Aadhaar and Covid vaccine 
ಸುದ್ದಿಗಳು

ಕೋವಿಡ್‌ ಲಸಿಕೆ ನೀಡಲು ಆಧಾರ್‌ಗೆ ಒತ್ತಾಯ ಪ್ರಶ್ನಿಸಿ ಮನವಿ ಸಲ್ಲಿಕೆ: ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ

ಗುರುತಿಗಾಗಿ ಆಧಾರ್‌ ಸಂಖ್ಯೆಯನ್ನೇ ನೀಡಿ ಎಂದು ಒತ್ತಾಯಿಸುತ್ತಿರುವುದು ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಜೀವಿಸುವ ಹಕ್ಕಿಗೆ ವಿರುದ್ಧ ಎಂದು ವಕೀಲ ಸಿದ್ಧಾರ್ಥ್‌ ಶಂಕರ್‌ ಶರ್ಮಾ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

Bar & Bench

ಕೋವಿಡ್‌ ಲಸಿಕೆ ಪಡೆಯಲು ಕೋವಿನ್‌ ಪೋರ್ಟಲ್‌ನಲ್ಲಿ ಆಧಾರ್‌ ದಾಖಲೆಯನ್ನೇ ನೀಡಬೇಕು ಎಂದು ಆಗ್ರಹಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಗುರುತಿಗಾಗಿ ಆಧಾರ್‌ ಸಂಖ್ಯೆಯನ್ನೇ ನೀಡಿ ಎಂದು ಒತ್ತಾಯಿಸುತ್ತಿರುವುದು ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಜೀವಿಸುವ ಹಕ್ಕಿಗೆ ವಿರುದ್ಧ ಎಂದು ವಕೀಲ ಸಿದ್ಧಾರ್ಥ್‌ಶಂಕರ್‌ ಶರ್ಮಾ ಸಲ್ಲಿಸಿರುವ ಮನವಿಯಲ್ಲಿ ವಿವರಿಸಲಾಗಿದೆ.

ಕೋವಿನ್‌ ಪೋರ್ಟಲ್‌ನಲ್ಲಿ ಏಳು ಗುರುತಿನ ಚೀಟಿ ದಾಖಲೆಗಳನ್ನು ಪಟ್ಟಿ ಮಾಡಲಾಗಿದೆ. ಈ ಪೈಕಿ ಯಾವುದನ್ನಾದರೂ ಬಳಸಿ ಲಸಿಕೆ ಪಡೆಯಬಹುದಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಅದಾಗ್ಯೂ, ಕೋವಿನ್‌ ಪೋರ್ಟಲ್‌ನಲ್ಲಿರುವ ಲಸಿಕಾ ಕೇಂದ್ರ/ಅಧಿಕಾರಿಗಳ ಪ್ರೊಫೈಲ್‌ ಪರಿಶೀಲನಾ ಪುಟದಲ್ಲಿ ಲಸಿಕೆ ನೀಡುವುದಕ್ಕೂ ಮುನ್ನ ಆಧಾರ್‌ ಮೂಲಕ ವ್ಯಕ್ತಿಯ ಗುರುತನ್ನು ಖಾತರಿಪಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.

ವ್ಯಕ್ತಿಯೊಬ್ಬ ಆಧಾರ್‌ ಹೊರತುಪಡಿಸಿ ಇತರೆ ದಾಖಲೆಗಳನ್ನು ಬಳಸಿ ಲಸಿಕೆಗಾಗಿ ಕೋವಿನ್‌ನಲ್ಲಿ ನೋಂದಾಯಿಸಿ, ಕಾಯ್ದಿರಿಸಿದರೂ ಲಸಿಕಾ ಕೇಂದ್ರದ ಅಧಿಕಾರಿಗಳು ಕೊವಿನ್ ಪೋರ್ಟಲ್‌ನಿಂದ ನೋಂದಾಯಿತ ವ್ಯಕ್ತಿಯನ್ನು ಪರಿಶೀಲಿಸಲು ಅಸಮರ್ಥರಾಗಿದ್ದಾರೆ ಎಂದು ವಿವರಿಸಲಾಗಿದೆ.

“ಕೋವಿಡ್‌ ಮಾರ್ಗಸೂಚಿಯ ಅನ್ವಯ ಕೋವಿನ್‌ ಪೋರ್ಟಲ್‌ನಲ್ಲಿ ಉಲ್ಲೇಖಿಸಿರುವ ಏಳು ಗುರುತಿನ ದಾಖಲೆಗಳ ಪೈಕಿ ಒಂದಾದ ಪಾಸ್‌ಪೋರ್ಟ್‌ ಬಳಸಿ ಅರ್ಜಿದಾರರಂತೆ ಹಲವರು ಲಸಿಕೆ ಪಡೆಯಲು ಕಾಯ್ದಿರಿಸಿದ್ದಾರೆ. ಹೀಗಿದ್ದೂ, ಆಧಾರ್‌ ಪ್ರಸ್ತುತಪಡಿಸಿಲ್ಲ ಎಂದು ಲಸಿಕಾ ಕೇಂದ್ರದಲ್ಲಿ ಅವರಿಗೆ ಲಸಿಕೆ ನೀಡಲಾಗಿಲ್ಲ” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠವು ಕೋವಿನ್‌ ಪೋರ್ಟಲ್‌ ಪ್ರಕಾರ ಇತರೆ ಗುರುತಿನ ದಾಖಲೆಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದೆ ಎಂದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮಾಯಾಂಕ್‌ ಕ್ಷೀರಸಾಗರ್‌ ಅವರು “ಏಳು ಗುರುತಿನ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಬಳಸಿ ಕೋವಿನ್‌ನಲ್ಲಿ ನೋಂದಾಯಿಸಬಹುದಾಗಿದ್ದರೂ ಲಸಿಕೆ ಪಡೆಯುವವರ ಪ್ರೊಫೈಲ್‌ ಕೋವಿನ್‌ಗೆ ಸಂಪರ್ಕವಾಗಿರುವುದರಿಂದ ಲಸಿಕೆ ಕೇಂದ್ರಗಳು ಆಧಾರ್ ಅನ್ನು ಒತ್ತಾಯಿಸುತ್ತವೆ” ಎಂದಿದ್ದಾರೆ. “ದಾಖಲೆಯಲ್ಲಿ ಎಲ್ಲವೂ ಸರಿಯಾಗಿದೆ. ಆದರೆ, ಅವರಿಗೆ ಆಧಾರ್‌ (ಲಸಿಕಾ ಕೇಂದ್ರದಲ್ಲಿ) ಬೇಕು” ಎಂದು ಅವರು ಹೇಳಿದರು. ಹೀಗಾಗಿ, ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯಿಸಲು ಆದೇಶಿಸಿದೆ.