Cows  
ಸುದ್ದಿಗಳು

ಭಾರತೀಯ ಸಮಾಜದಲ್ಲಿ ಗೋವಿಗೆ ವಿಶೇಷ ಸ್ಥಾನವಿದ್ದು ಗೋಹತ್ಯೆಯು ಭಾವನೆಗಳಿಗೆ ಧಕ್ಕೆ ತರುತ್ತದೆ: ಪಂಜಾಬ್ ಹೈಕೋರ್ಟ್

ಹರಿಯಾಣ ಗೋವಂಶ ಸಂರಕ್ಷಣೆ, ಗೋಸಂವರ್ಧನ ಕಾಯಿದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿಯಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Bar & Bench

ಗೋವಿಗೆ ಭಾರತೀಯ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನವಿದ್ದು ಗೋಹತ್ಯೆಯ ಅಪರಾಧವು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಒಳಪದರಗಳಿಂದ ಕೂಡಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಆಸಿಫ್ ಮತ್ತು ಹರಿಯಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಗೋಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಸಂದೀಪ್ ಮೌದ್ಗಿಲ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಹರಿಯಾಣ ಗೋವಂಶ ಸಂರಕ್ಷಣೆ, ಗೋಸಂವರ್ಧನ ಕಾಯಿದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿಯಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಅಸ್ತಿತ್ವದಲ್ಲಿರುವ ಕಾನೂನನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸಿ ಸಮುದಾಯದ ಭಾವನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಗೋಹತ್ಯೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಅವರ ಮೇಲಿದೆ ಎಂದ ನ್ಯಾಯಾಲಯ ಆರೋಪಿಗೆ ಪರಿಹಾರ ನಿರಾಕರಿಸಿತು.

"ಕಾನೂನು ಪರಿಣಾಮಗಳ ಹೊರತಾಗಿ, ಗೋವಿಗೆ ಭಾರತೀಯ ಸಮಾಜದಲ್ಲಿ ವಿಶಿಷ್ಟ ಸ್ಥಾನವಿದ್ದು ಗೋಹತ್ಯೆಯ ಅಪರಾಧವು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಒಳಪದರಗಳಿಂದ ಕೂಡಿದೆ. ನಮ್ಮಂತಹ ಬಹುತ್ವ ಸಮಾಜದಲ್ಲಿ, ಕೆಲವು ಕೃತ್ಯಗಳು ಖಾಸಗಿಯಾಗಿದ್ದರೂ, ಗಮನಾರ್ಹ ಜನಸಂಖ್ಯೆಯ ಆಳವಾದ ನಂಬಿಕೆಗೆ ಘಾಸಿ ಉಂಟುಮಾಡಿದಾಗ ಸಾರ್ವಜನಿಕ ಶಾಂತಿಯ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂಬ ಅಂಶವನ್ನು ನ್ಯಾಯಾಲಯ ಮರೆಯಲಾಗದು" ಎಂದು  ಅದು ವಿವರಿಸಿತು.

ಆರೋಪಿಗಳು ಈ ಹಿಂದೆಯೂ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿದ್ದರು ಎಂದು ಎಂಬುದನ್ನು ಗಮನಿಸಿದ ನ್ಯಾಯಾಲಯ ಈ ಹಿಂದೆ ನೀಡಲಾಗಿದ್ದ ಜಾಮೀನನ್ನು ಗೌರವಿಸುವ ಬದಲು ದುರುಪಯೋಗಪಡಿಸಿಕೊಂಡಿರುವಂತಿದೆ ಎಂದಿತು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್ 482ರ ಅಡಿಯಲ್ಲಿ ಬಂಧನದಿಂದ ರಕ್ಷಣೆ ನೀಡಿದರೆ ಅದು, ಕಾನೂನು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ರೂಢಿಗತ ಅಪರಾಧಿಗಳಿಗೆ ಮುಕ್ತ ಆಹ್ವಾನವಲ್ಲ ಎಂದು ನ್ಯಾಯಾಲಯ  ಹೇಳಿತು.

"ನಿರೀಕ್ಷಣಾ ಜಾಮೀನು ಒಂದು ವಿವೇಚನಾ ಪರಿಹಾರವಾಗಿದ್ದು, ಅಮಾಯಕ ವ್ಯಕ್ತಿಗಳನ್ನು ಪ್ರೇರೇಪಿತ ಅಥವಾ ಅನಿಯಂತ್ರಿತ ಬಂಧನದಿಂದ ರಕ್ಷಿಸುವ ಉದ್ದೇಶ ಹೊಂದಿದೆ. ಪದೇ ಪದೇ ಕಾನೂನನ್ನು ಉಲ್ಲಂಘಿಸುವವರಿಗೆ ಶಿಕ್ಷೆಯಿಲ್ಲದೆ ಆಶ್ರಯ ನೀಡುವ ಉದ್ದೇಶ ಅದರದ್ದಲ್ಲ ಎಂದು ಅದು ಹೇಳಿದೆ.

ಜಾಮೀನಿನ ವಿಚಾರವಾಗಿ ನ್ಯಾಯಾಲಯಗಳು ನ್ಯಾಯ, ಸುವ್ಯವಸ್ಥೆ ಮತ್ತು ಸಾಮಾಜಿಕ ಸಮತೋಲನಕ್ಕೆ ಧಕ್ಕೆ ತರದೆ ಸ್ವಾತಂತ್ರ್ಯವನ್ನು ಕಾಪಾಡಲು ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕೆಂದು ನ್ಯಾಯಶಾಸ್ತ್ರ ಹೇಳುತ್ತದೆ ಎಂದು ಅದು ವಿವರಿಸಿದೆ.

ಆರೋಪಿ ರೂಢಿಗತ ಅಪರಾಧಿಯಾಗಿರುವುದರಿಂದ ಆತನ ವಿರುದ್ಧ ನೈತಿಕ ಅಧಃಪತನದ ಗಂಭೀರ ಆರೋಪಗಳಿವೆ ಎಂದು ನ್ಯಾಯಾಲಯ ತೀರ್ಪು ನೀಡಿತು. ಪ್ರಸ್ತುತ ಅರ್ಜಿ ವಜಾಗೊಳಿಸಲು ಅರ್ಹವಾಗಿದೆ ಎಂದ ಅದು ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತು.