KSPCB and Karnataka HC 
ಸುದ್ದಿಗಳು

ಕೆಎಸ್‌ಪಿಸಿಬಿ ಅಧ್ಯಕ್ಷರ ಅವಧಿ ಮೊಟುಕು: ರಾಜ್ಯ ಸರ್ಕಾರದ ತಿದ್ದುಪಡಿ ಪುರಸ್ಕರಿಸಲು ಹೈಕೋರ್ಟ್‌ ನಕಾರ

ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಹಿಂದೆ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶಗಳಂತೆ ಮಾರ್ಗಸೂಚಿಗಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್‌.

Bar & Bench

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಶಾಂತ್‌ ಎ. ತಿಮ್ಮಯ್ಯ ಅವರ ಅಧಿಕಾರವನ್ನು ಮೊಟುಕುಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ತಿದ್ದುಪಡಿಯನ್ನು ಪುರಸ್ಕರಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ತಮ್ಮ ಅಧಿಕಾರವಧಿಯನ್ನು ಮೊಟುಕುಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕೆಎಸ್‌ಪಿಸಿಬಿ ಅಧ್ಯಕ್ಷ ಶಾಂತ್ ಎ. ತಿಮ್ಮಯ್ಯ ಪ್ರತ್ಯೇಕ ಎರಡು ಅರ್ಜಿ ಮತ್ತು ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ರಾಜ್ಯ ಸರ್ಕಾರವು ಅನುಸರಿಸುತ್ತಿದ್ದ ಮಾರ್ಗಸೂಚಿಗಳನ್ನು ಆಕ್ಷೇಪಿಸಿ ಈ ಹಿಂದೆ ಸಲ್ಲಿಕೆಯಾಗಿದ್ದ ಇತರರು ಸಲ್ಲಿಸಿದ್ದ ಪ್ರತ್ಯೇಕ ಆರು ಅರ್ಜಿಗಳನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕಟಿಸಿತು. ಇದೇ ವೇಳೆ ಶಾಂತ್ ಎ.ತಿಮ್ಮಯ್ಯ ಅವರ ನೇಮಕಾತಿ ಅಮಾನ್ಯಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿತು.

ಅಲ್ಲದೆ, ಕೆಎಸ್‌ಪಿಸಿಬಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ಹಿಂದೆ ವಿವಿಧ ನ್ಯಾಯಾಲಯಗಳು ನೀಡಿರುವ ಆದೇಶಗಳಂತೆ ಮಾರ್ಗಸೂಚಿಗಳಿಗೆ ಅಗತ್ಯ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪೀಠ ತಿಳಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.

2021ರ ನವೆಂಬರ್‌ 15ರಂದು ಶಾಂತ್ ತಿಮ್ಮಯ್ಯ ಅವರನ್ನು ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿತ್ತು. ಆ ಅವಧಿಯು 2022ರ ಮಾರ್ಚ್‌ 4ರಂದು ಮುಗಿಯಲಿದೆ ಎಂಬುದಾಗಿ ರಾಜ್ಯ ಸರ್ಕಾರ ಹೇಳಿತ್ತು. ತಮ್ಮ ಅಧಿಕಾರವಧಿ 2024ರ ನವೆಂಬರ್‌ 14ರವರೆಗೆ ಮುಂದುವರಿಯಲಿದೆ ಎಂದು ಶಾಂತ್ ಎ. ತಿಮ್ಮಯ್ಯ ವಾದ ಮಂಡಿಸಿದ್ದರು. ಇದೀಗ ಹೈಕೋರ್ಟ್‌, ಶಾಂತ್‌ ಎ. ತಿಮ್ಮಯ್ಯ ಅವರ ನೇಮಕಾತಿಯನ್ನು ಅಮಾನ್ಯಗೊಳಿಸಿಲ್ಲ ಎಂದು ಸ್ಪಷ್ಪಪಡಿಸಿದೆ. ಇದರಿಂದ ಅಧ್ಯಕ್ಷರ ಅವರ ಸೇವಾವಧಿ 2024ರ ನವೆಂಬರ್‌ 14ರವರೆಗೆ ಮುಂದುವರಿಯಲಿದೆ.

