Senior Advocate Dushyant Dave speaking at the webinar 
ಸುದ್ದಿಗಳು

ಕೊಲಿಜಿಯಂನಿಂದ ಆಡಳಿತಾತ್ಮಕ ಅಧಿಕಾರದ ವ್ಯಾಪಕ ದುರ್ಬಳಕೆ: ಸಮಕಾಲೀನ ಬೆಳವಣಿಗೆಗಳ ಬಗ್ಗೆ ದುಷ್ಯಂತ್ ದವೆ ಕಿಡಿನುಡಿ

“ಸುಪ್ರೀಂ ಕೋರ್ಟ್ ಅಧಃಪತನ 2014ರಲ್ಲಿ ಆರಂಭವಾಗಿದೆ ಎಂದು ನನಗೆ ಅನ್ನಿಸುತ್ತಿಲ್ಲ. 1992ರಲ್ಲಿ ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳೇ ನೇಮಕ ಮಾಡುವ ಅಧಿಕಾರ ಪಡೆದ ಬಳಿಕ ನ್ಯಾಯಾಂಗ ಅಧಃಪತನ ಆರಂಭವಾಯಿತು ಎಂದು ದುಷ್ಯಂತ್ ದವೆ ಆರೋಪಿಸಿದರು.

Bar & Bench

“ದೇಶಾದ್ಯಂತ ಆಡಳಿತಾತ್ಮಕ ಅಧಿಕಾರವನ್ನು ಕೊಲಿಜಿಯಂ ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ” ಎಂದು ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತಿನ ಅಧ್ಯಕ್ಷ ದುಷ್ಯಂತ್ ದವೆ ಗಂಭೀರ ಆರೋಪ ಮಾಡಿದರು.

ವೆಬಿನಾರ್ ಮೂಲಕ ಆಯೋಜಿಸಲಾಗಿದ್ದ ನ್ಯಾ. ಹೊಸಬೆಟ್ ಸುರೇಶ್ ಸ್ಮಾರಕ “ಅವನತ್ತಿಯತ್ತ ಸುಪ್ರೀಂ ಕೋರ್ಟ್: ಮರೆತುಹೋದ ಸ್ವಾತಂತ್ರ್ಯ ಮತ್ತು ಹಕ್ಕುಗಳ ನಾಶ” ಎಂಬ ವಿಷಯದ ಮೇಲಿನ ಉಪನ್ಯಾಸ ಕಾರ್ಯಕ್ರಮ ಮತ್ತು ಮರಣೋತ್ತರವಾಗಿ ನ್ಯಾ. ಹೊಸಬೆಟ್ಟು ಸುರೇಶ್ ಅವರಿಗೆ ಡಾ. ಅಸ್ಗರ್ ಅಲಿ ಎಂಜಿನಿಯರ್ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

“ಸುಪ್ರೀಂ ಕೋರ್ಟ್ ಅಧಃಪತನ 2014ರಲ್ಲಿ ಆರಂಭವಾಗಿದೆ ಎಂದು ನನಗೆ ಅನ್ನಿಸುತ್ತಿಲ್ಲ. 1992ರಲ್ಲಿ ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳೇ ನೇಮಕ ಮಾಡುವ ಅಧಿಕಾರ ಪಡೆದುಕೊಂಡ ಬಳಿಕ ನ್ಯಾಯಾಂಗ ಅಧಃಪತನ ಆರಂಭವಾಯಿತು. ಕೊಡು ಕೊಳ್ಳುವಿಕೆಯ ಆಧಾರದಲ್ಲಿ ಕೊಲಿಜಿಯಂ ವ್ಯವಸ್ಥೆ (ನ್ಯಾಯಮೂರ್ತಿಗಳ ನೇಮಕಾತಿ ವ್ಯವಸ್ಥೆ) ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.

“ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾದ ಮುಖ್ಯ ನ್ಯಾಯಮೂರ್ತಿ ಒಂದು ದಿನದ ಮಟ್ಟಿಗೆ ಕಚೇರಿಯಲ್ಲಿ ಮುಂದುವರಿಯುವ ಯಾವುದಾದರೂ ದೇಶದ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ? ಬಳಿಕ ಮಹಿಳೆಯನ್ನು ಕರ್ತವ್ಯಕ್ಕೆ ಮರು ನೇಮಿಸಲಾಗಿದೆ. ಆಕೆಯ ದೂರು ತಪ್ಪಾಗಿದ್ದರೆ ಆಕೆಯನ್ನು ಮರುನೇಮಕ ಮಾಡುತ್ತಿರಲಿಲ್ಲ” ಎನ್ನುವ ಮೂಲಕ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಕರಣವನ್ನು ನೆನಪಿಸಿದರು.

“ಭಾರತದಲ್ಲಿ ಸಂವಿಧಾನ ಇಂದು ಮುಖ್ಯವೇ ಆಗಿಲ್ಲ. ಕಾನೂನು ನಿಯಮಗಳೇ ಇಲ್ಲ. ಕಾನೂನು ದಿವ್ಯಮೌನ ವಹಿಸಿದೆ. ಜನರು ಮೌನವಾಗಿರುವುದು ಸಮಸ್ಯೆ. ಜನರ ಆತ್ಮಸಾಕ್ಷಿಯನ್ನು ಬಡಿದೇಳಿಸಬೇಕಿದೆ. ಮಸೀದಿಗೆ ತೆರಳುವವರನ್ನು ಕ್ರಿಮಿನಲ್ ಗಳು ಎಂದು ನೋಡುವುದಾದರೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲಕ್ಷಾಂತರ ಜನರನ್ನೇಕೆ ಕ್ರಿಮಿನಲ್‌ಗಳನ್ನಾಗಿ ನೋಡಲಿಲ್ಲ” ಎಂದು ಕಟುವಾಗಿ ಪ್ರಶ್ನಿಸಿದರು.

“ಅಮೆರಿಕದಲ್ಲಿ ಜಾರ್ಜ್‌ ಫ್ಲಾಯಿಡ್ ಕೊಲೆಯೊಂದಿಗೆ ಕಪ್ಪುವರ್ಣೀಯರ ಜೀವ ಮುಖ್ಯ ಎಂಬ ಅಭಿಯಾನ ಆರಂಭವಾಗಿತ್ತು. ಆದರೆ, ಭಾರತದಲ್ಲಿ ದಲಿತರು ಮತ್ತು ಮುಸ್ಲಿಮರ ಮಾರಣಹೋಮ ನಡೆಯುತ್ತಿದ್ದರೂ ಯಾರೂ ಮಾತನಾಡಲು ಬಯಸುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ದುಷ್ಯಂತ್ ದವೆ ಅವರ ಭಾಷಣದ ಪ್ರಮುಖ ಅಂಶಗಳು ಇಂತಿವೆ:

  • ಭಾರತದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ದೇಶದ ಪ್ರಜೆಗಳಾದ ನಾವು ಚಾರಿತ್ರ್ಯ ಕಳೆದುಕೊಂಡಿದ್ದೇವೆ. ಅದನ್ನು ಹೇಗೆ ಮರುಸ್ಥಾಪಿಸಬೇಕು ಎಂಬುದು ತಿಳಿಯದಾಗಿದೆ.

  • ನಮ್ಮ ಚಾರಿತ್ರ್ಯ ಮರುಸ್ಥಾಪಿಸಲು ಹೊಸದಾಗಿ ಮರು ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ. ಬಾಬರ್‌ನ ನಡತೆಗೆ ಆತನನ್ನು ಟೀಕಿಸಬೇಕಿದೆ. ಅಕ್ಬರ್‌ನ ಒಳ್ಳೆಯ ಕೆಲಸಕ್ಕೆ ಆತನನ್ನು ಶ್ಲಾಘಿಸಬೇಕಿದೆ. ಭಾರತದಲ್ಲಿ ಪ್ರಜಾಪ್ರಭುತ್ವವು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕೆಲಸ ಮಾಡುತ್ತದೆ.

