ಪಿಎಂ-ಉಷಾ ಯೋಜನೆ, ಅಂಬೇಡ್ಕರ್ ಥೀಮ್ ಪಾರ್ಕ್, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಹೊಸ ಕ್ಯಾಂಪಸ್ ಸೇರಿ ವಿವಿಧ ನಿರ್ಮಾಣ ಯೋಜನೆಗಳಿಗೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಜಾನಭಾರತಿ ಕ್ಯಾಂಪಸ್‌ನ ಹಸಿರು ಪ್ರದೇಶ ನಾಶವಾಗುತ್ತಿರುವುದು ಮತ್ತು ಅಲ್ಲಿನ ಜೀವವೈವಿಧ್ಯತೆ ಅಪಾಯಕ್ಕೆ ಸಿಲುಕುತ್ತಿದೆ ಎಂದು ದೂರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಸ್ವಯಂ ಜಾಗೃತಿ ಸೇವಾ ಟ್ರಸ್ಟ್ (ರಿ) ಅಧ್ಯಕ್ಷ ಸಿ ಅಜಯ್ ಕುಮಾರ್ ಮತ್ತು ಕೋರಮಂಗಲ ನಿವಾಸಿ ಪಾರ್ವತಿ ಶ್ರೀರಾಮ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಆಯುಕ್ತರು, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ ಅರ್ಜಿಯಲ್ಲಿ ಹೇಳಿರುವಂತೆ ಇಷ್ಟೊಂದು ಪ್ರಮಾಣದಲ್ಲಿ ಅರಣ್ಯ ಪ್ರದೇಶದ ಅಗತ್ಯವಿದೆಯೇ, ಮರಗಳನ್ನು ಕಡಿಯಬೇಕಾಗಿದೆಯೇ? ಬಯೋಪಾರ್ಕ್, ಮೀಸಲು ಅರಣ್ಯ ಪ್ರದೇಶಕ್ಕೆ ಹಾನಿ ಆಗಲಿದೆಯೇ? ಈ ಬಗ್ಗೆ ನಿರ್ಣಯ ಕೈಗೊಂಡಿರುವ ಪ್ರಕ್ರಿಯೆ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.
ಜ್ಜಾನಭಾರತಿ ಕ್ಯಾಂಪಸ್ ಒಟ್ಟು 1,112 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ. ಇದನ್ನು ನೈಸರ್ಗಿಕ ಭೂಪ್ರದೇಶ ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯ ಶೈಕ್ಷಣಿಕ ಹಾಗೂ ಪರಿಸರ ಕ್ಯಾಂಪಸ್ ಎಂದು ಭಾವಿಸಲಾಗಿದೆ. ಬಯೋಪಾರ್ಕಿನಲ್ಲಿ ಔಷಧೀಯ, ಬಿದಿರು, ಚಿಟ್ಟೆ, ಹಣ್ಣು ಸೇರಿ ವಿವಿಧ 16 ಬಗೆಯ ವಲಯಗಳಿವೆ. ಇದು ಬೆಂಗಳೂರಿನಲ್ಲಿ ಉಳಿದಿರುವ ಕೊನೆಯ ಹಸಿರು ಪ್ರದೇಶವಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲ, ನೈಸರ್ಗಿಕ ಜಲಮೂಲಗಳನ್ನು ಹೊಂದಿದೆ. ಆದರೆ, ವಿವಿಧ ನಿರ್ಮಾಣ ಯೋಜನೆಗಳ ಹಿನ್ನೆಲೆಯಲ್ಲಿ ಇದು ಇಂದು ಅಪಾಯದಲ್ಲಿದೆ. ನೂರಾರು ಮರಗಳನ್ನು ಕಡಿಯುವ ಪ್ರಸ್ತಾವನೆ ಇದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.