UAPA 
ಸುದ್ದಿಗಳು

ಯುಎಪಿಎ ಅಡಿಯಲ್ಲಿ ವಿಚಾರಣೆಗೆ ಅನುಮತಿಸಲು ಇರುವ ಗಡುವು ಕಡ್ಡಾಯವಾದುದು, ಕೇವಲ ಔಪಚಾರಿಕವಲ್ಲ: ಸುಪ್ರೀಂ ಕೋರ್ಟ್

ಯುಎಪಿಎ ಅಡಿಯಲ್ಲಿ ಗಡುವಿನ ಬಗ್ಗೆ ಹೇಳುವಾಗ 'ಶಲ್' ಎಂಬ ಆಂಗ್ಲಪದದ ಬಳಕೆ ಇದ್ದು ಇದು, ಕೇವಲ ಔಪಚಾರಿಕತೆ ಅಥವಾ ತಾಂತ್ರಿಕತೆಗೆ ಸಂಬಂಧಿಸಿದ್ದಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, 1967ರ (ಯುಎಪಿಎ) ಅಡಿಯಲ್ಲಿ ಆರೋಪಿಯ ವಿಚಾರಣೆಗೆ ಅನುಮತಿ ನೀಡಲು ಸರ್ಕಾರಕ್ಕೆ ನೀಡಿರುವ ಕಾಲಮಿತಿಯು ಕಡ್ಡಾಯವಾದುದಾಗಿದ್ದು, ಅದನ್ನು ಔಪಚಾರಿಕವೆಂದು ಪರಿಗಣಿಸುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ [ಫುಲೇಶ್ವರ್ ಗೋಪೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಇಂತಹ ಗಡುವುಗಳು ಕಾರ್ಯಾಂಗದ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳದಂತೆ ಕಾರ್ಯ ನಿರ್ವಹಿಸುತ್ತವೆ ಎಂದು ನ್ಯಾಯಮೂರ್ತಿಗಳಾದ ಸಿ ಟಿ ರವಿಕುಮಾರ್ ಮತ್ತು ಸಂಜಯ್ ಕರೋಲ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

"ಪ್ರಕರಣ ದಾಖಲಿಸಿಕೊಳ್ಳಲು ಅನುಸರಿಸಬೇಕಾದ ವಿವರವಾದ ಪ್ರಕ್ರಿಯೆಯನ್ನು ಯುಎಪಿಎ ಹೇಳುತ್ತದೆ. ನಿಸ್ಸಂದೇಹವಾಗಿ, ಅದನ್ನು ಅಕ್ಷರಶಃ ಪಾಲಿಸಬೇಕು... ಯುಎಪಿಎ ಅಡಿಯಲ್ಲಿ ಗಡುವಿನ ಬಗ್ಗೆ ಹೇಳುವಾಗ 'ಶಲ್'  ಎಂಬ ಆಂಗ್ಲಪದದ ಬಳಕೆ ಇದ್ದು ಇದು, ಕೇವಲ ಔಪಚಾರಿಕತೆ ಅಥವಾ ತಾಂತ್ರಿಕ ನೆಲೆಯಲ್ಲಿ ಹೇಳಿದ್ದಾಗಿದೆ ಎಂದು ಪರಿಗಣಿಸಲಾಗದು” ಎಂಬುದಾಗಿ ಪೀಠ ತಿಳಿಸಿತು.

ಭಯೋತ್ಪಾದನಾ ವಿರೋಧಿ ಕಾಯಿದೆ ಜಾರಿಗೆ ತರಲು ಅಗತ್ಯವಿರುವ ಎಲ್ಲಾ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಯುಎಪಿಎ ಸಾಕಷ್ಟು ಅಧಿಕಾರ ನೀಡುತ್ತದೆಯಾದರೂ  ಆರೋಪಿಗಳ ಹಕ್ಕುಗಳನ್ನು ಸಹ ರಕ್ಷಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅಂತಹ ಪ್ರಕರಣಗಳಲ್ಲಿ ಕಾರ್ಯಾಂಗ ಕ್ಷಿಪ್ರವಾಗಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸಲಾಗುತ್ತದೆ ಎಂದಿದೆ.

ಪ್ರಮುಖವಾಗಿ, ಯುಎಪಿಎ ಅಡಿಯಲ್ಲಿ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲು ಸರ್ಕಾರದ ಅನುಮತಿ ಅಗತ್ಯ. ಈ ಪ್ರಕ್ರಿಯೆ ಎರಡು ಹಂತದ ಕಾರ್ಯವಿಧಾನವನ್ನು ಒಳಗೊಂಡಿದ್ದು, ಇದು ಯುಎಪಿಎ ನಿಯಮಾವಳಿ ಪ್ರಕಾರ 14 ಕೆಲಸದ ದಿನಗಳಲ್ಲಿ ಪೂರ್ಣಗೊಳ್ಳಬೇಕು.

ಈ 14 ದಿನಗಳ ಗಡುವು ಕಡ್ಡಾಯವೇ ಅಥವಾ ನಿರ್ದೇಶನ ಮಾತ್ರವೇ ಎಂಬುದರ ಕುರಿತು ಅಭಿಪ್ರಾಯ ಭೇದಗಳಿದ್ದವು.

ಬಾಂಬೆ ಹೈಕೋರ್ಟ್ ಮತ್ತು ಜಾರ್ಖಂಡ್ ಹೈಕೋರ್ಟ್ ಗಡುವನ್ನು ನಿರ್ದೇಶನಾತ್ಮಕ ಎಂದು ವ್ಯಾಖ್ಯಾನಿಸಿದರೆ ಕೇರಳ ಹೈಕೋರ್ಟ್ ಇದನ್ನು ಕಡ್ಡಾಯ ಎಂದಿತ್ತು. ಇದೀಗ ಸುಪ್ರೀಂ ಕೋರ್ಟ್‌ ಗಡುವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತೀರ್ಪು ನೀಡಿದೆ.