Darshan and Karnataka HC 
ಸುದ್ದಿಗಳು

ರೇಣುಕಾಸ್ವಾಮಿ ತಾಯಿ ರತ್ನಪ್ರಭಾರನ್ನು ಪಾಟಿ ಸವಾಲಿಗೆ ಒಳಪಡಿಸಲು ನಟ ದರ್ಶನ್‌ ವಿರೋಧ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ತಕರಾರಿನ ಕೇಂದ್ರಬಿಂದು ಸಾಕ್ಷಿಯು ಮೃತ ವ್ಯಕ್ತಿಯ ತಾಯಿಯಾಗಿದ್ದು ನೋವುಂಡಿರುವ ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಪೀಠ ಉದಾರವಾಗಿ ಪರಿಗಣಿಸಬೇಕು” ಎಂದ ದರ್ಶನ್‌ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ.

Bar & Bench

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸಾಕ್ಷಿಯೂ ಆಗಿರುವ ರೇಣುಕಸ್ವಾಮಿ ಅವರ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶ ಕಾಯ್ದಿರಿಸಿದೆ.

ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್ ಅವರು “ಅಪರಾಧ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಸೆಕ್ಷನ್ 161ರ ಅನುಸಾರ ತನಿಖಾಧಿಕಾರಿ ಮುಂದೆ ರತ್ನಪ್ರಭಾ ನೀಡಿರುವ ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು ಹಾಗೂ ತಾಂತ್ರಿಕ ದಾಖಲೆಗಳಿಗೆ ಸಂಪೂರ್ಣ ತದ್ವಿರುದ್ಧಾಗಿವೆ. ಇದು ತಾಂತ್ರಿಕ ಮತ್ತು ಮೌಖಿಕ ಹೇಳಿಕೆಗಳ ನಡುವಿನ ವಿರೋಧಾಭಾಸಕ್ಕೆ ಎಡೆಮಾಡಿಕೊಟ್ಟಿದೆ” ಎಂದು ಪ್ರತಿಪಾದಿಸಿದರು.

“ಭಾರತೀಯ ಸಾಕ್ಷ್ಯ ಕಾಯಿದೆ–1872ರ ಸೆಕ್ಷನ್‌ 154ರ ಅನುಸಾರ ಪ್ರಾಸಿಕ್ಯೂಷನ್‌ ಸಾಕ್ಷಿ ತನ್ನ ಹೇಳಿಕೆಯಿಂದ ಹಿಂದೆ ಸರಿದಾಗ, ನಮ್ಮ ಮನವಿಯ ಮೇರೆಗೆ ನ್ಯಾಯಾಲಯ ತನ್ನ ವಿವೇಚನೆಯನ್ನು ಬಳಸಿ ಪಾಟಿ ಸವಾಲು ನಡೆಸಲು ಅನುಮತಿ ನೀಡಬೇಕಿತ್ತು. ಆದರೆ, ಸತ್ರ ನ್ಯಾಯಾಲಯ ತಳ್ಳಿ ಹಾಕಿದೆ” ಎಂದರು.

ಪ್ರಸನ್ನ ಕುಮಾರ್ ಅವರು “ಅಪರಾಧ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಸೆಕ್ಷನ್‌ 161ರ ಅನುಸಾರ ತನಿಖಾಧಿಕಾರಿ ಮುಂದೆ ರತ್ನಪ್ರಭಾ ನೀಡಿರುವ ಹೇಳಿಕೆಯು, ತನಿಖೆಯ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು ಹಾಗೂ ತಾಂತ್ರಿಕ ದಾಖಲೆಗಳಿಗೆ ಸಂಪೂರ್ಣ ತದ್ವಿರುದ್ಧಾಗಿವೆ. ಇದು ತಾಂತ್ರಿಕ ಮತ್ತು ಮೌಖಿಕ ಹೇಳಿಕೆಗಳ ನಡುವಿನ ವಿರೋಧಾಭಾಸಕ್ಕೆ ಎಡೆಮಾಡಿಕೊಟ್ಟಿದೆ” ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಯಾಗಿ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್‌ ಪಾಷಾ ಅವರು “ತನ್ನ ಮೂಗಿನ ನೇರಕ್ಕೆ ಸಾಕ್ಷಿಯ ಹೇಳಿಕೆಯನ್ನು ಪಡೆಯುವಂತೆ ಮಾಡುವ ಪ್ರಾಸಿಕ್ಯೂಷನ್‌ ಒತ್ತಾಯ ಸಲ್ಲದು. ಈ ತಕರಾರಿನ ಕೇಂದ್ರಬಿಂದು ಸಾಕ್ಷಿಯು ಮೃತ ವ್ಯಕ್ತಿಯ ತಾಯಿಯಾಗಿದ್ದು ನೋವುಂಡಿರುವ ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಪೀಠ ಉದಾರವಾಗಿ ಪರಿಗಣಿಸಬೇಕು” ಎಂದು ಕೋರಿದರು.

