ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಛತ್ತೀಸ್‌ಗಢ ಮೂಲದ ವಕೀಲನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಸುಪ್ರೀಂ ಕೋರ್ಟ್ ಈಚೆಗೆ ರದ್ದುಗೊಳಿಸಿದೆ [ಪಿಕೆ ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ].
ಮಹಿಳೆ ಈಗಾಗಲೇ ವಿವಾಹಿತೆಯಾಗಿದ್ದು, ಅವಳ ವಿಚ್ಛೇದನ ಪ್ರಕರಣವು ಇನ್ನೂ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಇದೆ. ಆದ್ದರಿಂದ ಆರೋಪಿಯೊಂದಿಗೆ ವಿವಾಹವಾಗುವುದು ಕಾನೂನುಬದ್ಧವಾಗಿ ಅಸಾಧ್ಯವಾಗಿತ್ತು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.
ಮೇಲಿನ ಪರಿಸ್ಥಿತಿಯಲ್ಲಿ, ವಿವಾಹದ ಸುಳ್ಳು ಭರವಸೆ ನೀಡಿ ತನ್ನನ್ನು ಸಂಬಂಧಕ್ಕೆ ಆಕರ್ಷಿಸಲಾಯಿತು ಎಂದು ಆಕೆ ಹೇಳುವಂತಿಲ್ಲ ಎಂದು ಪೀಠ ತೀರ್ಪು ನೀಡಿದೆ.
ದೂರುದಾರೆ ತಾನು ವಿವಾಹಿತ ಮಹಿಳೆಯಾಗಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕ್ರಿಯೆಗಳು ಬಾಕಿಯಿರುವುದನ್ನು ಆರೋಪಿತ-ಅಪೀಲುದಾರನಿಗೆ ತಿಳಿಸಿದ್ದರೆಂಬುದು ಒಪ್ಪಿತ ವಾಸ್ತವ. ಹಾಗಾಗಿ ಇದೇ ಉಸಿರಿನಲ್ಲಿಯೇ, ವಿವಾಹದ ಸುಳ್ಳು ಭರವಸೆಯ ಮೇಲೆ ತನ್ನೊಂಧಿಗೆ ದೈಹಿಕ ಸಂಬಂಧ ಏರ್ಪಡಿಸಿಕೊಳ್ಳಲು ಆರೋಪಿತ-ಅಪೀಲುದಾರ ಪ್ರೇರೇಪಿಸಿದ್ದಾನೆ ಎಂದು ಅರ್ಜಿದಾರೆಗೆ ಆರೋಪಿಸಲು ಅವಕಾಶ ನೀಡಲಾಗದು. ಏಕೆಂದರೆ ಇವೆರಡೂ ಒಂದೇ ಸಂದರ್ಭದಲ್ಲಿ ಘಟಿಸಲು ಸಾಧ್ಯವಿಲ್ಲ. ಅವು ಪರಸ್ಪರ ವ್ಯತಿರಿಕ್ತ ಮತ್ತು ವಿರುದ್ಧ ಸ್ವರೂಪದ್ದಾಗಿವೆ ಎಂದು ನ್ಯಾಯಾಲಯ ವಿವರಿಸಿದೆ.
2022ರಲ್ಲಿ ಇಬ್ಬರ ನಡುವೆ ಪರಸ್ಪರ ಸಮಮತದಿಂದ ದೈಹಿಕ ಸಂಬಂಧ ಆರಂಭಗೊಂಡಿದ್ದು, ಅದು ಜನವರಿ 2025ರವರೆಗೆ ಮುಂದುವರಿದಿದೆ. ಈ ಹಿನ್ನೆಲೆ, ವಿವಾಹದ ಸುಳ್ಳು ಭರವಸೆ ನೀಡಿ ಲೈಂಗಿಕತೆಗೆ ಸಮ್ಮತಿ ಪಡೆಯಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ವೈವಾಹಿಕ ಭರವಸೆಯ ಆಧಾರದ ಮೇಲೆ ಅತ್ಯಾಚಾರ ಆರೋಪ ಸ್ಥಾಪಿಸಬೇಕಾದರೆ, ಆ ಭರವಸೆ ಆರಂಭದಿಂದಲೇ ಮಿಥ್ಯೆಯಾಗಿದ್ದು ಕೇವಲ ಲೈಂಗಿಕ ಸಂಪರ್ಕ ಬೆಳೆಸಲು ಅದನ್ನು ನೀಡಿರಬೇಕಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ನುಡಿದಿದೆ.
ಹಿಂದೂ ವಿವಾಹ ಕಾಯಿದೆ- 1955ರ ಪ್ರಕಾರ ಮೊದಲ ವಿವಾಹ ಜಾರಿಯಲ್ಲಿರುವ ಸಂದರ್ಭದಲ್ಲಿ ಎರಡನೇ ವಿವಾಹಕ್ಕೆ ಅವಕಾಶ ಇಲ್ಲ. ಆದ್ದರಿಂದ, ಈ ಪ್ರಕರಣದಲ್ಲಿ ವಿವಾಹದ ಭರವಸೆಯನ್ನೇ ನೆರವೇರಿಸಲು ಸಾಧ್ಯವಿರಲಿಲ್ಲ ಎಂದು ನ್ಯಾಯಾಲಯ ಹೇಳಿತು. ಇದೊಂದು ಆನಂತರದಲ್ಲಿ ವೈಮನಸ್ಯಕ್ಕೆ ತಿರುಗಿದ ಪರಸ್ಪರ ಸಮ್ಮತಿಯ ಸಂಬಂಧ ಎನ್ನಬಹುದು ಎಂದು ಅದು ಸ್ಪಷ್ಟಪಡಿಸಿತು.
ಮುರಿದುಬಿದ್ಧ ಸಂಬಂಧಗಳನ್ನು ಅತ್ಯಾಚಾರ ಪ್ರಕರಣಗಳಾಗಿ ಪರಿವರ್ತಿಸಲು ಕ್ರಿಮಿನಲ್ ಕಾನೂನನ್ನು ಬಳಸಬಾರದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ ನ್ಯಾಯಾಲಯ ಇಡೀ ಪ್ರಕರಣವನ್ನು ರದ್ದುಗೊಳಿಸಿತು.
[ತೀರ್ಪಿನ ಪ್ರತಿ]