Karnataka HC, COVID-19
Karnataka HC, COVID-19 
ಸುದ್ದಿಗಳು

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ಶಾಸಕ ರಂಗನಾಥ್ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ತಡೆ

Bar & Bench

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಆರೋಪ ಸಂಬಂಧ ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ವಿರುದ್ಧದ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆ ನೀಡಿದೆ.

ಕುಣಿಗಲ್ ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಶಾಸಕ ರಂಗನಾಥ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಪೀಠ ನಡೆಸಿತು.

ಕುಣಿಗಲ್ ಪೊಲೀಸ್ ಠಾಣಾಧಿಕಾರಿ ಮತ್ತು ದೂರುದಾರ ಪಿ ಎಚ್ ಗೋವಿಂದರಾಜು ಅವರಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿದೆ.

ಕುಣಿಗಲ್ ಸಮೀಪದ ಹುಲಿದುರ್ಗ ಬೈಪಾಸ್ ರಸ್ತೆಯಲ್ಲಿ 2021ರ ಜೂನ್‌ 18ರಂದು ರಮೇಶ್ ಎಂಬುವರು ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ರಮೇಶ್‌ ಅವರ ಶವ ಪರೀಕ್ಷೆ ನಡೆಸಲು ಮತ್ತು ತಕ್ಷಣಕ್ಕೆ ಕೈಗೊಳ್ಳಬೇಕಾದ ಯಾವುದೇ ಕ್ರಮ ಕೈಗೊಳ್ಳದ ಕುಣಿಗಲ್ ಠಾಣಾಧಿಕಾರಿಯ ನಡೆ ವಿರೋಧಿಸಿ ಜೂನ್‌ 19ರಂದು ಮೃತರ ಕುಟುಂಬಸ್ಥರು, ಸಂಬಂಧಿಕರು ಮತ್ತು ಹಿತೈಷಿಗಳು ಪೊಲೀಸ್ ಠಾಣೆ ಮಂದೆ ಪ್ರತಿಭಟನೆ ನಡೆಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘನೆ ಕಂಡುಬಂದ ಕಾರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೆರೆದಿದ್ದವರಿಗೆ ಸೂಚಿಸಲಾಗಿತ್ತು. ಜತೆಗೆ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಸ್ಥಳದಿಂದ ತೆರಳುವಂತೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲಾಗಿತ್ತು. ಆದರೆ, ಗೋವಿಂದ ರಾಜು ಎಂಬುವರು ನನ್ನ ವಿರುದ್ಧವೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆರೋಪ ಕುರಿತು ಸುಳ್ಳು ದೂರು ನೀಡಿದ್ದಾರೆ. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದ್ದರಿಂದ ಪ್ರಕರಣ ಕುರಿತ ತಮ್ಮ ವಿರುದ್ಧ ಕುಣಿಗಲ್ ಜೆಎಂಎಫ್‌ಸಿ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಶಾಸಕ ರಂಗನಾಥ್ ಮನವಿ ಮಾಡಿದ್ದಾರೆ.