Congress Leaders And Supporters During Mekedatu padayatra In Karnataka
Congress Leaders And Supporters During Mekedatu padayatra In Karnataka 
ಸುದ್ದಿಗಳು

[ಮೇಕೆದಾಟು] ಕೋವಿಡ್‌ ನಿಯಮ ಉಲ್ಲಂಘನೆ; ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರ ವಿರುದ್ದದ ಆರೋಪ ಪಟ್ಟಿಗೆ ಹೈಕೋರ್ಟ್‌ ತಡೆ

Bar & Bench

ಮೇಕೆದಾಟು ಯೋಜನೆಗಾಗಿ ರಾಮನಗರದಿಂದ ಪಾದಯಾತ್ರೆ ಕೈಗೊಳ್ಳುವಾಗ ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಸೇರಿದಂತೆ ಹಲವರ ವಿರುದ್ಧ ಸಲ್ಲಿಸಿರುವ ಆರೋಪ ಪಟ್ಟಿ ಮತ್ತು ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸೇರಿದಂತೆ 13 ಮಂದಿ ಸಲ್ಲಿಸಿರುವ ಕ್ರಿಮಿನಲ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಕರ್ನಾಟಕ ಸಾಂಕ್ರಾಮಿಕ ರೋಗ ಕಾಯಿದೆ 2020ರ ಸೆಕ್ಷನ್‌ 3ರ ಅಡಿ ಕೋವಿಡ್‌ ಸಾಂಕ್ರಾಮಿಕ ರೋಗ ಎಂಬುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಬೇಕಿತ್ತು. ಆದರೆ, ಇದನ್ನು ಸರ್ಕಾರ ಮಾಡಿಲ್ಲ ಎಂದಿರುವ ಪೀಠವು ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ಮತ್ತು ಆರೋಪ ಪಟ್ಟಿಗೆ ತಡೆ ನೀಡಿ ಆದೇಶ ಮಾಡಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು “ಕರ್ನಾಟಕ ಸಾಂಕ್ರಾಮಿಕ ರೋಗ ಕಾಯಿದೆ 2020ರ ಸೆಕ್ಷನ್‌ 3ರ ಅಡಿ ಕೋವಿಡ್‌ ಸಾಂಕ್ರಾಮಿಕ ರೋಗ ಎಂಬುದಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಬೇಕು. ಆನಂತರ ನಿಯಂತ್ರಣ ಕ್ರಮಗಳನ್ನು ಜಾರಿ ಮಾಡಬೇಕು. ಆದರೆ, ಇದಾವುದನ್ನೂ ರಾಜ್ಯ ಸರ್ಕಾರ ಮಾಡಿಲ್ಲ. ಹೀಗಿರುವಾಗ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯಿದೆ ಸೆಕ್ಷನ್‌ 5(3)ಎ ಅನ್ನು ಜಾರಿ ಮಾಡಲಾಗದು. ಹಾಲಿ ಪ್ರಕರಣದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ 2005ರ ಅಡಿ ರಾಜ್ಯ ಸರ್ಕಾರವು 2021ರ ಜನವರಿ 4ರಂದು ಹೊರಡಿಸಿರುವ ಅಧಿಸೂಚನೆಯನ್ನು ಆಧರಿಸುತ್ತಿದೆ. ಹಾಲಿ ಪ್ರಕರಣಕ್ಕೆ ಅದು ಅನ್ವಯಿಸದು” ಎಂದು ಪೀಠದ ಗಮನಸೆಳೆದರು.

ಪ್ರಕರಣದ ಹಿನ್ನೆಲೆ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ 2022ರ ಜನವರಿ 9ರಿಂದ 10 ದಿನ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ರಾಮನಗರ ತಹಶೀಲ್ದಾರ್ ಜನವರಿ 13ರಂದು ರಾಮನಗರ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಫೆಬ್ರವರಿ 9ರಂದು ವಿಚಾರಣಾ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಜನಪ್ರತಿನಿಧಿಗಳಿಗೆ ಸಂಬಂಧಿಸಿದ್ದ ಪ್ರಕರಣವಾದ್ದರಿಂದ ಅದನ್ನು ಹಾಲಿ, ಮಾಜಿ ಶಾಸಕರು ಹಾಗೂ ಸಂಸದರಿಗೆ ಸಂಬಂಧಿಸಿದ ಮ್ಯಾಜಿಸ್ಟ್ರೇಟ್‌ ವಿಚಾರಣೆ ನಡೆಸಲು ಸ್ಥಾಪಿಸಲಾಗಿರುವ 42ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈಗ ಇಲ್ಲಿನ ವಿಚಾರಣೆ ಮತ್ತು ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ.

ರಾಮನಗರ ಗ್ರಾಮೀಣ ಠಾಣೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯಿದೆಯ 5(3)ಎ, 143, 149, 290, 336, 141 ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಡಿ ಕೆ ಸುರೇಶ್‌, ಮಾಜಿ ಸಂಸದ ಧ್ರುವನಾರಾಯಣ್, ಮಾಜಿ ಸಚಿವರಾದ ಟಿ ಬಿ ಜಯಚಂದ್ರ, ಅಭಯ್‌ ಚಂದ್ರ ಜೈನ್‌, ಶರಣಪ್ರಕಾಶ್‌ ಪಾಟೀಲ್‌, ಕಿಮ್ಮನೆ ರತ್ನಾಕರ್‌, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಪುಟ್ಟರಂಗ ಶೆಟ್ಟಿ, ಎಚ್‌ ಆಂಜನೇಯ, ಶಾಸಕಿ ಅಂಜಲಿ ನಿಂಬಾಳ್ಕರ್‌, ಪರಿಷತ್‌ ಸದಸ್ಯರಾದ ದಿನೇಶ್‌ ಗೂಳೀಗೌಡ, ಸಲೀಂ ಅಹ್ಮದ್‌, ರವಿ ಎಸ್‌, ಮುಖಂಡರಾದ ಕೆ ವೈ ನಂಜೇಗೌಡ, ಬಿ ಆರ್‌ ಯಾವಗಲ್‌, ಕೆ ರಾಜು, ಡಾ. ರವೀಂದ್ರ, ಕುಸುಮಾ, ಮೊಹಮ್ಮದ್‌ ನಲಪಾಡ್‌,‌ ಇಕ್ಬಾಲ್ ಹುಸೇನ್‌, ಕೆ ಸಿ ವೀರೇಗೌಡ, ಬಿ ಪಿ ಮಂಜೇಗೌಡ, ಪಾರ್ವತಮ್ಮ ಅವರನ್ನು ಆರೋಪಿಗಳನ್ನಾಗಿಸಲಾಗಿದೆ.