ಪ್ರಕರಣದ ಹಿನ್ನೆಲೆ: ಕೆಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ಜಯರಾಂ ಎಂಬುವವರನ್ನು 2019ರ ಮಾರ್ಚ್‌ 5ರಂದು ಸರ್ಕಾರ ನೇಮಿಸಿ, ಅವರ ಅಧಿಕಾರವಧಿ 2022ರ ಮಾರ್ಚ್‌ 4ರವರೆಗೆ ಇರಲಿದೆ ಎಂದು ಹೇಳಿತ್ತು. ಆದರೆ, ಅವರು 2019ರ ಜೂನ್‌ 20ರಂದು ರಾಜೀನಾಮೆ ನೀಡಿದ್ದರಿಂದ, ಅಧ್ಯಕ್ಷರ ಹುದ್ದೆಗೆ ಉಸ್ತುವಾರಿ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು.

ಶಾಂತ್‌ ಎ. ತಮ್ಮಯ್ಯ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿ 2021ರ ನವೆಂಬರ್‌ 15ರಂದು ನೇಮಕಗೊಂಡಿದ್ದರು. ಆದರೆ, 2023ರ ಆಗಸ್ಟ್‌ 31ರಂದು ರಾಜ್ಯ ಸರ್ಕಾರವು ತಿದ್ದುಪಡಿ ಹೊರಡಿಸಿ, ಶಾಂತ್‌ ಎ. ತಿಮ್ಮಯ್ಯ ಅವರ ಅಧಿಕಾರವಧಿ 2022ರ ಮಾರ್ಚ್‌ 4ರಂದು ಪೂರ್ಣಗೊಳ್ಳಲಿದೆ ಎಂದು ತಿಳಿಸಿತ್ತು.

ಇದನ್ನು ಆಕ್ಷೇಪಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಅವರು, ತಮ್ಮ ಅಧಿಕಾರವಧಿ 2024ರ ನವೆಂಬರ್‌ 14ಕ್ಕೆ ಪೂರ್ಣಗೊಳ್ಳಲಿದೆ. ಕೋರಿಜೆಂಡಮ್‌ ಅಲ್ಲಿ ತಮ್ಮಅಧಿಕಾರವಧಿಯು 2022ರ ಫೆಬ್ರವರಿ4ರಂದು ಮುಗಿಯಲಿದೆ ಎಂಬುದಾಗಿ ಸರ್ಕಾರ ತಪ್ಪಾಗಿ ಉಲ್ಲೇಖಿಸಿದೆ. ಕೆಎಸ್‌ಪಿಸಿಬಿ ಅಧ್ಯಕ್ಷರ ಅವಧಿಯು ನೇಮಕಾತಿಯಾದ ದಿನದಿಂದ ಮೂರು ವರ್ಷ ಇರಲಿದೆ ಎಂದು ವಾದಿಸಿದ್ದರು.

ಅರ್ಜಿಯನ್ನು 2023ರ ಸೆಪ್ಟೆಂಬರ್‌ 1ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸರ್ಕಾರದ ಕೋರಿಜೆಂಡಮ್‌ ಅನ್ನು ಅಮಾನತ್ತಿನಲ್ಲಿರಿಸಿತ್ತು. ನಂತರ ಕೆಎಸ್‌ಪಿಸಿಬಿ ಅಧ್ಯಕ್ಷರು, ಸದಸ್ಯರ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರ ಅನುಸರಿಸುತ್ತಿದ್ದ ಮಾರ್ಗಸೂಚಿಗಳನ್ನು ಆಕ್ಷೇಪಿಸಿ ಇತರರು ಹಿಂದೆ ಸಲ್ಲಿಸಲಾಗಿದ್ದ ಆರು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಿ, ಎಲ್ಲವನ್ನು ಇತ್ಯರ್ಥಪಡಿಸಲಾಗಿದೆ.