Maharashtra COVID, Bombay High Court

 
ಸುದ್ದಿಗಳು

ಕೋವಿಡ್: ಸಾರ್ವಜನಿಕ ಸಾರಿಗೆ ಬಳಕೆಗೆ ರಾಷ್ಟ್ರೀಯ ಯೋಜನೆ ರೂಪಿಸಲಾಗಿದೆಯೇ? ಕೇಂದ್ರಕ್ಕೆ ಬಾಂಬೆ ಹೈಕೋರ್ಟ್‌ ಪ್ರಶ್ನೆ

ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಲಸಿಕೆ ಪಡೆದಿರುವ ಅಥವಾ ಪಡೆಯದಿರುವ ವ್ಯಕ್ತಿಗಳನ್ನು ಪ್ರತ್ಯೇಕಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ ರಾಜ್ಯ ಸರ್ಕಾರದ ಪರ ವಕೀಲ.

Bar & Bench

ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಲಸಿಕೆ ಪಡೆದಿರುವವರು ಮತ್ತು ಲಸಿಕೆ ಪಡೆಯದೇ ಇರುವವರ ನಡುವಿನ ವ್ಯತ್ಯಾಸ ಗುರುತಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ ಅಡಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆಯನ್ನೇನಾದರೂ ರೂಪಿಸಿದೆಯೇ ಎಂದು ಕೇಂದ್ರ ಸರ್ಕಾರಕ್ಕೆ ಗುರುವಾರ ಬಾಂಬೆ ಹೈಕೋರ್ಟ್‌ ಪ್ರಶ್ನೆ ಹಾಕಿತು.

ಲಸಿಕೆ ಪಡೆಯದೇ ಇರುವವರು ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಂತಿಲ್ಲ ಮತ್ತು ಸರ್ಕಾರದ ಇತರೆ ಸೌಲಭ್ಯಗಳು ಅವರಿಗೆ ಸಿಗುವುದಿಲ್ಲ ಎಂದು ಆದೇಶಿಸಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಎಂ ಎಸ್‌ ಕಾರ್ನಿಕ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅನಿಲ್‌ ಅಂತೂರ್ಕರ್‌ ಅವರು “ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಂತಯ ಯಾವುದೇ ಯೋಜನೆಯ ಬಗ್ಗೆ ತಮಗೆ ತಿಳಿದಿಲ್ಲ” ಎಂದರು.

ಕೋವಿಡ್‌ ನಿಯಂತ್ರಿಸುವ ಸಂಬಂಧ ದೇಶಾದ್ಯಂತ ಯಾವ ಯೋಜನೆ ರೂಪಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.