Darshan & Vijayalakshmi 
ಸುದ್ದಿಗಳು

ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತು ಪತ್ತೆ: ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಕದತಟ್ಟಿದ ನಟ ದರ್ಶನ್‌ ದಂಪತಿ

ಅರ್ಜಿಯಲ್ಲಿ ತಮ್ಮ ಫಾರ್ಮ್‌ನಲ್ಲಿ ವಿವಿಧ ಜಾತಿಯ ಹಕ್ಕಿಗಳಿದ್ದವು. ಆ ಹಕ್ಕಿಗಳ ಜೊತೆಗೆ ಹೇಗೋ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳು ಸೇರಿಕೊಂಡಿವೆ. ಅರಣ್ಯ ಅಧಿಕಾರಿಗಳ ತಪಾಸಣೆ ನಂತರವಷ್ಟೇ ಈ ವಿಷಯ ತಿಳಿದುಬಂದಿದೆ ಎಂದಿರುವ ದರ್ಶನ್‌ ದಂಪತಿ.

Bar & Bench

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿಎರಡನೇ ಆರೋಪಿಯಾಗಿರುವ ನಟ ದರ್ಶನ್‌ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ.

ಮೈಸೂರಿನ ಬಳಿ ಇರುವ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯಾಧಿಕಾರಿಗಳು ಟಿ ನರಸೀಪುರ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಆ ಹಿನ್ನೆಲೆಯಲ್ಲಿ ಟಿ ನರಸೀಪುರ ನ್ಯಾಯಾಲಯವು ದರ್ಶನ್‌, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಫಾರ್ಮ್‌ಹೌಸ್‌ ಉಸ್ತುವಾರಿಯಾಗಿರುವ ನಾಗರಾಜ್‌ಗೆ ಸಮನ್ಸ್‌ ಜಾರಿಗೊಳಿಸಿದೆ. ಇದನ್ನು ಪ್ರಶ್ನಿಸಿ ದರ್ಶನ್‌, ವಿಜಯಲಕ್ಷ್ಮಿ ಮತ್ತು ನಾಗರಾಜ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರ್ಜಿಯಲ್ಲಿ ತಮ್ಮ ಫಾರ್ಮ್‌ನಲ್ಲಿ ವಿವಿಧ ಜಾತಿಯ ಹಕ್ಕಿಗಳಿದ್ದವು. ಆ ಹಕ್ಕಿಗಳ ಜೊತೆಗೆ ಹೇಗೋ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳು ಬಂದು ಸೇರಿಕೊಂಡಿವೆ. ಅರಣ್ಯ ಅಧಿಕಾರಿಗಳ ತಪಾಸಣೆ ನಂತರವಷ್ಟೇ ಈ ವಿಷಯ ತಮಗೆ ತಿಳಿದುಬಂದಿದೆ. ವಿಜಯಲಕ್ಷ್ಮಿ ಅವರು ಆ ಫಾರ್ಮ್‌ಗೆ ಭೇಟಿ ನೀಡುವುದೇ ಇಲ್ಲ. ದರ್ಶನ್‌ ಕೂಡ ಅಲ್ಲಿಗೆ ಆಗಾಗ್ಗೆ ಮಾತ್ರ ಭೇಟಿ ನೀಡುತ್ತಿರುತ್ತಾರೆ ಎಂದು ಹೇಳಲಾಗಿದೆ.

ಅಲ್ಲದೆ,  ಆ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ತಾವು ಸಾಕಿಲ್ಲಎಂದು ತಿಳಿಸಿರುವ ದರ್ಶನ್‌ ದಂಪತಿ, ತಮ್ಮ ಮೇಲಿರುವ ವನ್ಯಜೀವಿ ಕಾಯಿದೆಯ ಅಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಪಟ್ಟೆ ತಲೆ ಹೆಬ್ಬಾತು 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಷೆಡ್ಯೂಲ್‌ ಒಂದರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಅದರಡಿ ಈ ಪಕ್ಷಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಥವಾ ಸೆರೆ ಹಿಡಿಯುವುದು ಗಂಭೀರ ಅಪರಾಧವಾಗಿದೆ. ಈ ಕಾನೂನಿನ ಉಲ್ಲಂಘನೆಯು ಜಾಮೀನು ರಹಿತ ಅಪರಾಧವಾಗಿದ್ದು, ಅತಂಹ ಕೃತ್ಯಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಗಂಭೀರ ಕ್ರಮ ಜರುಗಿಸಲು ಅವಕಾಶವಿದೆ.