Cattle transportation Image for representative purpose
ಸುದ್ದಿಗಳು

ಜಾನುವಾರುಗಳ ಅಕ್ರಮ ಸಾಗಣೆ ವಾಹನಗಳ ಮುಟ್ಟುಗೋಲು: ಮೇಲ್ಮನವಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದ ರಾಜಸ್ಥಾನ ಹೈಕೋರ್ಟ್

ವಾಹನ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು ಮತ್ತು ನೊಂದ ವ್ಯಕ್ತಿಗೆ ಮೇಲ್ಮನವಿ ಪರಿಹಾರ ರೂಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ರಾಜಸ್ಥಾನದ ಜಾನುವಾರು (ಹತ್ಯೆ ನಿಷೇಧ ಮತ್ತು ತಾತ್ಕಾಲಿಕ ವಲಸೆ ಅಥವಾ ರಫ್ತು ನಿಯಂತ್ರಣ) ಕಾಯಿದೆಯಡಿ ವಾಹನ  ಮುಟ್ಟುಗೋಲು ಹಾಕಿಕೊಳ್ಳುವ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ಹೈಕೋರ್ಟ್‌ನ ರಿಟ್ ನ್ಯಾಯವ್ಯಾಪ್ತಿಯ ಅಡಿಯಲ್ಲಿ ಮಾತ್ರ ಪ್ರಶ್ನಿಸಬಹುದೇ ವಿನಾ ಕ್ರಿಮಿನಲ್ ಮೊಕದ್ದಮೆಗಳ ಮೂಲಕ ಅಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ರಾಮೇಶ್ವರ ವಿರುದ್ಧ ರಾಜಸ್ಥಾನ ರಾಜ್ಯ] .

ಕ್ರಿಮಿನಲ್ ಕಾನೂನಿನ ಅಂತರ್ಗತ ನ್ಯಾಯವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಯ ನಿರ್ಧಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಅವರು ಹೇಳಿದರು.

ಅಂತಹ ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಯ ನಿರ್ಧಾರವನ್ನು ಪ್ರಶ್ನಿಸಲು ಮೇಲ್ಮನವಿ ಪರಿಹಾರ ರೂಪಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು.

ರಾಜಸ್ಥಾನದ ಜಾನುವಾರು ಕಾಯಿದೆಯಡಿ ದಾಖಲಾದ ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಬಿಡುಗಡೆ ಮಾಡುವ ಕುರಿತು ಜಿಲ್ಲಾಧಿಕಾರಿಗಳು ಕೈಗೊಂಡ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಅಂತಹ ವಾಹನಗಳ ಮುಟ್ಟುಗೋಲು, ವಿತರಣೆ, ವಿಲೇವಾರಿ ಅಥವಾ ಬಿಡುಗಡೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ (ಜಿಲ್ಲಾಧಿಕಾರಿ) ಕೈಗೊಳ್ಳುವ ಯಾವುದೇ ನಿರ್ಧಾರದ ವಿರುದ್ಧ ಶಾಸನಬದ್ಧ ಮೇಲ್ಮನವಿ ಅಥವಾ ಮರುಪರಿಶೀಲನೆಯ ಪರಿಹಾರ ಇದೆಯೇ ಎಂದು ವಿಚಾರಣೆ ವೇಳೆ ನ್ಯಾಯಾಲಯ ಸರ್ಕಾರವನ್ನು ಪ್ರಶ್ನಿಸಿತ್ತು.

ವಾದಗಳನ್ನು ಆಲಿಸಿ ಸಂಬಂಧಿತ ಕಾನೂನುಗಳನ್ನು ಪರಿಶೀಲಿಸಿದ ನಂತರ, ಜಿಲ್ಲಾಧಿಕಾರಿಗಳ ನಿರ್ಧಾರದ ವಿರುದ್ಧ ಮೇಲ್ಮನವಿ ಅಥವಾ ಮರು ಪರಿಶೀಲನೆ ಕುರಿತಂತೆ ಸ್ಪಷ್ಟ ನಿಯಮಾವಳಿ ಇಲ್ಲವಾದರೂ, ಅಂತಹ ಲೋಪ  ರಾಜ್ಯ ಶಾಸಕಾಂಗ ಪ್ರಜ್ಞಾಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲದೇ ಇರಬಹುದು ಎಂದು ಅದು ಅಭಿಪ್ರಾಯಪಟ್ಟಿತು.

ಜಿಲ್ಲಾಧಿಕಾರಿಗಳ ಆದೇಶವನ್ನು ವಿಭಾಗೀಯ ಆಯುಕ್ತರೆದುರು ಮೇಲ್ಮನವಿ ಮೂಲಕ ಪ್ರಶ್ನಿಸಲು ಅವಕಾಶ ದೊರೆಯಬೇಕು ಎಂದು ಅದು ಅಭಿಪ್ರಾಯಪಟ್ಟಿದೆ. ಆದರೆ, ಇದನ್ನು ಕಾಯಿದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಅದು ಒಪ್ಪಿಕೊಂಡಿದೆ.

ಈ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ನೊಂದವರು ಮೇಲ್ಮನವಿ ಪರಿಹಾರ ಪಡೆಯಲು ಅನುವಾಗುವಂತೆ ರಾಜ್ಯ ಶಾಸಕಾಂಗ ಚಿಂತನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.