Oxygen 
ಸುದ್ದಿಗಳು

[ಕೋವಿಡ್‌ ಸುದ್ದಿ ಸಂಗ್ರಹ] ಕೊರೊನಾ ಸಮಸ್ಯೆಗಳ ಬಗ್ಗೆ ದೇಶದ ನ್ಯಾಯಾಲಯಗಳು ಇಂದು ನಿರ್ವಹಿಸಿದ ಪ್ರಕರಣಗಳ ವಿವರ

ಕೊರೊನಾ ಸೋಂಕು ಸೃಷ್ಟಿಸಿರುವ ಸಮಸ್ಯೆಗಳ ಕುರಿತು ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಭಿನ್ನ ಮನವಿಗಳು ಸಲ್ಲಿಕೆಯಾಗಿದ್ದು, ಕೆಲವು ಕಡೆ ನ್ಯಾಯಾಲಯಗಳೇ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿವೆ.

Bar & Bench

ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಸೋಂಕು ಸೃಷ್ಟಿಸಿರುವ ತಲ್ಲಣದಿಂದ ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಮಾಡುತ್ತಿವೆ. ವಿಚಾರಣೆಗಳನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಿವಿ ಹಿಂಡುವ ಕೆಲಸವನ್ನು ನಿರಂತರವಾಗಿ ನಡೆಸಿವೆ. ದೇಶದ ವಿವಿಧ ಹೈಕೋರ್ಟ್‌ಗಳು ಕೊರೊನಾ ಪರಿಸ್ಥಿತಿಯ ಕುರಿತು ಶುಕ್ರವಾರ ಏನೇನು ಹೇಳಿವೆ ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ.

ವಾಟ್ಸಾಪ್‌, ಈಮೇಲ್‌ ಮೂಲಕ ದೂರು ಸಲ್ಲಿಸಲು ಅಹವಾಲು ಪರಿಹಾರ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಕೋವಿಡ್‌ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ವಾಟ್ಸಾಪ್‌, ಈಮೇಲ್‌ ಮೂಲಕ ದೂರು ಸಲ್ಲಿಸಲು ಅಹವಾಲು ಪರಿಹಾರ ವ್ಯವಸ್ಥೆ ಮಾಡುವಂತ ಗುರುವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಕೋವಿಡ್‌ ಸಾಂಕ್ರಾಮಿಕತೆಯ ನಡುವೆಯೂ ರಾಜ್ಯದಲ್ಲಿ ದೊಡ್ಡಮಟ್ಟದ ಸಭೆ ಸಮಾರಂಭಗಳನ್ನು ನಡೆಸಲಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದ ಬಳಿಕ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಪೀಠ ಆದೇಶ ಹೊರಡಿಸಿದೆ.

“ರಾಜ್ಯದ ವಿವಿಧೆಡೆ ಕೋವಿಡ್‌ ಸಾಂಕ್ರಾಮಿಕತೆಯ ನಡುವೆಯೂ ನಿಯಮಗಳನ್ನು ಉಲ್ಲಂಘಿಸಿ ಸಭೆ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಹೀಗಾಗಿ ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಕಾಯಿದೆ 2020 ಅಡಿ ಅಹವಾಲು ಪರಿಹಾರ ವ್ಯವಸ್ಥೆ ಮಾಡುವ ಮೂಲಕ ಸಾರ್ವಜನಿಕರಿಗೆ ವಾಟ್ಸಾಪ್‌, ಇಮೇಲ್‌ ದೂರು ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಹೀಗೆ ಮಾಡುವುದರಿಂದ ಅಂಥ ದೂರುಗಳನ್ನು ರಾಜ್ಯಮಟ್ಟ ಮತ್ತು ನಗರ ಮಟ್ಟದ ಸಮಿತಿಗಳು ಪರಿಶೀಲಿಸಲಿವೆ” ಎಂದು ಆದೇಶದಲ್ಲಿ ಹೇಳಲಾಗಿದೆ. ಮೇಲೆ ಸೂಚಿಸಲಾದ ವ್ಯವಸ್ಥೆಯ ಕುರಿತು ಮೂರು ದಿನಗಳ ಅಧಿಸೂಚನೆ ಹೊರಡಿಸಬೇಕು. ಅದಕ್ಕೆ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ನಾವು ಒಂದೇ ಒಂದು ಮಾತು ಆಡಿಲ್ಲ ಮತ್ತು ಹೈಕೋರ್ಟ್‌ಗಳನ್ನು ನಿರ್ಬಂಧಿಸಿಲ್ಲ: ಸ್ವಯಂಪ್ರೇರಿತ ಪ್ರಕರಣ ಮುಂದೂಡಿದ ಸುಪ್ರೀಂ