ಇತರೆ ಹತ್ತು ಆರೋಪಿಗಳ ಪರ ವಕೀಲ ಆರ್‌ ರಂಗನಾಥ ರೆಡ್ಡಿ ಹಾಜರಿದ್ದು ಪ್ರತಿವಾದಿಗಳ ಆಕ್ಷೇಪಣೆಗೆ ಪೂರಕವಾದ ಪೂರ್ವನಿದರ್ಶನಗಳ ತೀರ್ಪುಗಳನ್ನು ಪೀಠಕ್ಕೆ ಒದಗಿಸಿದರು.

ಈಗಾಗಲೇ ಈ ಪ್ರಕರಣದಲ್ಲಿ 10ನೇ ಆರೋಪಿ ವಿ ವಿನಯ್‌ ಹಾಗೂ 14ನೇ ಆರೋಪಿ ಪ್ರದೋಷ್‌ ರಾವ್ ಮಾಫಿ ಸಾಕ್ಷಿಯಾಗಲು ವಿಚಾರಣಾಧೀನ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರದೋಷ್‌ ಪರ ಹಿರಿಯ ವಕೀಲ ಕೆ ದಿವಾಕರ ವಾದ ಮಂಡಿಸಿದರು.

ಭಾರತೀಯ ಸಾಕ್ಷ್ಯ ಕಾಯಿದೆ–1872ರ ಸೆಕ್ಷನ್ 154ರ ಅಡಿಯಲ್ಲಿ ಬರುವಂತೆ ಪ್ರಾಸಿಕ್ಯೂಷನ್ ಸಾಕ್ಷಿಯನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸದೆಯೇ ಅವರನ್ನು ಪಾಟಿ ಸವಾಲಿಗೆ ಒಳಪಡಿಸುವ ಸಂಬಂಧ ಪ್ರಾಸಿಕ್ಯೂಷನ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಟಿ ಸಿವಿಲ್‌ ಕೋರ್ಟ್‌ನ 57ನೇ ನ್ಯಾಯಾಲಯ 2026ರ ಜನವರಿ 17ರಂದು ತಿರಸ್ಕರಿಸಿತ್ತು.

ದರ್ಶನ್‌ ಖುದ್ದು ಹಾಜರಾತಿಗೆ ವಿರೋಧ

ಸಾಕ್ಷಿಯೊಬ್ಬರ ಪಾಟಿ ಸವಾಲಿನ ವೇಳೆ ಪ್ರಮುಖ ಆರೋಪಿಯಾದ ನಟ ದರ್ಶನ್‌ ನ್ಯಾಯಾಲಯದಲ್ಲಿ ವಿಚಾರಣೆಗೆ ಖುದ್ದು ಹಾಜರಾಗುವ ಅಗತ್ಯವಿಲ್ಲ. ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾದರೆ ಸಾಕು ಎಂದು ಪ್ರಸನ್ನ ಕುಮಾರ್‌ ಪ್ರತಿಪಾದಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಯನ್ನು ಬೆಂಗಳೂರಿನ 59ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಬುಧವಾರ ಮುಂದುವರಿಸಿತು.

ಪ್ರಕರಣದ 19ನೇ ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ಪಾಟಿ ಸವಾಲಿಗೆ ಒಳಪಡಿಸುವಾಗ ನಟ ದರ್ಶನ್‌ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಆದೇಶಿಸಬೇಕು ಎಂದು ಕೋರಿ ದರ್ಶನ್‌ ಪರ ಹಿರಿಯ ವಕೀಲ ಹಸ್ಮತ್ ಪಾಷಾ ಅವರು ಅರ್ಜಿ ಸಲ್ಲಿಸಿದ್ದರು.

ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಸನ್ನ ಕುಮಾರ್‌ ಅವರು “ಪ್ರಕರಣದಲ್ಲಿ ದೋಷಾರೋಪಗಳನ್ನು ಹೊರಿಸುವ ವೇಳೆ ದರ್ಶನ್‌ ಸೇರಿ ಇತರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದ ಸಮಯದಲ್ಲಿ ಕೋರ್ಟ್‌ ಹಾಲ್ ಜನ ಸಂದಣಿಯಿಂದ ತುಂಬಿತ್ತು. ನ್ಯಾಯಾಧೀಶರು ಹೇಳುವ ಮಾತು ಆರೋಪಿಗಳಿಗೆ ಕೇಳುತ್ತಲೇ ಇರಲಿಲ್ಲ. ದೋಷಾರೋಪ ಹೊರಿಸುವ ಪ್ರಕ್ರಿಯೆಗಾಗಿಯೇ  ಅರ್ಧದಿನ ಕಳೆದು ಹೋಗಿತ್ತು. ದರ್ಶನ್‌ ನ್ಯಾಯಾಲಯಕ್ಕೆ ಹಾಜರಾದರೆ ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಬೇಕಾಗುತ್ತದೆ. ಸದ್ಯ ಕೆಲ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ವರ ಮಹಾಲಕ್ಷ್ಮಿ ಹಬ್ಬ, ಈದ್-ಮಿಲಾದ್ ಹಬ್ಬಗಳಿವೆ. ಆ ವೇಳೆ ಸೂಕ್ತ ಬಂದೋಬಸ್ತ್‌ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ” ಎಂದು ತಿಳಿಸಿದರು.

ತಂತ್ರಜ್ಞಾನದ ಮೂಲಕ ಜಗತ್ತಿನ ಯಾವುದೇ ಭಾಗದ ಚಟುವಟಿಕೆ ವೀಕ್ಷಿಸಬಹುದಾಗಿದೆ. ದರ್ಶನ್‌ ಕೋರ್ಟ್ ಹಾಲ್‌ನಲ್ಲಿ ಖುದ್ದು ಹಾಜರಾಗಿ ಪಾಟಿ ಸವಾಲು ಪ್ರಕ್ರಿಯೆಯನ್ನು ಕೇಳಿಕೊಳ್ಳುವುದಕ್ಕಿಂದ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ (ವಿಸಿ) ಮೂಲಕ ವಿಚಾರಣಾ ಪ್ರಕ್ರಿಯೆ ಕೇಳಿಸಿಕೊಳ್ಳುವುದು ಉತ್ತಮ. ವಿಸಿಯಲ್ಲಿಯೂ ಸಾಕ್ಷಿಗಳ ದಾಖಲಿಸುವ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತದೆ. ತಂತ್ರಜ್ಞಾನ ಬೆಳೆದಿದ್ದರೂ ಆರೋಪಿಗಳ ವಕೀಲರು ಈಗಲೂ ಶಿಲಾಯುಗದ ಪ್ರಕ್ರಿಯೆಗೆ ಮನವಿ ಮಾಡುತ್ತಿದ್ದಾರೆ ಎಂದು ಎಸ್‌ಪಿಪಿ ಆಕ್ಷೇಪಿಸಿದರು.

ಇನ್ನೂ ಜೈಲಿನಲ್ಲಿ ದರ್ಶನ್‌ ಅನ್ನು ಭೇಟಿಯಾಗಲು ವಕೀಲರು, ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಸೂಕ್ತ ಅವಕಾಶ ಕಲ್ಪಿಸಲಾಗಿದೆ. ಮೇಲಾಗಿ ಪ್ರತ್ಯೇಕವಾಗಿ ಮಾತುಕತೆಗೆ ಅವಕಾಶ ಸಹ ಕಲ್ಪಿಸಲಾಗಿದೆ. ದರ್ಶನ್‌ ಭೇಟಿ ಮಾಡಲು ಯಾವುದೇ ನಿರ್ಬಂಧ ಹಾಕಿಲ್ಲ. ಜೈಲಿನಿಂದಲೇ ಹಲವು ಬಾರಿ ಕುಟುಂಬದ ಸದಸ್ಯರೊಂದಿಗೆ ದೂರುವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ ಎಂದು ಸಹ ನ್ಯಾಯಾಲಯದ ಗಮನಕ್ಕೆ ತಂದರು.

ಎಸ್‌ಪಿಪಿ ಅವರ ಪ್ರತಿವಾದ ಮತ್ತು ದರ್ಶನ್‌ ಕೋರ್ಟ್‌ಗೆ ಹಾಜರಾಗುವ ಅಗತ್ಯತೆ ಬಗ್ಗೆ ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಹಿರಿಯ ವಕೀಲ ಹಸ್ಮತ್‌ ಪಾಷಾ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಗುರುವಾರಕ್ಕೆ ನ್ಯಾಯಾಲಯ ಮುಂದೂಡಿತು.