ಬಹುಚರ್ಚಿತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾಪಣೆ ನೀಡಿದರೆ ಮಾಫಿ ಸಾಕ್ಷಿಯಾಗಲು ಸಿದ್ಧವಿರುವುದಾಗಿ 14ನೇ ಆರೋಪಿಯಾಗಿರುವ ಪ್ರದೋಷ್ ರಾವ್ ಸಲ್ಲಿಸಿರುವ ಅರ್ಜಿಗೆ ವಿರೋಧ ದಾಖಲಿಸಲು ಎರಡನೇ ಆರೋಪಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಬೆಂಗಳೂರು ಸತ್ರ ನ್ಯಾಯಾಲಯವು ಸೋಮವಾರ ಅನುಮತಿ ನಿರಾಕರಿಸಿದೆ. ಇದರಿಂದ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರರಿಗೆ ತೀವ್ರ ಹಿನ್ನಡೆಯಾಗಿದೆ.
ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಸುಜಾತ ಎಂ. ಸಾಂಬ್ರಾಣಿ ಅವರು ಪ್ರದೋಷ್ ರಾವ್ ಕ್ಷಮಾಪಣೆ ಕೋರಿರುವ ಅರ್ಜಿ ವಿಚಾರಣಾ ಪ್ರಕ್ರಿಯೆಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳು ವಾದ ದಾಖಲಿಸುವ ಹಕ್ಕು ಹೊಂದಿಲ್ಲ ಎಂದಿದೆ.
ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಪ್ರದೋಷ್ ಅರ್ಜಿಗೆ ವಿರೋಧ ದಾಖಲಿಸಲು ಅನುಮತಿಸಬೇಕು ಎಂದು ಕೋರಿದ್ದರು. ಇದನ್ನು ತಿರಸ್ಕರಿಸಿರುವ ನ್ಯಾಯಾಲಯವು ಕ್ಷಮಾಪಣೆ ವಿಚಾರವು ಅದನ್ನು ಕೋರುತ್ತಿರುವ ವ್ಯಕ್ತಿ, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ತೀರ್ಮಾನಿಸಿದೆ.
ಇತರೆ ಆರೋಪಿಗಳ ವಾದ ಆಲಿಸುವ ಹಕ್ಕಿನ ವಿಚಾರಕ್ಕೆ ಸೀಮಿತವಾಗಿ ಆದೇಶ ಮಾಡಿದ್ದು, ಪ್ರದೋಷ್ ರಾವ್ ಅರ್ಜಿಯ ಮೆರಿಟ್ ಮೇಲೆ ಯಾವುದೇ ಆದೇಶ ಮಾಡಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರದೋಷ್ ಪ್ರಸ್ತಾಪಿಸಿರುವ ವಿಚಾರಗಳನ್ನು ಕಾನೂನಿನ ಅಡಿ ಪ್ರತ್ಯೇಕವಾಗಿ ಪರಿಗಣಿಸಲಾಗುವುದು ಎಂದಿರುವ ನ್ಯಾಯಾಲಯವು ಪ್ರದೋಷ್ ಮಾಫಿ ಸಾಕ್ಷಿಯಾಗುವುದರಿಂದ ಇತರೆ ಆರೋಪಿಗಳಿಗೆ ಪೂರ್ವಾಗ್ರಹ ಉಂಟು ಮಾಡಲಿದೆ ಎಂಬ ವಾದವನ್ನೂ ತಿರಸ್ಕರಿಸಿದೆ.
ಪ್ರದೋಷ್‌ಗೆ ಕ್ಷಮಾಪಣೆ ನೀಡುವುದರಿಂದ ಇತರೆ ಆರೋಪಿಗಳಿಗೆ ತಮ್ಮನ್ನು ಸಮರ್ಥಿಸುವ ಹಕ್ಕು ಕಡಿತವಾಗುವುದಿಲ್ಲ. ಪ್ರದೋಷ್‌ಗೆ ಕ್ಷಮೆ ನೀಡಿ, ಆತ ಮಾಫಿ ಸಾಕ್ಷಿಯಾಗಿ ನೀಡುವ ಹೇಳಿಕೆ ಅಥವಾ ಸಾಕ್ಷಿಯು ವಿಚಾರಣೆಯ ಸಂದರ್ಭದಲ್ಲಿ ಜಾರಿಯಲ್ಲಿರುವ ನಿಯಮಗಳಿಗೆ ಒಳಪಡುತ್ತದೆ. ಇತರೆ ಆರೋಪಿಗಳು ಪ್ರದೋಷ್‌ನನ್ನು ಸಂಪೂರ್ಣವಾಗಿ ಪಾಟೀ ಸವಾಲಿಗೆ ಒಳಪಡಿಸುವ ಮೂಲಕ ಸತ್ಯ ಅನಾವರಣಗೊಳಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಕೊಲೆಗೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಸಂಪೂರ್ಣ ವಿಚಾರಗಳನ್ನು ಸತ್ಯದಿಂದ ನುಡಿಯುವ ಷರತ್ತಿಗೆ ಒಳಪಟ್ಟು ಪ್ರದೋಷ್‌ಗೆ ಕ್ಷಮಾಪಣೆ ನೀಡುವುದಕ್ಕೆ ತಮ್ಮ ವಿರೋಧವಿಲ್ಲ” ಎಂದರು.
“ರೇಣುಕಾಸ್ವಾಮಿ ಅವರ ತಾಯಿಯು ಪ್ರಧಾನ ಸಾಕ್ಷಿ ವಿಚಾರಣೆ ಸಂದರ್ಭದಲ್ಲಿ ಪ್ರಾಸಿಕ್ಯೂಷನ್‌ಗೆ ಬೆಂಬಲಿಸಿದ್ದರು. ಆದರೆ, ಪಾಟೀ ಸವಾಲಿನ ವೇಳೆ ಬೆಂಬಲಿಸಿರಲಿಲ್ಲ. ಭಾರತೀಯ ಸಾಕ್ಷ್ಯ ಕಾಯಿದೆ ಸೆಕ್ಷನ್ 154ರ ಅಡಿ ಅವರನ್ನು ಮತ್ತೊಮ್ಮೆ ಪಾಟೀ ಸವಾಲಿಗೆ ಒಳಪಡಿಸಲು ಅನುಮತಿ ಕೋರಿದ್ದ ಅರ್ಜಿಯನ್ನು ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಅದು ವಿಚಾರಣೆಗೆ ಬಾಕಿ ಇದೆ” ಎಂದರು.
ಎರಡು ಸಾಕ್ಷಿಗಳು ಭಾಗಶಃ ಪ್ರಾಸಿಕ್ಯೂಷನ್‌ಗೆ ಬೆಂಬಲಿಸಿ, ಆನಂತರ ಪ್ರಮುಖ ಘಟ್ಟದಲ್ಲಿ ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದಾರೆ. ಇನ್ನೊಬ್ಬ ಪ್ರತ್ಯಕ್ಷ ಸಾಕ್ಷಿಯೂ ಪ್ರಾಸಿಕ್ಯೂಷನ್ ಸಾಕ್ಷಿಗೆ ಬೆಂಬಲಿಸದಿರುವ ಸಾಧ್ಯತೆ ಬಗ್ಗೆ ಆತಂಕವಿದೆ. ಹೀಗಾಗಿ, ಪ್ರದೋಷ್ ಕ್ಷಮಾಪಣೆ ಕೋರಿ ಮಾಫಿ ಸಾಕ್ಷಿಯಾಗಲು ಮಾಡಿರುವ ಮನವಿಯನ್ನು ಪುರಸ್ಕರಿಸಿಸಬೇಕು. ಆರೋಪಿಗಳಿಗೆ ಪ್ರದೋಷ್ ಅರ್ಜಿಯನ್ನು ವಿರೋಧಿಸುವ ಹಕ್ಕಿಲ್ಲ” ಎಂದರು.
ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು “ಪ್ರದೋಷ್ ಸಲ್ಲಿಸಿರುವ ಅರ್ಜಿಯ ಬಗ್ಗೆ ಇತರೆಲ್ಲಾ ಆರೋಪಿಗಳಿಗೆ ಮಾಹಿತಿ ನೀಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಅಲ್ಲದೇ, ಪ್ರದೋಷ್‌ಗೆ ಪ್ರಾಸಿಕ್ಯೂಷನ್ ಲಿಖಿತ ಆಕ್ಷೇಪಣೆ ಸಲ್ಲಿಸಿಲ್ಲ. ಕ್ಷಮಾಪಣೆ ನೀಡುವುದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಪೂರೈಸಿಲ್ಲ” ಎಂದು ಆಕ್ಷೇಪಿಸಿದ್ದರು.