ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಮುಸ್ಲಿಂ ಯುವಕ ಮತ್ತು ಬೆಂಗಳೂರಿನ ಹಿಂದೂ ಯುವತಿ ವಿವಾಹವಾಗಿದ್ದು ಅವರಿಗೆ ಒಗ್ಗೂಡಿ ಬಾಳಲು ಕರ್ನಾಟಕ ಹೈಕೋರ್ಟ್ ಈಚೆಗೆ ಅನುಮತಿಸಿದೆ.
ಯುವತಿಯ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಗೌಪ್ಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಸುನಿಲ್ ದತ್ ಯಾದವ್ ಮತ್ತು ವೆಂಕಟೇಶ್ ನಾಯ್ಕ್ ಟಿ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಪ್ರಕರಣ ಇತ್ಯರ್ಥಪಡಿಸಿದೆ.
“ಯುವತಿಯು ಎರಡನೇ ವರ್ಷದ ಬಿ. ಕಾಂ ವಿದ್ಯಾರ್ಥಿನಿಯಾಗಿದ್ದು, ಆಕೆಯು ತನ್ನ ತಾಯಿಯ ಜೊತೆ ಹೋಗಲು ನಿರಾಕರಿಸಿದ್ದಾರೆ. ಪ್ರೀತಿಸಿದ ಯುವಕನ ಜೊತೆ 2024ರ ಏಪ್ರಿಲ್ 1ರಂದು ವಿವಾಹವಾಗಿದ್ದು, ಪ್ರಕರಣವನ್ನು ಮುಂದುವರಿಸುವ ಅಗತ್ಯವಿಲ್ಲ. ಬಾಲ ನ್ಯಾಯ ಸಮಿತಿಯ ಉಪ ಕಾರ್ಯದರ್ಶಿ ಸಲ್ಲಿಸಿರುವ ವರದಿಯ ಅಂಶಗಳನ್ನು ದಾಖಲಿಸಿ, ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಬಾಲ ನ್ಯಾಯ ಸಮಿತಿಯ ಉಪ ಕಾರ್ಯದರ್ಶಿ ಸಲ್ಲಿಸಿರುವ ವರದಿಯಲ್ಲಿ ಗೌಪ್ಯ ಮಾಹಿತಿಯಿದ್ದು, ಈ ವರದಿಯನ್ನು ಯಾರಿಗೂ ನೀಡಬಾರದು ಎಂದು ರಿಜಿಸ್ಟ್ರಿಗೆ ಹೈಕೋರ್ಟ್ ಆದೇಶಿಸಿದೆ.
ತನ್ನ ಪತ್ನಿಯ ರಕ್ಷಣೆ, ಕಲ್ಯಾಣ ಮತ್ತು ಶಿಕ್ಷಣದ ಬಗ್ಗೆ ತಾನು ಗಮನಹರಿಸುವುದಾಗಿ ಆಕೆಯ ಪತಿಯು ತನ್ನ ವಕೀಲರ ಮೂಲಕ ಸ್ವಯಂಪ್ರೇರಿತವಾಗಿ ಅಫಿಡವಿಟ್ ಸಲ್ಲಿಸಿದ್ದು, ಅದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
ಇದಕ್ಕೂ ಮುನ್ನ, ಪ್ರೀತಿಸಿದ ಯುವಕನನ್ನು ವರಿಸಲು ಮನೆಬಿಟ್ಟು ಹೋಗಿದ್ದ ಯುವತಿಯನ್ನು ಪತ್ತೆ ಹಚ್ಚಿದ ಕೇರಳ-ಕರ್ನಾಟಕ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನಲ್ಲಿ ಎರಡನೇ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಯುವತಿಗೆ ಕೇರಳದ ಮೂಲದ ಯುವಕ ಇನ್‌ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ. ಕಾಲಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ಯುವಕ ದುಬೈನಲ್ಲಿ ಉದ್ಯೋಗದಲ್ಲಿದ್ದು, ಯುವತಿಯನ್ನು ಮದುವೆಯಾಗಲು ಮಾರ್ಚ್‌ನಲ್ಲಿ ಯುವಕ ಬೆಂಗಳೂರಿಗೆ ಬಂದಿದ್ದ. ಯುವತಿಯನ್ನು ಕೇರಳದ ಕಣ್ಣೂರಿಗೆ ಕರೆದೊಯ್ದಿದ್ದ. ಈ ಸಂಬಂಧ ಯುವತಿ ತಾಯಿ ಮಡಿವಾಳ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮಗಳನ್ನು ಪತ್ತೆ ಹಚ್ಚದ್ದಕ್ಕೆ ತಾಯಿ ಹೈಕೋರ್ಟ್‌ಗೆ ಹೇಬಿಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರದ ವಕೀಲ ಪಿ ತೇಜೇಶ್, ಎನ್ ಅನಿತಾ ಗಿರೀಶ್, ಅರ್ಜಿದಾರೆ ತಾಯಿ ಪರವಾಗಿ ವಕೀಲರಾದ ಚನ್ನಕೃಷ್ಣ, ಎ ವಿ ಶ್ರೀಹರಿ, ಯುವಕನ ಪರವಾಗಿ ವಕೀಲ ಗೌರವ್ ರಾಮಕೃಷ್ಣ ವಾದಿಸಿದರು.