ಕೋವಿಡ್‌ ಸಂಬಂಧಿ ಪ್ರಕರಣಗಳ ಕುರಿತಾಗಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ದುರುದ್ದೇಶಿತ ಶಂಕೆ ವ್ಯಕ್ತಪಡಿಸಿದ್ದಕ್ಕೆ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

ಕೋವಿಡ್‌ ಸೃಷ್ಟಿಸಿರುವ ಸಮಸ್ಯೆಗಳು ಮತ್ತು ಅದರ ನಿರ್ಹಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠವು ಮುಂದೂಡಿದೆ.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರನ್ನು ಉದ್ದೇಶಿಸಿದ ಪೀಠವು “ನೀವು ಆದೇಶವನ್ನು ಓದಿದ್ದೀರಿ. ಪ್ರಕರಣವನ್ನು ವರ್ಗಾಯಿಸುವ ಉದ್ದೇಶವೇನಾದರೂ ಅದರಲ್ಲಿ ಇತ್ತೆ? ಮಿಸ್ಟರ್‌ ಸಿಂಗ್‌ ನಮ್ಮನ್ನು ಆಲಿಸಿ. ಆದೇಶ ಓದುವುದಕ್ಕೂ ಮುನ್ನ ಆದೇಶದಲ್ಲಿ ಇಲ್ಲದಿರುವುದನ್ನು ಉಲ್ಲೇಖಿಸಿ ನಮ್ಮನ್ನು ಟೀಕಿಸಲಾಗುತ್ತಿದೆ. ಈ ರೀತಿಯಲ್ಲಿ ಸಂಸ್ಥೆಯನ್ನು ನಾಶಪಡಿಸಲಾಗುತ್ತದೆ” ಎಂದರು.

ಗುಜರಾತ್‌ ಹೈಕೋರ್ಟ್‌ ವಕೀಲರ ಪರಿಷತ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್‌ ದವೆ ಪರ ದೃಷ್ಟಿ ಬೀರಿದ ನ್ಯಾಯಮೂರ್ತಿ ರಾವ್‌ ಅವರು “ಆದೇಶವನ್ನು ಓದದೆ ನೀವು ನಮಗೆ ಉದ್ದೇಶಗಳನ್ನು ಸೂಚಿಸಿದ್ದೀರಿ” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ದವೆ ಅವರು “ಇಡೀ ದೇಶ ನೀವು ಪ್ರಕರಣಗಳನ್ನು ವರ್ಗಾಯಿಸುತ್ತೀರಿ ಎಂದು ಭಾವಿಸಿತ್ತು (ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ)”ಎಂದರು.

ಇದಕ್ಕೆ ನ್ಯಾ. ಭಟ್‌ ಅವರು “ನಾವು ಒಂದೇ ಒಂದು ಮಾತು ಮಾಡಿಲ್ಲ. ಅಲ್ಲದೇ ಹೈಕೋರ್ಟ್‌ಗಳನ್ನು ನಿರ್ಬಂಧಿಸಿಲ್ಲ. ಹೈಕೋರ್ಟ್‌ಗೆ ಹೋಗಿ ಅವರಿಗೆ ವರದಿ ಸಲ್ಲಿಸಿ ಎಂದು ನಾವು ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದೇವೆ. ಯಾವ ರೀತಿಯ ಗ್ರಹಿಕೆಯ ಬಗ್ಗೆ ನೀವು ಮಾತನಾಡುತ್ತಿದ್ದೀರಿ?” ಎಂದರು.