  • ಪ್ರಪಂಚದಾದ್ಯಂತ ಉದ್ದುದ್ದ ವಿಭಾಗಿಸುವ ನಾಯಕರೇ ದೇಶಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ಜಾಗತೀಕರಣದ ಹತ್ಯೆ ಮಾಡಲು ಯತ್ನಿಸಲಾಗುತ್ತಿದೆ. ಚೀನಾದ ಪದಾರ್ಥಗಳು ದೊರೆಯದಿದ್ದರೆ ಭಾರತದ ಫಾರ್ಮಾ ಕ್ಷೇತ್ರದ ಸ್ಥಿತಿ ಏನಾಗಬೇಕು?

  • ಎಲ್ಲಾ ಸಿದ್ಧಾಂತಗಳನ್ನು ಸಂರಕ್ಷಿಸಬೇಕು ಮತ್ತು ಗೌರವಿಸಬೇಕು. ಸಂವಿಧಾನ ರಚನಾ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ದೇಶ ವಿಭಜನೆಯ ಬಳಿಕ ಭಾರತದಲ್ಲಿ ಉಳಿಯಲು ಬಯಸುವ ಮುಸ್ಲಿಮರ ಭವಿಷ್ಯವು ಬಹುಸಂಖ್ಯಾತರ ಕೈಯಲ್ಲಿರುತ್ತದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಂರಕ್ಷಿಸುವ ಜವಾಬ್ದಾರಿ ಬಹುಸಂಖ್ಯಾತರ ಮೇಲಿರುತ್ತದೆ ಎಂದು ಹೇಳಿದ್ದರು.

  • ಸಂವಿಧಾನ ಕರಡಿನ ಸಂದರ್ಭದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಲಾಗಿತ್ತು. ನ್ಯಾಯಾಂಗದ ನೇಮಕಾತಿಯಲ್ಲಿ ಕಾರ್ಯಾಂಗದ ಒತ್ತಡವು ನ್ಯಾಯಾಂಗದ ಪ್ರಾಧಾನ್ಯತೆ ಕಡಿಮೆಯಾಗಬಹುದಾದ ಸ್ಥಿತಿ ಬಂದೊದಗಬಹುದು ಡಾ. ಅಂಬೇಡ್ಕರ್ ಅವರಿಗೂ ತಿಳಿದಿರಲಿಲ್ಲ. ಕೊಲಿಜಿಯಂ ವ್ಯವಸ್ಥೆಯು ಇನ್ನಷ್ಟು ಕ್ರಿಯಾತ್ಮಕವಾಗಬೇಕಿದೆ ಎಂದು ನನಗನ್ನಿಸುತ್ತದೆ.

  • ಬಾರ್ ಅಂಡ್ ಬೆಂಚ್‌ನಿಂದಾಗಿ ನ್ಯಾಯಾಂಗ ಕರ್ತವ್ಯ ನಿರ್ವಹಿಸುತ್ತಿದೆ. ಇಂದು ವಕೀಲ ವೃಂದ ಎಲ್ಲಿದೆ? ವಕೀಲರು ಟಿವಿಯಲ್ಲಿ ಬರುತ್ತಾರೆ. ಆದರೆ ಅವರು ನ್ಯಾಯಾಂಗದ ವಿರುದ್ಧ ಮಾತನಾಡುವುದನ್ನು ನೋಡಿದ್ದೀರಾ? ವಕೀಲರ ಪರಿಷತ್ತಿನ ಮಾನದಂಡಗಳ ಬಗ್ಗೆ ನಮಗೆ ಆತಂಕವಿದೆ.