ಇಲಾಖಾ ವಿಚಾರಣೆಗಳಲ್ಲಿ ದೋಷಮುಕ್ತರಾಗಿರುವುದರಿಂದ ಅದೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧದ ಕ್ರಿಮಿನಲ್ ವಿಚಾರಣೆ ತನ್ನಿಂತಾನೇ ಕೊನೆಗೊಳ್ಳದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಸಾಜನ್ ಟಿ ಸನ್ನಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]
ಇಲಾಖಾ ವಿಚಾರಣೆಗಳಲ್ಲಿ ದೋಷಮುಕ್ತಗೊಳಿಸುವಿಕೆ ಮತ್ತು ಕ್ರಿಮಿನಲ್ ಪ್ರಾಸಿಕ್ಯೂಷನ್ ಮೇಲೆ ಆ ದೋಷಮುಕ್ತಗೊಳಿಸುವಿಕೆಯ ಪರಿಣಾಮದ ಬಗ್ಗೆ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಪರಿಶೀಲಿಸಿದ ನ್ಯಾ. ಕೌಸರ್ ಎಡಪ್ಪಾಗತ್ ಅವರು ವ್ಯತಿರಿಕ್ತ ತೀರ್ಪುಗಳು ಬಂದಿರುವುದನ್ನು ಗಮನಿಸಿದರು.
ಇಲಾಖಾ ವಿಚಾರಣೆಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದರೂ ಆತನ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದಾಗದು ಎಂದು ದೆಹಲಿ ಸರ್ಕಾರ ಮತ್ತು ಅಜಯ್ ಕುಮಾರ್ ತ್ಯಾಗಿ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿದೆ. ಆದರೆ ಆಶೂ ಸುರೇಂದ್ರನಾಥ್ ತಿವಾರಿ ಮತ್ತು ಸಿಬಿಐ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಮತ್ತೊಂದು ತ್ರಿಸದಸ್ಯ ಪೀಠ ʼಆರೋಪ ಮತ್ತು ಪ್ರಾಸಿಕ್ಯೂಷನ್ ಪ್ರಕ್ರಿಯೆ ಒಂದೇ ಆಗಿದ್ದರೆ ಮತ್ತು ತೀರ್ಪು ನೀಡುವಾಗ ಸಂಬಂಧಪಟ್ಟ ವ್ಯಕ್ತಿಯನ್ನು ದೋಷಮುಕ್ತಗೊಳಿಸುವುದು ಅರ್ಹತೆಯ ಮೇಲಾಗಿದ್ದರೆ, ಸಂಬಂಧಪಟ್ಟ ವ್ಯಕ್ತಿಯ ವಿಚಾರಣೆಯು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗವಾಗುತ್ತದೆʼ ಎಂದಿರುವುದನ್ನು ನ್ಯಾ, ಕೌಸರ್ ವಿವರಿಸಿದರು.
ಇದು ಕ್ರಿಮಿನಲ್ ವಿಚಾರಣೆ ಮೇಲೆ ನ್ಯಾಯನಿರ್ಣಯ ಪ್ರಕ್ರಿಯೆಗಳ ಪರಿಣಾಮಗಳ ಕುರಿತು ಹೇಳುತ್ತದೆಯೇ ವಿನಾ ಕ್ರಿಮಿನಲ್ ವಿಚಾರಣೆಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಗಳಲ್ಲಿ ದೋಷಮುಕ್ತಗೊಳಿಸುವುದರ ಪರಿಣಾಮದ ಬಗ್ಗೆ ಹೇಳದು ಎಂದು ಅವರು ಹೇಳಿದರು.
"ಈ ಕಾರಣಗಳಿಗಾಗಿ, ಇಲಾಖಾ ವಿಚಾರಣೆಗಳಲ್ಲಿ ಒಂದೇ ರೀತಿಯ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಮುಕ್ತಗೊಳಿಸಲಾಗಿದ್ದರೂ, ಆರೋಪಿಯ ವಿರುದ್ಧ ಕ್ರಿಮಿನಲ್ ವಿಚಾರಣೆ ಹೂಡಬಹುದು ಅಥವಾ ಮುಂದುವರಿಸಬಹುದು " ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಇಲಾಖಾ ವಿಚಾರಣೆಗಳಲ್ಲಿ ತಮ್ಮನ್ನು ಖುಲಾಸೆಗೊಳಿಸಿದ್ದರಿಂದ 2016ರ ಪ್ರಕರಣದ ಅಂತಿಮ ವರದಿ ಮತ್ತು ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸರ್ಕಾರಿ ನೌಕರರೊಬ್ಬರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ತೀರ್ಪು ನೀಡಲಾಗಿದೆ.
ಆದರೂ, ಅರ್ಜಿದಾರರ ವಿರುದ್ಧದ ಆರೋಪಗಳನ್ನು ಪರಿಶೀಲಿಸಿದ ನ್ಯಾಯಾಲಯ ಅವರ ವಿರುದ್ಧ ಭ್ರಷ್ಟಾಚಾರ ಅಥವಾ ವೈಯಕ್ತಿಕ ಲಾಭದ ಯಾವುದೇ ಪುರಾವೆ ಇಲ್ಲದಿರುವುದರಿಂದ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 13 (1) (ಡಿ) ಅಡಿಯಲ್ಲಿ ಆರೋಪಗಳು ಕ್ರಿಮಿನಲ್ ದುಷ್ಕೃತ್ಯವನ್ನು ಒಳಗೊಂಡಿಲ್ಲ. ಜೊತೆಗೆ ಐಪಿಸಿ ಸೆಕ್ಷನ್ 120 ಬಿ ಮತ್ತು 420 ರ ಅಡಿಯ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ತೀರ್ಮಾನಿಸಿತು.
ಪರಿಣಾಮ, 2016ರ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಅಂತಿಮ ವರದಿ ಮತ್ತು ಮುಂದಿನ ಎಲ್ಲಾ ಪ್ರಕ್ರಿಯೆಗಳನ್ನು ಹೈಕೋರ್ಟ್ ರದ್ದುಗೊಳಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]