ನೋಡಲ್‌ ಏಜೆನ್ಸಿ ರಚಿಸುವ ಕುರಿತು ಸಿಂಗ್‌ ಸಲಹೆ ನೀಡಿದ ಹಿನ್ನೆಲೆಯಲ್ಲಿ ಏಪ್ರಿಲ್‌ 27ಕ್ಕೆ ವಿಚಾರಣೆ ಮುಂದೂಡಿದೆ. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಪ್ರತಿಕ್ರಿಯೆ ದಾಖಲಿಸಲಿದ್ದಾರೆ.

ಕೋವಿಡ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಸಂಬಂಧ ಸಹಾಯ ಕೋರದ ಸುಪ್ರೀಂ: “ನನಗೆ ಅಸಂತೋಷವಾಗಿಲ್ಲ” ಎಂದ ಎಜಿ

ಕೋವಿಡ್‌ ಸಾಂಕ್ರಾಮಿಕತೆ ಸೃಷ್ಟಿಸಿರುವ ಸಮಸ್ಯೆಗಳ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸುವ ಸಂಬಂಧ ಸುಪ್ರೀಂ ಕೋರ್ಟ್‌ ತಮ್ಮ ಸಲಹೆ ಸೂಚನೆ ಕೋರದಿರುವುದಕ್ಕೆ ತಮಗೆ ಅಸಂತೋಷವಾಗಿಲ್ಲ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ “ಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠವು ಕೋವಿಡ್‌ ಸಾಂಕ್ರಾಮಿಕತೆಯಿಂದ ಸೃಷ್ಟಿಯಾದ ಸಮಸ್ಯೆಗಳ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. “ಬೇರೆಯದರ ಬಗ್ಗೆ ನಾನು ಪ್ರತಿಕ್ರಿಯಿಸಲಾಗದು. ನಾನು ಅಸಂತೋಷವಾಗಿಲ್ಲ ಎಂದು ಹೇಳಬಹುದಷ್ಟೆ” ಎಂದಿದ್ದಾರೆ.

ಎನ್‌ಸಿಆರ್‌ನಲ್ಲಿ ಆಮ್ಲಜನಕ ಕೊರತೆ: ಆಮ್ಲಜನಕ ಪೂರೈಕೆಗಾಗಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಎರಡು ಆಸ್ಪತ್ರೆಗಳು

ಆಮ್ಲಜನಕ ಪೂರೈಕೆಗೆ ಸಂಬಂಧಿಸಿದಂತೆ ಬ್ರಹ್ಮ ಹೆಲ್ತ್‌ಕೇರ್‌ ಮತ್ತು ಬಾತ್ರಾ ಆಸ್ಪತ್ರೆಗಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿವೆ. ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಆಮ್ಲಜನಕ ಕೊರತೆ ಉಂಟಾಗಿದ್ದರಿಂದ ಇತರೆ ಆಸ್ಪತ್ರೆಗಳು ಹೈಕೋರ್ಟ್‌ ಮೆಟ್ಟಿಲೇರಿವೆ.

ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರೇಖಾ ಪಳ್ಳಿ ಅವರು ಪ್ರಕರಣದ ವಿಚಾರಣೆ ನಡೆಸಿದರು. ಬಾತ್ರಾ ಆಸ್ಪತ್ರೆಯನ್ನು ಸಿದ್ಧಾರ್ಥ್‌ ದವೆ ಪ್ರತಿನಿಧಿಸಿದ್ದರು. ಪ್ರಕರಣದ ಸಂಬಂಧ ಆಮ್ಲಜನಕ ಪೂರೈಕೆಗೆ ಮಾಡಲಾಗಿರುವ ವ್ಯವಸ್ಥೆ ಮತ್ತು ನೇಮಿಸಲಾಗಿರುವ ನೋಡಲ್‌ ಅಧಿಕಾರಿಗಳ ವಿವರವನ್ನು ದೆಹಲಿ ಸರ್ಕಾರವು ನ್ಯಾಯಾಲಯಕ್ಕೆ ನೀಡಿತು. ಈ ಮಾಹಿತಿ ಎಲ್ಲರಿಗೂ ಲಭ್ಯವಿರುವಂತೆ ಮಾಡಲು ಸೂಚಿಸಿದ ನ್ಯಾಯಾಲಯವು ಎಲ್ಲ ಆಸ್ಪತ್ರೆಗಳೂ ಮೊದಲಿಗೆ ಈ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿತು.