Karnataka High Court 
ಸುದ್ದಿಗಳು

ಕೆಲಸದಿಂದ ತೆಗೆದ ಬಳಿಕ ಉದ್ಯೋಗದಾತರ ಮೇಲೆ ಒತ್ತಡ ಹೇರಲು ಉದ್ಯೋಗಿ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲಾಗದು: ಹೈಕೋರ್ಟ್

“ಸೂಕ್ತ ವೇದಿಕೆಯಲ್ಲಿ ಪರಿಹಾರ ಕೋರುವ ಬದಲಿಗೆ ಅರ್ಜಿದಾರರ ಮೇಲೆ ಒತ್ತಡ ಹೇರಲು ಕ್ರಿಮಿನಲ್‌ ಪ್ರಕ್ರಿಯೆ ನಡೆಸಲು ಅನುಮತಿಸಲಾಗದು. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಗೆ ಮತ್ತು ನ್ಯಾಯಭಂಗಕ್ಕೆ ಕಾರಣವಾಗಲಿದೆ” ಎಂದ ಪೀಠ.

Bar & Bench

ಸಂಸ್ಥೆಯಿಂದ ಉದ್ಯೋಗಿಯನ್ನು ತೆಗೆದ ಬಳಿಕ ಆತ ಉದ್ಯೋಗದಾತರ ವಿರುದ್ಧ ಕ್ರಿಮಿನಲ್‌ ನಂಬಿಕೆ ದ್ರೋಹ ಮತ್ತು ವಂಚನೆ ಪ್ರಕ್ರಿಯೆ ಆರಂಭಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಬೆಂಗಳೂರಿನ ಬಿ ಸಮೀವುಲ್ಲಾ ಅವರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಬೆಂಗಳೂರಿನ ವಿಚಾರಣಾಧೀನ ನ್ಯಾಯಾಲಯದಲ್ಲಿ ಅವರ ವಿರುದ್ಧ ಬಾಕಿ ಇದ್ದ ಪ್ರಕರಣವನ್ನು ವಜಾಗೊಳಿಸಿದೆ.

“ಕೆಲಸ ಇಲ್ಲದಿರುವುದು ಮತ್ತು ಸುದ್ದಿ ವಾಹಿನಿ ನಡೆಸಲು ಹಣದ ಕೊರತೆಯಿಂದಾಗಿ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ ಎಂದು ನೋಟಿಸ್‌ನಲ್ಲಿ ಸ್ಪಷ್ಟಪಡಿಸಲಾಗಿದೆ. ಆರ್ಥಿಕವಾಗಿ ಸಬಲವಾದರೆ ಮತ್ತೆ ಅವರನ್ನು ಕೆಲಸಕ್ಕೆ ಪುನರ್‌ ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಕಾನೂನು ಪ್ರಕ್ರಿಯೆ ಪಾಲಿಸದೇ ಕೆಲಸದಿಂದ ತೆಗೆದರೆ ಸೂಕ್ತ ನಿಬಂಧನೆಗಳ ಅಡಿ, ಸೂಕ್ತ ವೇದಿಕೆಯಲ್ಲಿ ಪ್ರಕ್ರಿಯೆಯನ್ನು ದೂರುದಾರರು ಆರಂಭಿಸಬಹುದಾಗಿದೆ. ಆದರೆ, ಹಾಲಿ ಪ್ರಕರಣದಲ್ಲಿ ಇದಕ್ಕೆ ಬದಲಾಗಿ, ಕ್ರಿಮಿನಲ್‌ ಕಾನೂನಿಗೆ ಚಾಲನೆ ನೀಡಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಸೂಕ್ತ ವೇದಿಕೆಯಲ್ಲಿ ಪರಿಹಾರ ಕೋರುವ ಬದಲಿಗೆ ಅರ್ಜಿದಾರರ ಮೇಲೆ ಒತ್ತಡ ಹೇರಲು ಪರ್ಯಾಯ ವಿಧಾನವಾಗಿ ಕ್ರಿಮಿನಲ್‌ ಪ್ರಕ್ರಿಯೆ ನಡೆಸಲು ಅನುಮತಿಸಲಾಗದು. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆಗೆ ಮತ್ತು ನ್ಯಾಯಭಂಗಕ್ಕೆ ಕಾರಣವಾಗಲಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಜಿ ಎಸ್‌ ಮುತ್ತುರಾಜ್‌ ಎಂಬವರು ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 420, 406, 506, 149ರ ಅಡಿ ಪ್ರಕರಣ ದಾಖಲಿಸಿದ್ದರು. ಟಿಟಿಸಿ ನ್ಯೂಸ್‌ ಚಾನೆಲ್‌ ಉದ್ಯೋಗಿಯಾಗಿದ್ದ ಮುತ್ತುರಾಜ್‌ ಅವರನ್ನು 2018ರಲ್ಲಿ ಆರ್ಥಿಕ ತೊಂದರೆಯ ಹಿನ್ನೆಲೆಯಲ್ಲಿ ಸಂಸ್ಥೆಯ ಇತರ ನೌಕರರ ಜೊತೆ ತೆಗೆಯಲಾಗಿತ್ತು. ಸೇವೆಯಿಂದ ತೆಗೆದ ಬಳಿಕ ಮುತ್ತುರಾಜ್‌ ಅವರು ಅರ್ಜಿದಾರರ ವಿರುದ್ಧ ಕಾನೂನು ಪ್ರಕ್ರಿಯೆ ಪಾಲಿಸದೇ ವಜಾ ಮಾಡಲಾಗಿದೆ ಎಂದು ಆರೋಪಿಸಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.