clat 2021 
ಸುದ್ದಿಗಳು

ಸಿಎಲ್‌ಎಟಿ 2021 ಆನ್‌ಲೈನ್‌ ಅರ್ಜಿ ಸಲ್ಲಿಕೆ ಗಡುವನ್ನು ಮೇ 15ರವರೆಗೆ ವಿಸ್ತರಿಸಿದ ಎನ್‌ಎಲ್‌ಯುಸಿ

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು (ಎನ್‌ಎಲ್‌ಯುಸಿ) ಏಪ್ರಿಲ್‌ 28ರಂದು ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Bar & Bench

ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ 2021) ಬರೆಯುವ ಸಂಬಂಧ ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ವಿಧಿಸಲಾಗಿದ್ದ ಗಡುವನ್ನು ಏಪ್ರಿಲ್‌ 30ರಿಂದ ಮೇ 15ಕ್ಕೆ ವಿಸ್ತರಿಸಲಾಗಿದೆ. ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಏಪ್ರಿಲ್‌ 28ರಂದು ನಡೆಸಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ.

“ಲಾಕ್‌ಡೌನ್‌ ಮತ್ತು ಬ್ಯಾಂಕ್‌ಗಳು ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ ಇತ್ತೀಚಿನ ಬೆಳವಣಿಗೆಗಳನ್ನು ಪರಿಶೀಲಿಸಿದ ಬಳಿಕ ಸಮಿತಿಯು ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಿಸಿದೆ. ಸಿಎಲ್‌ಎಟಿ 2021ಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ” ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಅಧಿಸೂಚನೆಯಲ್ಲಿ ತಿಳಿಸಿದೆ.

ಜನವರಿಯಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಕಟಿಸಿದ ಪರೀಕ್ಷಾ ದಿನಾಂಕಗಳು ಹಾಗೂ ಸಿಎಲ್‌ಎಟಿ ದಿನಾಂಕದ ನಡುವೆ ಹೊಂದಾಣಿಕೆ ಉಂಟಾಗದ ಹಿನ್ನೆಲೆಯಲ್ಲಿ ಮೇ 9ಕ್ಕೆ ನಡೆಸಲು ಉದ್ದೇಶಿಸಲಾಗಿದ್ದ ಸಿಎಲ್‌ಎಟಿ ಅನ್ನು ಜೂನ್‌ 13ಕ್ಕೆ ಮುಂದೂಡಲಾಗಿತ್ತು. ಹೀಗಾಗಿ ಮಾರ್ಚ್‌ 30ಕ್ಕೆ ನಿಗದಿಪಡಿಸಿದ್ದ ಅರ್ಜಿ ಸಲ್ಲಿಕೆಗೆ ಕೊನೆಯ ದಿನದ ಗಡುವನ್ನು ಏಪ್ರಿಲ್‌ 30ಕ್ಕೆ ಹಿಂದೆ ವಿಸ್ತರಿಸಲಾಗಿತ್ತು.

ಸಿಎಲ್‌ಎಟಿ 2021 ಬರೆಯಲು ಉತ್ಸುಕರಾಗಿರುವ ವಿದ್ಯಾರ್ಥಿಗಳು ಎನ್‌ಎಲ್‌ಯು ಒಕ್ಕೂಟದ ವೆಬ್‌ಸೈಟ್‌ https://consortiumofnlus.ac.in/ ಗೆ ಆಗಾಗ್ಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.