ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟಿಗ ಎಸ್ ಶ್ರೀಶಾಂತ್ ಕೇರಳ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. [ಎಸ್ ಶ್ರೀಶಾಂತ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]
ಶುಕ್ರವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ಪಡೆಯುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿಪಿ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದರು. ಅಲ್ಲಿಯವರೆಗೆ ಕ್ರಿಕೆಟಿಗನನ್ನು ಬಂಧಿಸದಂತೆ ನ್ಯಾಯಮೂರ್ತಿ ನಿಯಾಸ್ ರಾಜ್ಯ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದ್ದಾರೆ.
ಕಣ್ಣೂರು ಟೌನ್ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಿ ಶ್ರೀಶಾಂತ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ದೂರುದಾರ ಮತ್ತು ಇಬ್ಬರು ವ್ಯಕ್ತಿಗಳ (ಸಹ-ಆರೋಪಿ) ನಡುವೆ ಘಟನೆಯು 2019ರಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ವಿಲ್ಲಾ ಯೋಜನೆಯಲ್ಲಿ ಹೂಡಿಕೆ ಮಾಡಲು ಆರೋಪಿಗಳು 2019ರಲ್ಲಿ ದೂರುದಾರರನ್ನು ಮನವೊಲಿಸಿದ್ದರು. ನಂತರ ಸಹ-ಆರೋಪಿಗಳು ಶ್ರೀಶಾಂತ್ ಮಾರ್ಗದರ್ಶನದಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಬಳಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಲಿದ್ದಾರೆ. ಈ ಅಕಾಡೆಮಿಯಲ್ಲಿ ತಮಗೆ ಪಾಲುದಾರಿಕೆ ನೀಡಲಾಗುತ್ತದೆ ಎಂದು ದೂರುದಾರರಿಗೆ ಭರವಸೆ ನೀಡಿದ್ದರು.
ಅದರಂತೆ ದೂರುದಾರರು 2019ರಲ್ಲಿ ಮೊದಲ ಮತ್ತು ಎರಡನೇ ಆರೋಪಿಗಳಿಗೆ ಹಣವನ್ನು ವರ್ಗಾಯಿಸಿದ್ದರು. ಆದರೆ, ಯೋಜನೆ ವಿಫಲವಾದಾಗ, ದೂರುದಾರರು ಮೊದಲ ಮತ್ತು ಎರಡನೇ ಆರೋಪಿಯ ಜೊತೆಗೆ ಶ್ರೀಶಾಂತ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದರು. ಈ ಹಿನ್ನೆಲೆಯಲ್ಲಿ ಶ್ರೀಶಾಂತ್ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಬದಲಿಗೆ ಕ್ರಿಕೆಟ್ ಅಕಾಡೆಮಿ ಆರಂಭಿಸಲು ಸಲಹೆ ಕೇಳಿದಾಗ ತಾನು ಉಚಿತವಾಗಿ ಕೆಲವು ಸಲಹೆಗಳನ್ನು ನೀಡಿದ್ದೆ. ಸಹ ಆರೋಪಿಗಳೊಂದಿಗೆ ತಾನು ಹಣಕಾಸಿನ ವ್ಯವಹಾರ ನಡೆಸಿಲ್ಲ. ದೂರುದಾರರಿಗೆ ಪತ್ರಗಳನ್ನು ನೀಡುವಾಗ ಸಹ ಆರೋಪಿಗಳು ತನ್ನ ಹೆಸರು ಬಳಸಿಕೊಳ್ಳುತ್ತಾರೆ ಎಂದು ತನಗೆ ಗೊತ್ತಿರಲಿಲ್ಲ. ತನ್ನ ಒಪ್ಪಿಗೆ ಇಲ್ಲದೆ ಹೀಗೆ ಮಾಡಲಾಗಿದೆ ಎಂದು ಶ್ರೀಶಾಂತ್ ವಾದಿಸಿದ್ದಾರೆ.