ಸುದ್ದಿಗಳು

ಭಗವಾನ್ ರಾಮ, ಕೃಷ್ಣರನ್ನು ಗೌರವಿಸುವಂತಹ ಕಾನೂನು ಜಾರಿಗೊಳಿಸಲು ಸಂಸತ್‌ಗೆ ಅಲಾಹಾಬಾದ್ ಹೈಕೋರ್ಟ್ ಒತ್ತಾಯ

Bar & Bench

ಭಗವಾನ್ ರಾಮ, ಶ್ರೀಕೃಷ್ಣ, ರಾಮಾಯಣ, ಭಗವದ್ಗೀತೆ ಹಾಗೂ ಅದರ ಕರ್ತೃಗಳಾದ ಮಹರ್ಷಿ ವಾಲ್ಮೀಕಿ ಮತ್ತು ಮಹರ್ಷಿ ವೇದ ವ್ಯಾಸರು ದೇಶದ ಪರಂಪರೆಯ ಭಾಗವಾಗಿದ್ದು ಸಂಸತ್ತಿನಲ್ಲಿ ಕಾನೂನನ್ನು ಜಾರಿಗೆ ತರುವ ಮೂಲಕ ರಾಷ್ಟ್ರೀಯ ಗೌರವ ನೀಡಬೇಕಾಗಿದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. (ಆಕಾಶ್ ಜಾತವ್ ಅಲಿಯಾಸ್ ಸೂರ್ಯ ಪ್ರಕಾಶ್ ಮತ್ತು ಉ.ಪ್ರ ಸರ್ಕಾರ ನಡುವಣ ಪ್ರಕರಣ).

ಫೇಸ್‌ಬುಕ್‌ನಲ್ಲಿ ಭಗವಾನ್ ರಾಮ ಮತ್ತು ಶ್ರೀಕೃಷ್ಣನ ವಿರುದ್ಧ ಅಶ್ಲೀಲ ಟೀಕೆ ಮಾಡಿದ ಆರೋಪ ಎದುರಿಸುತ್ತಿದ್ದ ಸೂರ್ಯ ಪ್ರಕಾಶ್ ಎಂಬುವವರಿಗೆ ಜಾಮೀನು ನೀಡುವಾಗ ನ್ಯಾ. ಶೇಖರ್‌ ಯಾದವ್‌ ನೇತೃತ್ವದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

“ಭಾರತದ ಮಹಾನ್ ಪುರುಷರಾದ ಭಗವಾನ್ ಶ್ರೀ ರಾಮ ಮತ್ತು ಶ್ರೀ ಕೃಷ್ಣರ ಬಗ್ಗೆ ಆರೋಪಿ / ಅರ್ಜಿದಾರರು ಮಾಡಿದ ಅಶ್ಲೀಲ ಟೀಕೆಗಳಿಂದ ಈ ದೇಶದ ಬಹುಪಾಲು ಜನರ ನಂಬಿಕೆಗೆ ಹಾನಿಯಾಗಿದ್ದು ಇದು ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ಹಾಳು ಮಾಡುತ್ತದೆ . ಅಮಾಯಕ ಜನರು ಇದರ ಭಾರ ಹೊರಬೇಕಾಗುತ್ತದೆ "ಎಂದು ಅದು ಹೇಳಿತು.

ರಾಮ ಜನ್ಮಭೂಮಿ ವಿವಾದದಲ್ಲಿ ಸುಪ್ರೀಂಕೋರ್ಟ್‌ನೀಡಿದ ತೀರ್ಪನ್ನು ಉಲ್ಲೇಖಿಸಿ ಇದು "ರಾಮ"ನನ್ನು ನಂಬುವವರ ಪರವಾಗಿದೆ ಎಂದು ಪ್ರಕಾಶ್‌ಗೆ ಜಾಮೀನು ನೀಡುವಾಗ, ನ್ಯಾಯಾಲಯ ಹೇಳಿತು.

ರಾಮ ಈ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ನೆಲೆಸಿದ್ದಾನೆ, ಆತ ಭಾರತದ ಆತ್ಮ. ರಾಮನಿಲ್ಲದೆ ಈ ದೇಶದ ಸಂಸ್ಕೃತಿ ಅಪೂರ್ಣ.
- ಅಲಾಹಾಬಾದ್‌ ಹೈಕೋರ್ಟ್‌

ನ್ಯಾಯಾಲಯ ಅವಲೋಕನದ ಪ್ರಮುಖ ಅಂಶಗಳು

  • ಇಂತಹ ಜನರ ಬಗ್ಗೆ ನ್ಯಾಯಾಲಯ ಮೃದುವಾಗಿ ನಡೆದುಕೊಂಡರೆ ಅದು ಅವರಿಗೆ ನೈತಿಕ ಸ್ಥೈರ್ಯ ತಂದುಕೊಡುತ್ತದೆ. ಇದರಿಂದ ದೇಶದ ಸಾಮರಸ್ಯ ಹಾಳಾಗುತ್ತದೆ.

  • ರಾಮ ಈ ದೇಶದ ಪ್ರತಿಯೊಬ್ಬ ನಾಗರಿಕನ ಹೃದಯದಲ್ಲಿ ನೆಲೆಸಿದ್ದಾನೆ, ಆತ ಭಾರತದ ಆತ್ಮ. ರಾಮನಿಲ್ಲದೆ ಈ ದೇಶದ ಸಂಸ್ಕೃತಿ ಅಪೂರ್ಣ.

  • ಭಾರತದ ಸಂವಿಧಾನ ಮುಕ್ತ ದಾಖಲೆಯಾಗಿದ್ದು ಪ್ರತಿಯೊಬ್ಬ ಪ್ರಜೆಗೂ ದೇವರನ್ನು ನಂಬುವ ಅಥವಾ ನಂಬದಿರುವ ಸ್ವಾತಂತ್ರ್ಯ ಒದಗಿಸುತ್ತದೆ.

  • ದೇವರನ್ನು ನಂಬದೇ ಇರಲು ನಾಸ್ತಿಕನಿಗೆ ಸ್ವಾತಂತ್ರ್ಯ ಇದೆಯಾದರೂ ದೇವರ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸುವಂತಿಲ್ಲ ಹಾಗೂ ಅದನ್ನು ಸಾರ್ವಜನಿಕವಾಗಿ ಪ್ರಸಾರ ಮಾಡುವಂತಿಲ್ಲ.

  • ಭಗವಾನ್ ರಾಮ ಮತ್ತು ಶ್ರೀಕೃಷ್ಣ ಮಹಾನ್ ಪುರುಷರಾಗಿದ್ದು ಅವರನ್ನು ದೇಶದ ಬಹುಸಂಖ್ಯಾತ ಜನ ಸಾವಿರಾರು ವರ್ಷಗಳಿಂದ ಪೂಜಿಸುತ್ತಿದ್ದಾರೆ. ಹಿಂದೆಯೂ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಮಹಾನ್ ಪುರುಷರ ಬಗ್ಗೆ ಅಸಭ್ಯ ಹೇಳಿಕೆಗಳು ಬಂದಾಗ ಹಿಂದೂ ಮುಸ್ಲಿಂ, ಕ್ರೈಸ್ತ ಅಥವಾ ಸಿಖ್‌ ಎನ್ನದೇ ದೇಶದ ಪ್ರತಿಯೊಬ್ಬ ನಾಗರಿಕರೂ ಖಂಡಿಸಿದ್ದಾರೆ.

  • ದೇಶದ ಎಲ್ಲಾ ಶಾಲೆಗಳಲ್ಲಿ (ಮಹಾನ್‌ ಪುರುಷರ ಬದುಕನ್ನು) ಕಡ್ಡಾಯ ವಿಷಯವನ್ನಾಗಿ ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಏಕೆಂದರೆ ಶಿಕ್ಷಣದಿಂದ ಮಾತ್ರ ಒಬ್ಬ ವ್ಯಕ್ತಿ ತನ್ನ ಜೀವನಮೌಲ್ಯ ಮತ್ತು ತನ್ನ ಸಂಸ್ಕೃತಿ ಬಗ್ಗೆ ಸುಸಂಸ್ಕೃತನಾಗುತ್ತಾನೆ ಹಾಗೂ ಜಾಗೃತನಾಗುತ್ತಾನೆ.

  • ಇತಿಹಾಸಕಾರರು‌ ತಮ್ಮ ಭಟ್ಟಂಗಿತನ ಮತ್ತು ಸ್ವಾರ್ಥದಿಂದಾಗಿ ಭಾರತೀಯ ಸಂಸ್ಕೃತಿಗೆ ಸಾಕಷ್ಟು ಹಾನಿ ಮಾಡಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರ/ಆರೋಪಿ ಹತ್ತು ತಿಂಗಳಿನಿಂದ ಜೈಲಿನಲ್ಲಿದ್ದರು. ಪ್ರಕರಣದ ವಿಚಾರಣೆ ಆರಂಭವಾಗಿರಲಿಲ್ಲ. ಕೊನೆಗೊಳ್ಳುವ ಸೂಚನೆಯೂ ಕಂಡು ಬಂದಿಲ್ಲ ಎಂದು ನ್ಯಾಯಾಲಯ ಹೇಳಿತು. ದಾತರಾಮ್ ಸಿಂಗ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಜಾಮೀನು ಆರೋಪಿಯ ಹಕ್ಕಾಗಿದ್ದು ಜೈಲು ಇದಕ್ಕೆ ಅಪವಾದವಾಗಿದೆ ಎಂದು ಹೇಳಿದ್ದನ್ನು ಆಧರಿಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತು.

ಕೆಲ ದಿನಗಳ ಹಿಂದೆ ಇದೇ ನ್ಯಾಯಮೂರ್ತಿಗಳು ಗೋಹತ್ಯೆ ಆರೋಪಿಗಳಿಗೆ ಜಾಮೀನು ನಿರಾಕರಿಸುತ್ತಾ ಹಸು ಭಾರತದ ಸಂಸ್ಕೃತಿಯ ಭಾಗವಾಗಿದೆ ಮತ್ತು ಅದನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಹೇಳಿದ್ದರು. ಸಂವಿಧಾನದ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಗೋವನ್ನು ಸೇರಿಸಲು ಸರ್ಕಾರ ಸಂಸತ್ತಿನಲ್ಲಿ ಮಸೂದೆ ಜಾರಿಗೆ ತರಬೇಕು ಮತ್ತು ಗೋವುಗಳಿಗೆ ಹಾನಿ ಉಂಟು ಮಾಡುವಂತಹ ಮಾತುಗಳನ್ನಾಡುವವರಿಗೆ ಕಠಿಣ ಕಾನೂನು ರೂಪಿಸಬೇಕು ಎಂದಿದ್ದರು.