ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅಲಿಯಾಸ್ ಹರ್ಷವರ್ಧಿನಿ ರನ್ಯಾರನ್ನು ಬಂಧಿಸುವಾಗ ಕಾನೂನು ಪಾಲಿಸಲಾಗಿಲ್ಲ ಮತ್ತು ಬಂಧನಕ್ಕೆ ಲಿಖಿತ ಕಾರಣಗಳನ್ನು ನೀಡಿಲ್ಲವಾದ್ದರಿಂದ ಅವರ ಬಂಧನವು ಕಾನೂನುಬಾಹಿರ ಎಂದು ಆಕೆಯ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಪ್ರಬಲವಾಗಿ ವಾದಿಸಿದರು.
ನಟಿ ರನ್ಯಾ ಮತ್ತು ಎರಡನೇ ಆರೋಪಿ ತರುಣ್ ಕುಂಡೂರು ರಾಜು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ರನ್ಯಾರನ್ನು ಬಂಧಿಸುವಾಗ ಕಸ್ಟಮ್ಸ್ ಕಾಯಿದೆ ಸೆಕ್ಷನ್ 102 ಉಲ್ಲಂಘಿಸಲಾಗಿದೆ. ರನ್ಯಾ ಶೋಧನೆಯ ಸಂದರ್ಭದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ತನಿಖಾಧಿಕಾರಿಯಾದ ನೇಹಾ ಕುಮಾರಿ ಮತ್ತು ಹರಿಶಂಕರ್ ನಾಯರ್ ಅವರನ್ನು ಸಾಕ್ಷಿಗಳು ಎಂದು ಪರಿಗಣಿಸಲಾಗಿದೆ. ಮಾರ್ಚ್ 3ರ ಸಂಜೆ 6.15ಕ್ಕೆ ರನ್ಯಾ ಬಂಧಿಸಲಾಗಿದ್ದು, ಮಾರನೇಯ ದಿನ ಹೇಳಿಕೆಗೆ ರನ್ಯಾ ಸಹಿ ಪಡೆಯಲಾಗಿದೆ. ಇನ್ನು, ಮ್ಯಾಜಿಸ್ಟ್ರೇಟ್ ಮತ್ತು ಸತ್ರ ನ್ಯಾಯಾಲಯಕ್ಕೆ ರನ್ಯಾಗೆ ಜಾಮೀನು ವಿರೋಧಿಸುವಾಗ ಪ್ರಾಸಿಕ್ಯೂಷನ್ ಸಲ್ಲಿಸಿರುವ ನೋಟಿಸ್‌ಗಳಲ್ಲಿನ ಸಹಿಯಲ್ಲಿ ವ್ಯತ್ಯಾಸಗಳಿವೆ. ಒಂದು ನೋಟಿಸ್‌ನಲ್ಲಿ ಸಹಿಯೇ ಇಲ್ಲ” ಎಂದು ಆಕ್ಷೇಪಿಸಿದರು.
ಮುಂದುವರಿದು, “ಮಾರ್ಚ್ 4ರಂದು ರನ್ಯಾ ಪತಿ ಜತಿನ್ ವಿಜಯಕುಮಾರ್ ಪಾಟೀಲ್ ಅವರಿಗೆ ಡಿಆರ್‌ಐ ಅಧಿಕಾರಿಗಳು ಫೋನ್ ಮೂಲಕ ರನ್ಯಾರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಸುಪ್ರೀಂ ಕೋರ್ಟ್ ವಿಹಾನ್ ಕುಮಾರ್ ಪ್ರಕರಣದಲ್ಲಿ ಬಂಧನಕ್ಕೆ ಕಾರಣಗಳನ್ನು ಉಲ್ಲೇಖಿಸಿ ಪೋಷಕರು, ಸಂಬಂಧಿಕರು ಅಥವಾ ಸ್ನೇಹಿತರಿಗೆ ತನಿಖಾಧಿಕಾರಿ ಮಾಹಿತಿ ನೀಡಬೇಕು ಎಂದು ಹೇಳಲಾಗಿದೆ. ಈ ಅಂಶವನ್ನೂ ಉಲ್ಲಂಘಿಸಲಾಗಿದೆ” ಎಂದರು.
ಮಾರ್ಚ್ 4ರಂದು ಬಂಧಿತರಾಗಿರುವ ರನ್ಯಾ ಅವರು ಕಳೆದ 45 ದಿನಗಳಿಂದ ಜೈಲಿನಲ್ಲಿದ್ದಾರೆ. ಈ ವಿಚಾರವನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು. ಈ ಮಧ್ಯೆ, ಏಪ್ರಿಲ್ 17ರಂದು ಆಕ್ಷೇಪಣೆ ಸಲ್ಲಿಸುವುದಾಗಿ ತಿಳಿಸಿದ್ದರೂ ಅದರಂತೆ ನಡೆಯದ ಡಿಆರ್‌ಐ ಅನ್ನು ಪೀಠವು ತರಾಟೆಗೆ ತೆಗೆದುಕೊಂಡಿತು. ಏಪ್ರಿಲ್ 21ರಂದು ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಮಾರ್ಚ್ 3ರ ಸಂಜೆ 6.30ಕ್ಕೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದಲ್ಲಿ ಬಂದಿಳಿದಿದ್ದ ರನ್ಯಾರನ್ನು ಡಿಆರ್‌ಐ ಅಧಿಕಾರಿಗಳು ಪರಿಶೀಲಿಸಿದ್ದರು. ಮೊದಲಿಗೆ ರನ್ಯಾ ಅವರ ಕೈ ಚೀಲವನ್ನು (ಹ್ಯಾಂಡ್ ಬ್ಯಾಗ್) ಪರಿಶೀಲಿಸಲಾಗಿ, ಅದರಲ್ಲಿ ಏನೂ ಪತ್ತೆಯಾಗಿರಲಿಲ್ಲ. ಹೀಗಾಗಿ, ಮಹಿಳಾ ಡಿಆರ್‌ಐ ತನಿಖಾಧಿಕಾರಿಯು ರನ್ಯಾರನ್ನು ಪರಿಶೀಲಿಸುವ ಉದ್ದೇಶದಿಂದ ಲಿಖಿತವಾಗಿ ಒಪ್ಪಿಗೆ ಪಡೆದಿದ್ದರು. ಈ ಸಂದರ್ಭದಲ್ಲಿ ಆಕೆಯ ನಡುವಿನ ಭಾಗ, ಮಂಡಿಯ ಕೆಳಭಾಗದಲ್ಲಿ ತೊಡೆಗೆ ಚಿನ್ನದ ಬಾರ್‌ಗಳನ್ನು ಮೆಡಿಕಲ್ ಅಡ್ಹೆಸಿವ್ ಬ್ಯಾಂಡೇಜ್ ಬಳಸಿ ಅಂಟಿಸಲಾಗಿತ್ತು. ತಪಾಸಣೆಯ ಸಂದರ್ಭದಲ್ಲಿ ರನ್ಯಾ ಬಳಿ ₹12,56,43,362 ಮೌಲ್ಯದ 14213.05 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಇದನ್ನು ಆಧರಿಸಿ ಕಸ್ಟಮ್ಸ್ ಕಾಯಿದೆ 1962ರ ಸೆಕ್ಷನ್ 135 (1)(a) ಮತ್ತು 135(1)(b) ಅಡಿ ಪ್ರಕರಣ ದಾಖಲಿಸಲಾಗಿದೆ.