TNM, BJP MLA L A Ravi Subramanya & Karnataka HC 
ಸುದ್ದಿಗಳು

'ದ ನ್ಯೂಸ್‌ ಮಿನಿಟ್‌ʼ ವಿರುದ್ಧ ಶಾಸಕ ರವಿ ಸುಬ್ರಹ್ಮಣ್ಯ ಹೂಡಿದ್ದ ಮಾನಹಾನಿ ದಾವೆಗೆ ಹೈಕೋರ್ಟ್‌ ತಡೆ

ಬಸವನಗುಡಿಯ ಅನುಗ್ರಹ ವಿಠ್ಠಲ ಆಸ್ಪತ್ರೆಯ ಸಿಬ್ಬಂದಿ ಕೋವಿಡ್‌ ಲಸಿಕೆಯೊಂದಕ್ಕೆ ₹900 ವೆಚ್ಚವಾಗುತ್ತದೆ. ಇದರಲ್ಲಿ ₹700 ಶಾಸಕ ರವಿಸುಬ್ರಹ್ಮಣ್ಯಗೆ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್‌ ಜೊತೆ ಮಾತನಾಡಿದ್ದ ಆಡಿಯೊ ವೈರಲ್‌ ಆಗಿತ್ತು.

Bar & Bench

ಕೋವಿಡ್‌ ಲಸಿಕೆ ಪಡೆಯಲು ಬಸವನಗುಡಿಯ ಬಿಜೆಪಿ ಶಾಸಕ ಎಲ್‌ ಎ ರವಿಸುಬ್ರಹ್ಮಣ್ಯಗೆ ಲಂಚ ನೀಡಬೇಕು ಎಂಬ ವೈರಲ್‌ ಆಡಿಯೊ ಆಧರಿಸಿ ಸುದ್ದಿ ಪ್ರಕಟಿಸಿದ್ದ ಆನ್‌ಲೈನ್‌ ಮಾಧ್ಯಮ 'ದ ನ್ಯೂಸ್‌ ಮಿನಿಟ್‌ʼ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ.

ದ ನ್ಯೂಸ್‌ ಮಿನಿಟ್‌ ಮಾತೃ ಸಂಸ್ಥೆ ಸ್ಪುಂಕ್ಲೇನ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಸಿವಿಲ್‌ ರಿವಿಷನ್‌ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಫಿರ್ಯಾದಿ ರವಿ ಸುಬ್ರಹ್ಮಣ್ಯ ವಿರುದ್ಧ ದ ನ್ಯೂಸ್‌ ಮಿನಿಟ್‌ ಪ್ರಕಟಿಸಿರುವ ಸುದ್ದಿಯಲ್ಲಿ ಮಾನಹಾನಿ ಹೇಳಿಕೆ ಪ್ರಕಟಿಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಮಾನಹಾನಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅರ್ಜಿದಾರರ ಕೋರಿಕೆಯಂತೆ ಮುಂದಿನ ವಿಚಾರಣೆವರೆಗೆ ಮಧ್ಯಂತರ ಆದೇಶ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ದ ನ್ಯೂಸ್‌ ಮಿನಿಟ್‌ ಪರ ವಕೀಲರು “ರವಿ ಸುಬ್ರಹ್ಮಣ್ಯ ಅವರ ಮಾನಹಾನಿ ದೂರಿನಲ್ಲಿ ತಮಗೆ ಮಾನಹಾನಿ ಮಾಡುವ ಪಿತೂರಿ ಅಡಗಿದೆ ಎಂದು ಹೇಳಲಾಗಿದೆ. ಆದರೆ, ಯಾವ ಮಾಧ್ಯಮದ ವರದಿಯಲ್ಲಿ ಮಾನಹಾನಿ ಅಂಶವಿದೆ ಎಂದು ತಿಳಿಸಿಲ್ಲ. ಮಾನಹಾನಿ ದೂರಿನಲ್ಲಿ ಮೇಲೆ ಹೇಳಿರುವ ಕಾರ್ಯಕ್ರಮದಲ್ಲಿ ಘನತೆಗೆ ಹಾನಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಲಾಗಿದೆ. ಆದರೆ, ಆ ಕಾರ್ಯಕ್ರಮ ಯಾವುದು ಎಂದು ಹೇಳಿಲ್ಲ” ಎಂದರು.

