ಆಮ್ಲಜನಕ ಸಾಂದ್ರಕ ಅಗತ್ಯ ಸರಕು ಎಂದು ಘೋಷಿಸುವಂತೆ ಕೋರಿ ಮನೀಶ್ ಚೌಹಾಣ್ ಎಂಬುವವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ ಪ್ರಕರಣ ವಿಚಾರಣೆ ನಡೆಸಿತು.
ಅಗತ್ಯ ವಸ್ತು ವ್ಯಾಪ್ತಿಯಡಿ ಸಾಂದ್ರಕವನ್ನು ಇನ್ನೂ ತರದೇ ಇರುವುದರಿಂದ ಅಕ್ರಮ ಸಂಗ್ರಹಕಾರರು ಮತ್ತು ಕಾಳಸಂತೆಕೋರರಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಆಮ್ಲಜನಕ ಸಿಲಿಂಡರ್‌ಗಳನ್ನು ಒಂದು ಲಕ್ಷ ರೂಪಾಯಿಯವರೆಗೆ ಮಾರಾಟ ಮಾಡಲಾಗುತ್ತಿದ್ದು, ಹದಿನೈದು ಸಾವಿರ ರೂಪಾಯಿ ಆಸುಪಾಸಿನಲ್ಲಿ ದೊರೆಯುವ ಸಾಂದ್ರಕಗಳನ್ನು ಅರವತ್ತು ಸಾವಿರ ರೂಪಾಯಿಗಳವರೆಗೆ ಮಾರಾಟ ಮಾಡಲಗುತ್ತಿದೆ ಎಂದು ವಕೀಲ ಸಂಜೀವ್ ಸಾಗರ್ ನ್ಯಾಯಾಲಯಕ್ಕೆ ವಿವರಿಸಿದರು.
ವೀಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ವಿಚಾರಣೆ ನಡೆಯುತ್ತಿದ್ದಾಗ ಕಾಣಿಸಿಕೊಂಡ ತಾಂತ್ರಿಕ ತೊಂದರೆಯಿಂದಾಗಿ ಸುಪ್ರೀಂಕೋರ್ಟ್ ಇಪ್ಪತ್ತು ಅರ್ಜಿಗಳ ವಿಚಾರಣೆಯನ್ನು ಮುಂದೂಡಿತು. ಇದರಲ್ಲಿ ದೇಶದ ವಿವಿಧೆಡೆ ಕೋವಿಡ್ ನಿರ್ವಹಣೆ ಕುರಿತು ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಅರ್ಜಿಯೂ ಸೇರಿತ್ತು.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಹಾಗೂ ಎಸ್ ರವೀಂದ್ರ ಭಟ್ ಅವರಿದ್ದ ವಿಶೇಷ ಪೀಠ ಬೆಳಗ್ಗೆ ಹನ್ನೊಂದಕ್ಕೆ ವೀಡಿಯೊ ಕಲಾಪ ಆರಂಭಿಸಿದಾಗ ಸರ್ವರ್‌ನಲ್ಲಿ ದೋಷ ಮತ್ತಿತರ ತಾಂತ್ರಿಕ ತೊಂದರೆಗಳು ಸಂಭವಿಸಿದವು. ಬಳಿಕ ನ್ಯಾಯಾಲಯ ಅಫಿಡವಿಟ್‌ಗಳನ್ನು ಅಧ್ಯಯನ ಮಾಡಿ ಪ್ರಕರಣಗಳನ್ನು ಗುರುವಾರ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.
ರಾಷ್ಟ್ರ ರಾಜಧಾನಿ ದೆಹಲಿಯ ಖಾನ್ ಮಾರುಕಟ್ಟೆಯಿಂದ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡಿದ್ದ ಆಮ್ಲಜನಕ ಸಾಂದ್ರಕಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ನಗರದ ಉದ್ಯಮಿ ನವನೀತ್ ಕಲ್ರಾಗೆ ಮಧ್ಯಂತರ ಪರಿಹಾರ ನೀಡಲು ದೆಹಲಿಯ ನ್ಯಾಯಾಲಯವೊಂದು ನಿರಾಕರಿಸಿದೆ.
ಬಂಧನ ಪೂರ್ವ ಜಾಮೀನು ಕೋರಿ ಕಲ್ರಾ ಸಾಕೇತ್ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ರೀತಿ ಜಾಮೀನು ಪಡೆಯುವುದಕ್ಕೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸಿದರು. ಆಮದು ಮಾಡಿಕೊಂಡ ಆಕ್ಸಿಜನ್ ಸಾಂದ್ರಕಗಳನ್ನು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ನ್ಯಾಯಾಂಗ ಅಧಿಕಾರಿಗಳು ಮೃತಪಟ್ಟಿದ್ದರೆ ಅವರನ್ನು ಕರ್ತವ್ಯದ ನೆಲೆಯಲ್ಲಿ ಅವರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚಿಸಿದೆ.
ಮೃತ ನ್ಯಾಯಾಂಗ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ಸಾವನ್ನಪ್ಪಿದರೆ ಕ್ರಮವಾಗಿ 1 ಕೋಟಿ ರೂ. ಮತ್ತು 50 ಲಕ್ಷ ರೂ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಖುದ್ದು ಅರ್ಜಿದಾರರಾಗಿ ವಕೀಲ ತನ್ವೀರ್ ಅಹ್ಮದ್ ಮಿರ್ ಅವರು ಅರ್ಜಿ ಸಲ್ಲಿಸಿದ್ದು ಸೆಷನ್ಸ್ ನ್ಯಾಯಾಧೀಶರೊಬ್ಬರ ಪತ್ನಿ ಕೋವಿಡ್ ಚಿಕಿತ್ಸೆಗಾಗಿ ಇದುವರೆಗೆ ಎಂಟೂವರೆ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.