Justice Suraj Govindraj 
ಸುದ್ದಿಗಳು

ಕೇಂದ್ರ ಸರ್ಕಾರದ ಉದ್ಯೋಗಿಗಳ ಜಾತಿ ಪ್ರಮಾಣ ಪತ್ರ ಪರಿಶೀಲಿಸುವ ಅಧಿಕಾರ ಡಿಸಿವಿಸಿಗಿದೆ: ಹೈಕೋರ್ಟ್‌

ಸಂಭಾವ್ಯ ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಕೇಂದ್ರ ಸರ್ಕಾರದ ಸಿಬ್ಬಂದಿಗೆ ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ವಿತರಿಸಿದ್ದರೆ, ಅದನ್ನು ಪರಿಶೀಲಿಸುವ ಅಧಿಕಾರವನ್ನು ಡಿಸಿವಿಸಿ ಹೊಂದಿರುತ್ತದೆ ಎಂದಿರುವ ನ್ಯಾಯಾಲಯ.

Bar & Bench

ಕೇಂದ್ರ ಸರ್ಕಾರಿ ನೌಕರರ ಜಾತಿ ಪ್ರಮಾಣ ಪತ್ರ ಪರಿಶೀಲಿಸುವ ಅಧಿಕಾರ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ (ಡಿಸಿವಿಸಿ) ಇದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ ಸ್ಪಷ್ಟಪಡಿಸಿದೆ.

ಜಾತಿ ಪ್ರಮಾಣಪತ್ರ ಪರಿಶೀಲನಾ ಕಾರ್ಯವನ್ನು ಡಿಸಿವಿಸಿಗೆ ವಹಿಸಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ಹೊಸಪೇಟೆಯ ನೈರುತ್ಯ ರೈಲ್ವೆ ವಲಯದ ನಿವೃತ್ತ ತಾಂತ್ರಿಕ ಸಿಬ್ಬಂದಿ ಸಂಗಪ್ಪ ಎಂ.ಬಾಗೇವಾಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

ಸಂಭಾವ್ಯ ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಕೇಂದ್ರ ಸರ್ಕಾರದ ಸಿಬ್ಬಂದಿಗೆ ತಹಶೀಲ್ದಾರ್ ಜಾತಿ ಪ್ರಮಾಣ ಪತ್ರ ವಿತರಿಸಿದ್ದರೆ, ಅದನ್ನು ಪರಿಶೀಲಿಸುವ ಅಧಿಕಾರವನ್ನು ಡಿಸಿವಿಸಿ ಹೊಂದಿರುತ್ತದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು ಇತ್ಯಾದಿ) ಕಾಯಿದೆ–1992ರ ಅನುಸಾರವೇ ಡಿಸಿವಿಸಿ ರಚನೆ ಮಾಡಲಾಗಿದೆ. ಅವುಗಳಿಗೆ ಜಾತಿ ಪ್ರಮಾಣ ಪತ್ರಗಳ ಪರಿಶೀಲನೆ ಮಾಡುವ ಅಧಿಕಾರವನ್ನು ಸಂವಿಧಾನದತ್ತವಾಗಿ ನೀಡಲಾಗಿದೆ. ಹೀಗಾಗಿ, ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪೀಠ ತಿಳಿಸಿದೆ. ಡಿಸಿವಿಸಿ ಪರ ವಕೀಲ ಸಿ ಜಗದೀಶ್‌ ವಾದಿಸಿದ್ದರು.