ಸುದ್ದಿಗಳು

ಕೋವಿಡ್‌ಶೀಲ್ಡ್‌ ಲಸಿಕೆ ಎಲ್ಲರಿಗೂ ಸುರಕ್ಷಿತವಲ್ಲ: ಅಡ್ಡ ಪರಿಣಾಮದ ಕಾರಣಕ್ಕೆ ಐದು ಕೋಟಿ ಪರಿಹಾರ ಕೇಳಿ ಮನವಿ

ಲಸಿಕೆಯ ಅಡ್ಡಪರಿಣಾಮದ ಬಗ್ಗೆ ತಿಳಿಯಲು ತಮ್ಮನ್ನು ಸೆರಂ ಸಂಸ್ಥೆಯ ಯಾರೊಬ್ಬರೂ ಸಂಪರ್ಕಿಸಲಿಲ್ಲ. ತಮ್ಮನ್ನು ಒಂದೇ ಒಂದು ಬಾರಿ ಸೆರಂ ಸಂಸ್ಥೆಯ ವತಿಯಿಂದ ಸಂಪರ್ಕಿಸಲಾಗಿದ್ದು ಅದು ಸಹ ತಮ್ಮ ಆರೋಗ್ಯ ವಿಚಾರಿಸಲು ಅಲ್ಲ ಎಂದಿದ್ದಾರೆ ಅರ್ಜಿದಾರರು.

Bar & Bench

ಚೆನ್ನೈ ಮೂಲದ ಉದ್ಯಮಿಯೊಬ್ಬರು ಸೆರಂ ಇನ್ಸ್‌ಟಿಟ್ಯೂಟ್‌ನ ಕೋವಿಡ್‌ಶೀಲ್ಡ್‌ ಕೋವಿಡ್‌-೧೯ ಲಸಿಕೆಯನ್ನು ತೆಗೆದುಕೊಂಡ ನಂತರ ತಮಗೆ ಅಡ್ಡ ಪರಿಣಾಮಗಳು ಉಂಟಾದ ಕಾರಣದಿಂದಾಗಿ ಪರಿಹಾರವನ್ನು ಕೋರಿ ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ (ಆಸಿಫ್‌ ರಿಯಾಝ್‌ ವರ್ಸಸ್‌ ಭಾರತ ಸರ್ಕಾರ ಮತ್ತಿತರರು).

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಸಿಕೆಯನ್ನು ತೆಗೆದುಕೊಂಡ ನಂತರ ತಾವು ನರ ಸಂಬಂಧಿ ಸಮಸ್ಯೆಗೆ ತುತ್ತಾಗಿ ಭಿನ್ನ ಮಾನಸಿಕ ಸ್ಥಿತಿಗೆ ಈಡಾಗಿದ್ದಾಗಿ ಅರ್ಜಿದಾರರು ಹೇಳಿದ್ದಾರೆ. ಇದನ್ನು ‘ತೀವ್ರ ತರಹದ ಅಡ್ಡ ಪರಿಣಾಮ’ ಎಂದಿರುವ ಅವರು ತಾವು ಅನುಭವಿಸಿದ ಮಾನಸಿಕ ಕ್ಷೋಭೆ, ನೋವಿಗಾಗಿ ಸೆರಂ ಇನ್ಸ್ಟಿಟ್ಯೂಟ್‌ ತಮಗೆ ರೂ. 5 ಕೋಟಿ ನಷ್ಟ ಪರಿಹಾರವನ್ನು ನೀಡಲು ನಿರ್ದೇಶಿಸುವಂತೆ ಕೋರಿದ್ದಾರೆ.

ಲಸಿಕೆಯ ಅಡ್ಡಪರಿಣಾಮದ ಬಗ್ಗೆ ತಿಳಿಯಲು ತಮ್ಮನ್ನು ಸೆರಂ ಸಂಸ್ಥೆಯ ಯಾರೊಬ್ಬರೂ ಸಂಪರ್ಕಿಸಿರಲಿಲ್ಲ. ತಮ್ಮನ್ನು ಒಂದೇ ಬಾರಿ ಸೆರಂ ಸಂಸ್ಥೆಯ ವತಿಯಿಂದ ಸಂಪರ್ಕಿಸಲಾಗಿದ್ದು ಅದು ಸಹ ತಮ್ಮ ಆರೋಗ್ಯವನ್ನು ವಿಚಾರಿಸಲು ಅಲ್ಲ. ಬದಲಿಗೆ,ವಲಸಿಕೆಯ ಕುರಿತಾದ ತಮ್ಮ ಅನುಭವವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸದಂತೆ ಬೆದರಿಸುವ ಸಲುವಾಗಿ ಸಂಪರ್ಕಿಸಲಾಗಿತ್ತು. ತಮ್ಮ ವಿರುದ್ಧ ರೂ. 100 ಕೋಟಿ ಮಾನಹಾನಿ ಮೊಕದ್ದಮೆಯನ್ನು ಹೂಡುವುದಾಗಿ ಹೇಳಲಾಗಿತ್ತು ಎಂದಿದ್ದಾರೆ.

ಲಸಿಕೆ ಸಂಬಂಧಿಸಿದಂತೆ ಎಲ್ಲ ಭಾಗಿದಾರರು ಸಹ ಅಡ್ಡ ಪರಿಣಾಮಗಳನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಈ ಸಂಬಂಧ ಅನೈತಿಕವಾಗಿ, ಅವೈಜ್ಞಾನಿಕವಾಗಿ ತಳ್ಳಿಹಾಕುವ ಪ್ರಯತ್ನ ನಡೆಸಿದ್ದಾರೆ. ಲಸಿಕೆಯು ಎಲ್ಲರಿಗೂ ಸುರಕ್ಷಿತವಲ್ಲ. ತಾವು ಅನುಭವಿಸಿದ ಸಂಕಷ್ಟವನ್ನೇ ಇತರರೂ ಸಹ ಅನುಭವಿಸಬಾರದು ಎಂದು ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದಾರೆ.

ಭಾರತೀಯ ಔಷ‍ಧ ನಿಯಂತ್ರಕರಿಂದ ಪ್ರಕರಣದ ಸಂಬಂಧ ತನಿಖೆ ನಡೆಸಲು ರಚಿಸಲಾಗಿದ್ದ ತಜ್ಞರ ಸಮಿತಿಯು ತಮಗಾದ ಅಡ್ಡಪರಿಣಾಮವು ಲಸಿಕೆಗೆ ಸಂಬಂಧಿಸಿದ್ದಲ್ಲ ಎಂದಿರುವುದರ ಬಗ್ಗೆಯೂ ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಬದಿಯ ವಾದವನ್ನು ಮಂಡಿಸಲು ಯಾವುದೇ ಅವಕಾಶವನ್ನು ಸಮಿತಿಯು ನೀಡಿಲ್ಲ ಎನ್ನುವ ಅಂಶವನ್ನು ಅರ್ಜಿದಾರರು ಮನವಿಯಲ್ಲಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ತಜ್ಞ ಸಮಿತಿಯ ವರದಿಯ ಪ್ರತಿಯನ್ನು ತಮಗೆ ಒದಗಿಸುವಂತೆ ಕೋರಿರುವ ಮನವಿಗೂ ಸಹ ಈವರೆಗೆ ಸಕಾರಾತ್ಮಕ ಸ್ಪಂದನ ದೊರೆತಿಲ್ಲ ಎಂದಿದ್ದಾರೆ. ಲಸಿಕೆಯ ಪ್ರಯೋಗಕ್ಕೆ ಒಡ್ಡಿಕೊಂಡ ಸ್ವಯಂಪ್ರೇರಿತ ವ್ಯಕ್ತಿಯನ್ನು ಸಂಬಂಧವಿಲ್ಲದವರಂತೆ ಕಾಣುತ್ತಿರುವುದು ಅಚ್ಚರಿ ಹಾಗೂ ವಿಷಾದಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರ ಪ್ರಮುಖ ಕೋರಿಕೆಗಳು ಹೀಗಿವೆ:

  • ಪ್ರಕರಣದ ಸಂಬಂಧ ತನಿಖೆ ನಡೆಸಲು ಸೂಕ್ತ ತಜ್ಞ ಸಮಿತಿಯನ್ನು ರಚಿಸಬೇಕು.

  • ಅರ್ಜಿದಾರರು ಅನುಭವಿಸಿರುವ ಅಡ್ಡಪರಿಣಾಮಗಳು ಕೋವಿಡ್‌ಶೀಲ್ಡ್ ಕೋವಿಡ್‌ ಲಸಿಕೆಯಿಂದಾಗಿ ಉಂಟಾಗಿದ್ದು ಎಂದು ಘೋಷಿಸಬೇಕು

  • ಕೋವಿಡ್‌ಶೀಲ್ಡ್ ಸುರಕ್ಷಿತವಲ್ಲ ಎಂದು ಘೋಷಿಸಬೇಕು

  • ಸೆರಂ ಸಂಸ್ಥೆಯಿಂದ ಸಂತ್ರಸ್ತ ಅರ್ಜಿದಾರರಿಗೆ ರೂ.5 ಕೋಟಿ ಪರಿಹಾರ ನೀಡಬೇಕು

ಪ್ರಕರಣದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ನ್ಯಾಯಾಲಯವು ನೋಟಿಸ್‌ ಜಾರಿಗೊಳಿಸಿದೆ.