Justices Sanjay Kishan Kaul and MM Sundresh

 
ಸುದ್ದಿಗಳು

ಅಪ್ಪನೊಂದಿಗೆ ಬಾಂಧವ್ಯ ಬಯಸದ ಮಗಳು ಆತನ ಹಣ ಪಡೆಯಲು ಅರ್ಹಳಲ್ಲ: ಸುಪ್ರೀಂ ಕೋರ್ಟ್

ಆದರೂ, ತಾಯಿಗೆ ಶಾಶ್ವತ ಜೀವನಾಂಶ ಪಾವತಿಸಬೇಕಾದ ಮೊತ್ತ ನಿರ್ಧರಿಸುವಾಗ, ತಾಯಿ ಮಗಳನ್ನು ಬೆಂಬಲಿಸಲು ಬಯಸಿದರೆ, ಆಗ ಹಣ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಅಪ್ಪನೊಂದಿಗೆ ಬಾಂಧವ್ಯ ಹೊಂದಲು ಬಯಸದ ಮಗಳು ತನ್ನ ಶಿಕ್ಷಣ ಅಥವಾ ಮದುವೆಗೆ ತಂದೆಯ ಹಣ ಪಡೆಯಲು ಅರ್ಹಳಲ್ಲ ಎಂದು ಸುಪ್ರೀಂಕೋರ್ಟ್‌ ಬುಧವಾರ ತಿಳಿಸಿದೆ.

“ಪ್ರಸ್ತುತ ಪ್ರಕರಣದಲ್ಲಿ ಮಗಳಿಗೆ 20 ವರ್ಷವಾಗಿದ್ದು ಆಕೆ ತನ್ನ ಹಾದಿ ಹಿಡಿಯಬಹುದು. ಆದರೆ ತನ್ನ ತಂದೆಯೊಂದಿಗೆ ಯಾವುದೇ ಬಾಂಧವ್ಯ ಹೊಂದಲು ಬಯಸದ ಆಕೆ ತನ್ನ ಶಿಕ್ಷಣಕ್ಕಾಗಿ ಅಪ್ಪನಿಂದ ಹಣ ಕೇಳುವಂತಿಲ್ಲ” ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಹಾಗೂ ಎಂ ಎಂ ಸುಂದರೇಶ್ ಅವರಿದ್ದ ಪೀಠ ವಿವರಿಸಿದೆ.

ಆದರೂ, ತಾಯಿಗೆ ಶಾಶ್ವತ ಜೀವನಾಂಶ ಪಾವತಿಸಬೇಕಾದ ಮೊತ್ತ ನಿರ್ಧರಿಸುವಾಗ, ತಾಯಿ ಮಗಳನ್ನು ಬೆಂಬಲಿಸಲು ಬಯಸಿದರೆ, ಆಗ ಹಣ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಿರಸ್ಕರಿಸಿದ್ದ ಪತಿಯ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ವಿಚ್ಛೇದನ ಅರ್ಜಿ ಬಾಕಿ ಇರುವಾಗಲೇ ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆ ಕೇಂದ್ರದ ಮುಂದೆ ಪತಿ ಹಾಗೂ ಪತ್ನಿ ನಡುವೆ ರಾಜಿ ಸಂಧಾನದ ಯತ್ನಗಳೂ ನಡೆದಿದ್ದವು. ಮಗಳು ಮತ್ತು ತಂದೆಯ ಅಂಶವನ್ನು ಕೂಡ ರಾಜಿ ಪ್ರಕ್ರಿಯೆಗೆ ಒಳಪಡಿಸಲಾಗಿತ್ತು.

ಮಗಳು ತಾನು ಹುಟ್ಟಿದಾಗಿನಿಂದಲೂ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಅಲ್ಲದೆ ತನ್ನ 20ನೇ ವಯಸ್ಸಿನಲ್ಲಿ ಕೂಡ ತಂದೆಯೊಂದಿಗೆ ಬಾಂಧವ್ಯ ಹೊಂದಲು ಬಯಸಿರಲಿಲ್ಲ. ಮಧ್ಯಸ್ಥಿಕೆ ವರದಿಯಲ್ಲಿ ಕೂಡ ಈ ಅಂಶವನ್ನು ಅರ್ಜಿದಾರ ಪತಿಯ ಪರ ವಕೀಲರು ಉಲ್ಲೇಖಿಸಿದ್ದರು.

ವಿವಾಹ ಸಂಬಂಧ ಮರುಹೊಂದಿಸಲಾರದಷ್ಟು ಬಿರುಕು ಬಿಟ್ಟಿದೆ. ಈ ಸಂಬಂಧದಲ್ಲಿ ಪರಸ್ಪರ ಕ್ರೌರ್ಯ ಹೊರತುಪಡಿಸಿ ಬೇರೇನೂ ಉಳಿಯದು. ಎರಡೂ ಕಡೆಯವರು ಒಟ್ಟಿಗೆ ಕೂರಲು ಇಲ್ಲವೇ ದೂರವಾಣಿಯಲ್ಲಿ ಮಾತನಾಡಲು ಕೂಡ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಇದೇ ವೇಳೆ ಮಗಳು ತನ್ನ ಶೈಕ್ಷಣಿಕ ವೆಚ್ಚಕ್ಕಾಗಿ ಹಣ ಕೇಳಲು ಅರ್ಹಳಲ್ಲ ಎಂದು ತಿಳಿಸಿತು.

ಆದರೆ, ಪ್ರತಿವಾದಿಗೆ ಶಾಶ್ವತ ಜೀವನಾಂಶ ಪಾವತಿಸಬೇಕಾದ ಮೊತ್ತ ನಿರ್ಧರಿಸುವಾಗ, ಪ್ರತಿವಾದಿಯು ಮಗಳನ್ನು ಬೆಂಬಲಿಸಲು ಬಯಸಿದರೆ ಹಣ ಲಭ್ಯವಾಗುವಂತೆ ನಾವು ಈಗಲೂ ಕಾಳಜಿ ವಹಿಸುತ್ತೇವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಆ ಮೂಲಕ ಪ್ರತಿವಾದಿಯ ಶಾಶ್ವತ ಜೀವನಾಂಶವನ್ನು ಸರ್ವೋಚ್ಚ ನ್ಯಾಯಾಲಯ ನಿಗದಿಪಡಿಸಿತು, ಪ್ರಸ್ತುತ ಮಧ್ಯಂತರ ಜೀವನಾಂಶವಾಗಿ ತಿಂಗಳಿಗೆ ₹ 8,000 ಪಾವತಿಸಲಾಗುತ್ತಿದ್ದು ಪರಿಹಾರದ ಅಂತಿಮ ಇತ್ಯರ್ಥದಂತೆ ಒಟ್ಟಾರೆ ₹ 10 ಲಕ್ಷ ನೀಡಬೇಕಾಗುತ್ತದೆ ಎಂದಿತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Ajay_Kumar_Rathee_vs_Seema_Rathee.pdf
Preview