KPCC President D K Shivakumar, Working President Salem Ahmed
KPCC President D K Shivakumar, Working President Salem Ahmed 
ಸುದ್ದಿಗಳು

ಕೋವಿಡ್‌ ನಿಯಮ ಉಲ್ಲಂಘನೆ: ಡಿಕೆಶಿ, ಸಲೀಂ ಅಹ್ಮದ್‌ ಸೇರಿ ಆರು ಮಂದಿಗೆ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜಾಮೀನು ಮಂಜೂರು

Bar & Bench

ಮೇಕೆದಾಟು ಯೋಜನೆಗಾಗಿ ರಾಮನಗರದಿಂದ ಪಾದಯಾತ್ರೆ ಕೈಗೊಳ್ಳುವ ಮೂಲಕ ಆಗ ಜಾರಿಯಲ್ಲಿದ್ದ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌, ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌, ಮಾಜಿ ಸಚಿವ ಎಚ್‌ ಆಂಜನೇಯ ಸೇರಿದಂತೆ ಆರು ಮಂದಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದೆ.

ರಾಮನಗರದ ಗ್ರಾಮೀಣ ಠಾಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸೇರಿದಂತೆ 29 ಮಂದಿಯ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ಹಾಲಿ, ಮಾಜಿ ಶಾಸಕರು ಹಾಗೂ ಸಂಸದರಿಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶೆ ಪ್ರೀತ್‌ ಜೆ ಅವರು ನಡೆಸಿದರು.

ಆರೋಪಿಗಳಾದ ಡಿ ಕೆ ಶಿವಕುಮಾರ್‌, ಸಲೀಂ ಅಹ್ಮದ್‌, ಎಚ್‌ ಆಂಜನೇಯ, ಪರಮೇಶ್ವರ್‌ ನಾಯಕ್‌, ಕೆ ರಾಜು ಮತ್ತು ಪಾರ್ವತಮ್ಮ ಅವರ ಹಾಜರಾತಿಯನ್ನು ಪರಿಗಣಿಸಿದ ನ್ಯಾಯಾಲಯವು ತಲಾ 50 ಸಾವಿರ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಸಲ್ಲಿಸುವಂತೆ ಆರೋಪಿಗಳಿಗೆ ಆದೇಶಿಸಿ ಜಾಮೀನು ಮಂಜೂರು ಮಾಡಿದೆ. ಆರೋಪಿಗಳನ್ನು ಪ್ರತಿನಿಧಿಸಿರುವ ವಕೀಲರು ಸಿಆರ್‌ಪಿಸಿ ಸೆಕ್ಷನ್‌ 445ರ ಅನ್ವಯ ನಗದು ಠೇವಣಿ ಇಡಲು ಕೋರಿದ್ದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ತಲಾ 5 ಸಾವಿರ ರೂಪಾಯಿ ಠೇವಣಿ ಇಡಲು ಆರೋಪಿಗಳಿಗೆ ಆದೇಶಿಸಿತು

ಎರಡನೇ ಆರೋಪಿಯಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ ಕೆ ಸುರೇಶ್‌, ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಪುಟ್ಟರಂಗ ಶೆಟ್ಟಿ, ಶಾಸಕಿ ಅಂಜಲಿ ನಿಂಬಾಳ್ಕರ್‌, ವಿಧಾನ ಪರಿಷತ್‌ ಸದಸ್ಯ ಎಸ್‌ ರವಿ, ಮಾಜಿ ಶಾಸಕ ಬಿ ಆರ್‌ ಯಾವಗಲ್‌, ರಘುನಂದ ರಾಮಣ್ಣ, ಕುಸುಮಾ, ಇಕ್ಬಾಲ್‌ ಹುಸೇನ್‌, ಕೆ ಸಿ ವೀರೇಗೌಡ ಗೈರಾಗಿದ್ದರು. ಇವರುಗಳು ಹಾಜರಾತಿ ವಿನಾಯಿತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿತು.

ಮಾಜಿ ಸಂಸದ ಧ್ರುವನಾರಾಯಣ, ಮಾಜಿ ಸಚಿವರಾದ ಅಭಯ್‌ ಚಂದ್ರ ಜೈನ್‌, ಕಿಮ್ಮನೆ ರತ್ನಾಕರ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಕೆ ವೈ ನಂಜೇಗೌಡ, ಐವಾನ್‌ ಡಿಸೋಜಾ, ಡಾ. ರವೀಂದ್ರ, ಮೊಹಮ್ಮದ್‌ ನಲಪಾಡ್‌ ಮತ್ತು ಬಿ ಪಿ ಮಂಜೇಗೌಡ ವಿರುದ್ದ ಮತ್ತೆ ಜಾಮೀನುರಹಿತ ವಾರೆಂಟ್‌ ಹೊರಡಿಸಲಾಗಿದ್ದು, ಜುಲೈ 7ರಂದು ಹಾಜರಾಗಲು ನ್ಯಾಯಾಲಯ ಆದೇಶಿಸಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆಯ 5(3)ಎ, 143, 149, 290, 336, 141 ಅಡಿ ಪ್ರಕರಣ ದಾಖಲಿಸಲಾಗಿದೆ.