Karnataka High Court
Karnataka High Court 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ಗೆ ಅ.3ರಿಂದ 7ರವರೆಗೆ ದಸರಾ ರಜೆ: ಅ.6ರಂದು ರಜಾಕಾಲೀನ ಪೀಠದ ವಿಚಾರಣೆ

Bar & Bench

ಕರ್ನಾಟಕ ಹೈಕೋರ್ಟ್‌ಗೆ ಅಕ್ಟೋಬರ್‌ 3ರಿಂದ 7ರವರೆಗೆ ದಸರಾ ರಜೆ ಇರಲಿದೆ ಎಂದು ಹೈಕೋರ್ಟ್‌ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ ಕಾಯಿದೆ 1961ರ ಸೆಕ್ಷನ್‌ 12ರ ಪ್ರಕಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು ಅಕ್ಟೋಬರ್‌ 6ರಂದು ಕರ್ತವ್ಯ ನಿರ್ವಹಿಸಲಿರುವ ರಜಾಕಾಲೀನ ಪೀಠಗಳನ್ನು ರಚಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಸ್‌ ಸುನಿಲ್‌ ದತ್‌ ಯಾದವ್‌ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು 8ನೇ ಕೋರ್ಟ್‌ ಹಾಲ್‌ನಲ್ಲಿ ವಿಭಾಗೀಯ ಪೀಠಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಎನ್‌ ಎಸ್‌ ಸಂಜಯ್‌ ಗೌಡ (ಕೋರ್ಟ್‌ ಹಾಲ್‌ ಸಂಖ್ಯೆ 9), ಎಂ ಜಿ ಎಸ್‌ ಕಮಲ್‌ (ಕೋರ್ಟ್‌ ಹಾಲ್‌ ಸಂಖ್ಯೆ 10) ಮತ್ತು ಸಿ ಎಂ ಪೂಣಚ್ಚ ಅವರು (ಕೋರ್ಟ್‌ ಹಾಲ್‌ ನಂ. 11) ಏಕ ಸದಸ್ಯ ಪೀಠಕ್ಕೆ ಸಂಬಂಧಿಸಿದ ಪ್ರಕರಣ ವಿಚಾರಣೆ ನಡೆಸಲಿದ್ದಾರೆ.

ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಭೌತಿಕ ವಿಚಾರಣೆ ಇರುವುದಿಲ್ಲ. ತುರ್ತು ಪ್ರಕರಣಗಳ ವಿಚಾರಣೆಯನ್ನು ಬೆಂಗಳೂರಿನ ಪ್ರಧಾನ ಪೀಠದಲ್ಲಿ ವರ್ಚುವಲ್‌ ವಿಧಾನದಲ್ಲಿ ವಿಚಾರಣೆ ನಡೆಸಲಾಗುತ್ತದೆ. ಬೆಂಗಳೂರು ಪೀಠದಲ್ಲಿ ಹೈಬ್ರಿಡ್‌ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿದೆ.

ತುರ್ತು ಮಧ್ಯಂತರ ಆದೇಶ, ತಡೆಯಾಜ್ಞೆ ಮತ್ತು ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಕ್ಟೋಬರ್‌ 3ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಫೈಲ್‌ ಮಾಡಬಹುದಾಗಿದೆ. ಇ-ಫೈಲಿಂಗ್‌ ಪೋರ್ಟಲ್‌ ಮೂಲಕವು ಅರ್ಜಿ ದಾಖಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಭಾರಿ ನ್ಯಾಯಿಕ ರಿಜಿಸ್ಟ್ರಾರ್‌ ಕೆ ಎಸ್‌ ಭರತ್‌ ಕುಮಾರ್‌ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.