ನ್ಯಾಯಾಂಗ ತೀರ್ಮಾನ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆಯ ಬಗ್ಗೆ ಎಚ್ಚರಿಕೆ ರವಾನಿಸಿರುವ ಕರ್ನಾಟಕ ಹೈಕೋರ್ಟ್, ಇದು ಕಾನೂನು ವೃತ್ತಿಗೆ ಗಂಭೀರ ಬೆದರಿಕೆ ಎಂದು ಗುರುವಾರ ಹೇಳಿದೆ.
ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರವು ಸಹಯೋಗ್ ಪೋರ್ಟಲ್ ಆರಂಭಿಸಿರುವುದನ್ನು ಹಾಗೂ ಅದನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆಯ ವೇಳೆ ನ್ಯಾ. ನಾಗಪ್ರಸನ್ನ ಅವರು “ಕರಡು ಅಥವಾ ತೀರ್ಪು ಬರೆಯಲು ಕೃತಕ ಬುದ್ಧಿಮತ್ತೆ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ವಿಚಾರ” ಎಂದರು.
ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ವಕೀಲರು ಸಂಶೋಧನೆಗೆ ಕೃತಕ ಬುದ್ಧಿಮತ್ತೆ ಬಳಸಿರುವ ಪ್ರಕರಣಗಳಿವೆ. ಕೃತಕ ಬುದ್ಧಿಮತ್ತೆಗೆ ಮೂಲದಲ್ಲೇ ಕಷ್ಟಕರವಾಗಿದ್ದು, ಅದು ಭ್ರಮೆಗೆ ಒಳಪಡಿಸುತ್ತದೆ” ಎಂದರು.
“ಕೃತಕ ಬುದ್ಧಿಮತ್ತೆಯು ತನ್ನ ಕಕ್ಷಿದಾರನ ಹೆಸರಿನಲ್ಲಿ ತೀರ್ಪೊಂದನ್ನು ತಿರುಚಿತ್ತು ಎಂಬುದನ್ನು ವಕೀಲರೊಬ್ಬರು ಒಪ್ಪಬೇಕಾಯಿತು. ನಕಲಿ ಸೈಟೇಶನ್‌ನಿಂದಾಗಿ ದಂಡವೂ ವಿಧಿಸಲ್ಪಟ್ಟಿದೆ” ಎಂದರು.
ನ್ಯಾ, ನಾಗಪ್ರಸನ್ನ ಅವರು “ಕೃತಕ ಬುದ್ದಿಮತ್ತೆಯನ್ನು ಹೆಚ್ಚು ಅವಲಂಬಿಸುವುದು ಅಪಾಯಕಾರಿ, ಅದು ವೃತ್ತಿಯನ್ನೇ ನಾಶಪಡಿಸುತ್ತದೆ. ಕೃತಕ ಬುದ್ಧಿಮತ್ತೆ ಅವಲಂಬಿಸುವುದು ಬುದ್ಧಿಮತ್ತೆಯನ್ನೇ ಕೃತಕಗೊಳಿಸುವಂತಾಗಬಾರದು” ಎಂದು ಎಚ್ಚರಿಸಿದರು.
ಆಲ್ಗಾರಿದಮ್, ಸುಳ್ಳು ಸುದ್ದಿ ಮತ್ತು ಐಟಿ ಕಾಯಿದೆ ಅಡಿ ಮಧ್ಯಸ್ಥ ವೇದಿಕೆಗಳ ಮಿತಿ ಕುರಿತಾದ ವಿಸ್ತೃತ ವಾದದ ಸಂದರ್ಭದಲ್ಲಿ ನ್ಯಾಯಾಲಯವು ಈ ವಿಚಾರವನ್ನು ಪ್ರಸ್ತಾಪಿಸಿತು.
ಮೆಹ್ತಾ ಅವರು “ಕಾನೂನುಬಾಹಿರ ವಿಚಾರ ಹಾಕಿರುವುದನ್ನು ಮಧ್ಯಸ್ಥ ವೇದಿಕೆಗೆ ತಿಳಿಸುವುದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಾಗುವುದಿಲ್ಲ. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 69A ಅಡಿ ರಕ್ಷಣೆಯು ಸಹಯೋಗ್ ವ್ಯವಸ್ಥೆಯಿಂದ ಉಲ್ಲಂಘನೆಯಾಗುವುದಿಲ್ಲ” ಎಂದರು. ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.