ಇದನ್ನು ಆಲಿಸಿದ ನ್ಯಾಯಾಲಯವು ವಿಚಾರಣಾಧೀನ ನ್ಯಾಯಾಲಯದಲ್ಲಿನ ಮಾನಹಾನಿ ಪ್ರಕರಣದ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು.

ಪ್ರಕರಣದ ಹಿನ್ನೆಲೆ: ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌ ಅವರು ಬಸವನಗುಡಿಯ ಅನುಗ್ರಹ ವಿಠ್ಠಲ ಆಸ್ಪತ್ರೆಯ ಸಿಬ್ಬಂದಿಯ ಜೊತೆ ಮಾತನಾಡುವಾಗ ಆಕೆಯು ಕೋವಿಡ್‌ ಲಸಿಕೆಯೊಂದಕ್ಕೆ 900 ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ 700 ರೂಪಾಯಿಗಳನ್ನು ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ನೀಡಬೇಕು. ಆಸ್ಪತ್ರಗೆ 200 ರೂಪಾಯಿ ಮಾತ್ರ ಉಳಿಯಲಿದೆ ಎಂಬ ಸಂಭಾಷಣೆಯನ್ನು ಒಳಗೊಂಡ ಆಡಿಯೊ ವೈರಲ್‌ ಆಗಿತ್ತು. ಆನಂತರ ವೆಂಕಟೇಶ್‌ ಅವರು ಕೋವಿಡ್‌ ಲಸಿಕೆಯನ್ನು ಲಾಭ ಮಾಡಿಕೊಳ್ಳುವ ದಂಧೆಯನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಇದನ್ನು ಆಧರಿಸಿ ದ ನ್ಯೂಸ್‌ ಮಿನಿಟ್‌, ದ ಇಂಡಿಯನ್‌ ಎಕ್ಸ್‌ಪ್ರೆಸ್‌, ವಿಜಯ ಕರ್ನಾಟಕ, ಟಿವಿ9 ಕನ್ನಡ, ಪವರ್‌ ಟಿವಿ ಸುದ್ದಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಮೇಲಿನ ಮಾಧ್ಯಮಗಳು ಮತ್ತು ವೆಂಕಟೇಶ್‌, ಅನುಗ್ರಹ ವಿಠ್ಠಲ ಆಸ್ಪತ್ರೆ, ಆಪ್‌ನ ದೆಹಲಿ ಘಟಕ ಮತ್ತು ಆಪ್‌ ನಾಯಕಿ ಆತಿಷಿ ಮರ್ಲೇನಾ ವಿರುದ್ಧ ಮೂರು ಕೋಟಿ ಪರಿಹಾರ ಕೋರಿ ಮಾನಹಾನಿ ಪ್ರಕರಣವನ್ನು ರವಿ ಸುಬ್ರಹ್ಮಣ್ಯ ಹೂಡಿದ್ದರು.

ಇದಕ್ಕೆ ತಡೆ ನೀಡುವಂತೆ 2023ರ ನವೆಂಬರ್‌ 23ರಂದು ದ ನ್ಯೂಸ್‌ ಮಿನಿಟ್‌ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ದ ನ್ಯೂಸ್‌ ಮಿನಿಟ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಕೀಸ್ಟೋನ್‌ ಪಾರ್ಟನರ್ಸ್‌ನ ವಕೀಲ ಪ್ರದೀಪ್‌ ನಾಯಕ್‌ ವಕಾಲತ್ತು ಹಾಕಿದ್ದಾರೆ.