Darshan and Karnataka HC 
ಸುದ್ದಿಗಳು

ಮನೆಯೂಟ, ಹಾಸಿಗೆ, ಪುಸ್ತಕ ಕೋರಿ ನಟ ದರ್ಶನ್‌ರಿಂದ ಹೊಸ ಅರ್ಜಿ: ಹೈಕೋರ್ಟ್‌ನಲ್ಲಿ ನಾಳೆ ವಿಚಾರಣೆ

Bar & Bench

ಮನೆಯಿಂದ ಊಟ, ಪುಸ್ತಕ ಮತ್ತು ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದ ಅಧೀಕ್ಷಕರು ಮತ್ತು ಕಾಮಾಕ್ಷಿಪಾಳ್ಯದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ ಅವರನ್ನು ಪ್ರತಿವಾದಿಗಳನ್ನಾಗಿ ಕಾಣಿಸಲಾಗಿದೆ.

ವಕೀಲೆ ಸಂಜೀವಿನಿ ಪಿ.ನಾವದಗಿ ವಕಾಲತ್ತು ವಹಿಸಿರುವ ಈ ಅರ್ಜಿಯು ಬುಧವಾರ (ಜುಲೈ 31) ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಮನೆಯಿಂದ ಊಟ, ಪುಸ್ತಕ ಮತ್ತು ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡುವಂತೆ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಬೇಕು ಎಂದು ದರ್ಶನ್‌ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪವಿತ್ರ ಗೌಡ, ದರ್ಶನ್‌ ಅಲಿಯಾಸ್‌ ಡಿ ಬಾಸ್‌, ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, ರಾಘವೇಂದ್ರ, ನಂದೀಶ್‌, ಜಗದೀಶ್‌ ಅಲಿಯಾಸ್‌ ಜಗ್ಗ, ಅನುಕುಮಾರ್‌, ರವಿ ಶಂಕರ್‌ ಅಲಿಯಾಸ್‌ ರವಿ, ಧನರಾಜ್‌ ಡಿ ಅಲಿಯಾಸ್‌ ರಾಜು, ವಿನಯ್‌ ವಿ, ನಾಗರಾಜು, ಲಕ್ಷ್ಮಣ, ದೀಪಕ್‌, ಪ್ರದೂಷ್‌, ಕಾರ್ತಿಕ್‌ ಅಲಿಯಾಸ್‌ ಕಪ್ಪೆ, ಕೇಶವಮೂರ್ತಿ, ನಿಖಿಲ್‌ ನಾಯಕ್‌ ಆರೋಪಿಗಳಾಗಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 201 (ಸಾಕ್ಷ್ಯ ನಾಶ), 120 (ಬಿ) (ಕ್ರಿಮಿನಲ್‌ ಪಿತೂರಿ), 364 (ಅಪಹರಣ), 355 (ಕ್ರಿಮಿನಲ್‌ ಉದ್ದೇಶದಿಂದ), 384 (ಸುಲಿಗೆ), 143 (ಅಕ್ರಮ ಕೂಟ), 147 (ದೊಂಬಿ), 148 (ಮಾರಕಾಸ್ಟ್ರ ಬಳಕೆ) ಜೊತೆಗೆ 149 (ಏಕೈಕ ಉದ್ದೇಶದಿಂದ ಎಲ್ಲರೂ ಒಟ್ಟುಗೂಡಿ ಕೃತ್ಯ ಎಸಗಿರುವುದು) ಅಡಿ ಪ್ರಕರಣ ದಾಖಲಿಸಲಾಗಿದೆ.