ಸೋಮವಾರದಿಂದ ಆರಂಭವಾಗಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಲಾದ ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ- 2021ಕ್ಕೆ ಸಂಬಂಧಿಸಿದ ಮಾಹಿತಿ ಒದಗಿಸುವಂತೆ ಬಾಂಬೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ದೇಶದಲ್ಲಿ ಕ್ರಿಪ್ಟೋಕರೆನ್ಸಿಯ ಬಳಕೆ ಮತ್ತು ವ್ಯಾಪಾರ ನಿಯಂತ್ರಿಸುವ ಕಾಯಿದೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ(ಪಿಐಎಲ್) ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ನಿಕ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರಾದ ವಕೀಲ ಆದಿತ್ಯ ಕದಮ್ ಅವರು ದೇಶದಲ್ಲಿ ಕ್ರಿಪ್ಟೋಕರೆನ್ಸಿಯ ಅನಿಯಂತ್ರಿತ ವ್ಯವಹಾರವನ್ನು ಎತ್ತಿ ತೋರಿಸಿದರು. ಇದೇ ವೇಳೆ ವಕೀಲರಾದ ಡಿ ಪಿ ಸಿಂಗ್ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
2018ರಲ್ಲಿ ಕೂಡ ಮಸೂದೆ ಅಂಗೀಕರಿಸುವ ಕುರಿತು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕದಮ್ ಗಮನ ಸೆಳೆದರು. ಇತ್ತ ನ್ಯಾಯಾಲಯ "ಈ ಅಂಶವನ್ನು ನಂತರ ಪರಿಗಣಿಸಬಹುದು. ಕೇಂದ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಅರ್ಜಿದಾರರ ಆರೋಪ ಸರಿಯಲ್ಲ" ಎಂದು ಹೇಳಿತು. ಪ್ರಕರಣವನ್ನು ಜನವರಿ 17, 2022ಕ್ಕೆ ಮುಂದೂಡಲಾಗಿದೆ.