Election  
ಸುದ್ದಿಗಳು

ಬಂಧಿತ ರಾಜಕಾರಣಿಗಳು ಚುನಾವಣಾ ಪ್ರಚಾರ ನಡೆಸುವುದಾದರೆ ದಾವೂದ್‌ ಕೂಡ ಕಣಕ್ಕಿಳಿಯಬಹುದು: ದೆಹಲಿ ಹೈಕೋರ್ಟ್

Bar & Bench

ಬಂಧನಕ್ಕೊಳಗಾದ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಚುನಾವಣಾ ಪ್ರಚಾರ ನಡೆಸಲು ಕಾರ್ಯವಿಧಾನವೊಂದನ್ನು ಅಭಿವೃದ್ಧಿಪಡಿಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಅರ್ಜಿ ಸಲ್ಲಿಸಿದ್ದ ಕಾನೂನು ವಿದ್ಯಾರ್ಥಿಗೆ ದಂಡ ವಿಧಿಸಲು ಇಚ್ಛಿಸದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಅಧಿಕಾರ ಪ್ರತ್ಯೇಕತೆ ಕುರಿತಂತೆ ಅರ್ಜಿದಾರರಿಗೆ ತಿಳಿಸಿಕೊಡಲು ಪ್ರಕರಣದ ವಕೀಲರಿಗೆ ತಿಳಿಸಿತು.

ಅರವಿಂದ್ ಕೇಜ್ರಿವಾಲ್ ಅವರ ಬಂಧನ ಪ್ರಸ್ತಾಪಿಸಿದ್ದ ಪಿಐಎಲ್‌ ದೆಹಲಿಯ ಜನ ಎಎಪಿಯ ಸಿದ್ಧಾಂತ, ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ದೂರಿತ್ತು.

ಬಂಧಿತರಾಗಿರುವ ಎಲ್ಲಾ ರಾಜಕಾರಣಿಗಳೂ ವೀಡಿಯೊ ಕಾನ್ಫರೆನ್ಸ್‌ ಮೂಲಕ ಚುನಾವಣಾ ಪ್ರಚಾರ ನಡೆಸಲು ಅವಕಾಶ ಕಲ್ಪಿಸಬೇಕೆಂದು ನೀವು ಬಯಸುತ್ತೀರಿ. ಹಾಗೆ ಮಾಡಿದರೆ ಎಲ್ಲಾ ಭಯೋತ್ಪಾದಕ ಅಪರಾಧಿಗಳೂ ರಾಜಕೀಯ ಪಕ್ಷ ಕಟ್ಟಿಕೊಂಡುಬಿಡುತ್ತಾರೆ. ದಾವೂದ್ ಇಬ್ರಾಹಿಂ ಚುನಾವಣೆಯಲ್ಲಿ ಸ್ಪರ್ಧಿಸಿ ವೀಡಿಯೊ ಕಾನ್ಫರೆನ್ಸ್‌‌ ಮೂಲಕ ಪ್ರಚಾರ ಮಾಡುತ್ತಾನೆ ಎಂದು ನ್ಯಾ. ಮನಮೋಹನ್‌ ಹೇಳಿದರು.

ಪೀಠ ರಾಜಕೀಯ ವಿಚಾರವಾಗಿ ಮಾತನಾಡಲು ಬಯಸುವುದಿಲ್ಲ ಆದರೆ ನ್ಯಾಯಾಲಯ  ರಾಜಕೀಯ ಕ್ಷೇತ್ರ ಪ್ರವೇಶಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ ಕಳೆದ ಕೆಲ ವಾರಗಳಲ್ಲಿ ವ್ಯಕ್ತಿಯೊಬ್ಬರನ್ನು ಜೈಲಿಗೆ ಹಾಕಬೇಕು ಎನ್ನುವ ಇಲ್ಲವೇ ಬಿಡುಗಡೆ ಮಾಡಿ ಎನ್ನುವ ಹಲವು ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ ಎಂದು ಅವರು ತಿಳಿಸಿದರು.

ಪ್ರಚಾರದ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದ್ದು ಇದು ನ್ಯಾಯಾಲಯಕ್ಕೆ ತಿಳಿದಿದೆ. ಕಾನೂನಿನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿ ಅರ್ಜಿ ಇದೆ ಎಂದು ಅದು ಹೇಳಿತು.

ನ್ಯಾಯಾಲಯಗಳು ಕಾನೂನಿಗೆ ಬದ್ಧವಲ್ಲ ಎಂಬ ಕಲ್ಪನೆ ಜನರಿಗೆ ಇದೆ. ಅರ್ಜಿದಾರರು ಕಾನೂನಿಗೆ ವಿರುದ್ಧವಾಗಿ ವರ್ತಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಈ ಹಿಂದೆ ಕೇಜ್ರಿವಾಲ್‌ ಅವರಿಗೆ ಅಸಾಧಾರಣ ಮಧ್ಯಂತರ ಜಾಮೀನು ನೀಡುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ₹ 75 ಸಾವಿರ ದಂಡ ವಿಧಿಸಿದ್ದ ನ್ಯಾಯಾಲಯ ಅಷ್ಟೇ ಮೊತ್ತದ ದಂಡವನ್ನು ಈ ಮನವಿದಾರರಿಗೂ ವಿಧಿಸಿ ಅರ್ಜಿ ವಜಾಗೊಳಿಸಲು ಮುಂದಾಯಿತು. ಆದರೆ ಅರ್ಜಿದಾರರು ಕಾನೂನು ವಿದ್ಯಾರ್ಥಿ ಎಂದು ಅವರ ಪರ ವಕೀಲರು ತಿಳಿಸಿದರು. ಆಗ ಅಧಿಕಾರ ಪ್ರತ್ಯೇಕತೆ ಕುರಿತಂತೆ ಅರ್ಜಿದಾರರಿಗೆ ವಕೀಲರು ತಿಳಿಸಿಕೊಡುವುದಾದರೆ ದಂಡ ವಿಧಿಸುವುದಿಲ್ಲ ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು.