿಕೊಂಡ ಬೃಹನ್ಮುಂಬೈ ಮಹಾನಗರ ಪಾಲಿಕೆ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಅನಿಲ್‌ ಸಾಖರೆ “ಜನ ಚಿಕಿತ್ಸೆಗಾಗಿ ದಾಖಲಾಗಿ ಬೇರೊಂದು ಸಂಗತಿಯಿಂದ ಸಾವಿಗೀಡಾಗುತ್ತಿದ್ದಾರೆ” ಎಂದು ವಿಷಾದಿಸಿದರು. ಪ್ರಕರಣ ಮೇ 4ರಂದು ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

ರೋಗಿಗಳಿಗೆ ಸಹಾಯ ಮಾಡುವ ಬದಲು ಸೂಕ್ತ ವಿವರ ನೀಡದೆ ಸರ್ಕಾರದಿಂದ ತೊಡಕು: ಗುಜರಾತ್‌ ಹೈಕೋರ್ಟ್‌ ಕಿಡಿ

ಆಸ್ಪತ್ರೆ ಹಾಸಿಗೆಗಳ ಲಭ್ಯತೆ ಬಗ್ಗೆ ನಿಖರ ಮತ್ತು ತತ್‌ಕ್ಷಣದ ವಿವರ ನೀಡುವಂತೆ ಈ ಹಿಂದೆ ಸೂಚಿಸಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದ ಗುಜರಾತ್‌ ಹೈಕೋರ್ಟ್‌ “ಬಿಕ್ಕಟ್ಟಿನಲ್ಲಿರುವ ರೋಗಿಗಳಿಗೆ ಸಹಾಯ ಮಾಡುವ ಬದಲು ಸರಿಯಾದ ವಿವರ ನೀಡದೆ ಸರ್ಕಾರ ತೊಡಕಾಗಿ ಪರಿಣಮಿಸಿದೆ. ಇದಕ್ಕಿಂತ ಕೆಟ್ಟದ್ದು ಇನ್ನೊಂದಿಲ್ಲ” ಎಂದು ಖಾರವಾಗಿ ಪ್ರತಿಕ್ರಿಯಿಸಿತು.

ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಭಾರ್ಗವ್ ಕಾರಿಯ ಅವರಿದ್ದ ಪೀಠ ಆರ್‌ಟಿ-ಪಿಸಿಆರ್ ಪರೀಕ್ಷೆ, ರೆಮ್‌ಡಿಸಿವಿರ್ ಮತ್ತಿತರ ಔಷಧಿಗಳ ವಿತರಣೆ, ಸಂಗ್ರಹಣೆ ಮತ್ತು ಆಮ್ಲಜನಕ ಸಿಲಿಂಡರ್‌ ಹಂಚಿಕೆ, 108 ಆಂಬ್ಯುಲೆನ್ಸ್‌ ಲಭ್ಯತೆಗೆ ಸಂಬಂಧಿಸಿದ ನೀತಿ ಮತ್ತು ಭವಿಷ್ಯದ ಏರಿಳಿತಗಳಿಗೆ ಸಿದ್ಧವಾಗುವಂತೆಯೂ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಮೇ 4ರಂದು ನಡೆಯಲಿದೆ.

ಕೋವಿಡ್‌ ಲಸಿಕೆ ಬೆಲೆ ದೇಶದ ಮೇಲೆ ಪರಿಣಾಮ: ʼಸುಪ್ರೀಂʼ ಮೊರೆ ಹೋಗುವಂತೆ ಸಲಹೆ ನೀಡಿದ ಬಾಂಬೆ ಹೈಕೋರ್ಟ್‌

ದೇಶದೆಲ್ಲೆಡೆ ಕೋವಿಡ್‌ ಲಸಿಕೆಗಳಿಗೆ ರೂ 150ರಂತೆ ಒಂದೇ ಬೆಲೆ ನಿಗದಿಪಡಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ ಗುರುವಾರ ಲಸಿಕೆ ಬೆಲೆ ದೇಶದ ಮೇಲೆ ಪರಿಣಾಮ ಬೀರುವುದರಿಂದ ʼಸುಪ್ರೀಂʼ ಮೊರೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿತು. ಆದ್ಯತೆಯ ಮೇರೆಗೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠವನ್ನು ಅರ್ಜಿದಾರರಾದ ಮುಂಬೈ ಮೂಲದ ವಕೀಲ ಫಾಯ್ಝನ್‌ ಖಾನ್‌ ಮತ್ತಿತರ ವಕೀಲರು ಕೋರಿದ್ದರು.

ಕೋವಿಡ್‌ ಸಂಬಂಧಿತ ವಿಷಯಗಳನ್ನು ತೆಗೆದುಕೊಳ್ಳಲು ಹೈಕೋರ್ಟ್‌ಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂಬುದಾಗಿ ಅರ್ಜಿದಾರರು ತಿಳಿಸಿದಾಗ ನ್ಯಾ. ದತ್ತ ಅವರು "ದೇಶದೆಲ್ಲೆಡೆ ಪರಿಣಾಮ ಬೀರುವ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ ಪರಿಗಣಿಸಬೇಕಾಗುತ್ತದೆ" ಎಂದು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಹಿಂಪಡೆಯುವುದಾಗಿ ಅರ್ಜಿದಾರರು ಸೂಚಿಸಿದರು. ರಾಜ್ಯ ಕೇಂದ್ರ ಮಾತ್ರವಲ್ಲದೆ ಪ್ರಮುಖ ಲಸಿಕೆ ತಯಾರಕ ಕಂಪೆನಿಗಳಾದ ಸಿರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಹಾಗೂ ಭಾರತ್‌ ಬಯೋಟೆಕ್‌ ಕಂಪೆನಿಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳಲಾಗಿತ್ತು.