Justice Suraj Govindraj 
ಸುದ್ದಿಗಳು

ಸೇವಾವಧಿಯಲ್ಲಿ ಮರಣ: ಅನುಕಂಪದ ಉದ್ಯೋಗಕ್ಕೆ ಮಾನವೀಯ ನೀತಿ ರೂಪಿಸಲು ಎನ್‌ಡಬ್ಲ್ಯುಕೆಆರ್‌ಟಿಸಿಗೆ ಹೈಕೋರ್ಟ್‌ ನಿರ್ದೇಶನ

ಹಾಲಿ ಪ್ರಕರಣದಲ್ಲಿ ಮಹಿಳೆ ವಯಸ್ಸು ನಿಗಮ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ ಮೀರಿದೆ ಎನ್ನುವುದು ಪ್ರತಿವಾದಿಗಳ ವಾದವಾಗಿದ್ದರೂ, ಮಹಿಳೆಯ ಪರಿಸ್ಥಿತಿ ಗಣನೆಗೆ ತೆಗೆದುಕೊಂಡು ಅದನ್ನು ಮಾನವೀಯವಾಗಿ ಪರಿಗಣಿಸಬೇಕಾಗುತ್ತದೆ ಎಂದಿರುವ ಹೈಕೋರ್ಟ್.‌

Bar & Bench

ಸೇವಾವಧಿಯಲ್ಲಿರುವ ನೌಕರರು ಮರಣ ಹೊಂದಿದ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾನವೀಯ ನೀತಿಯೊಂದನ್ನು ರೂಪಿಸುವಂತೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ನಿರ್ದೇಶಿಸಿದೆ.

ಶಿರಹಟ್ಟಿ ಡಿಪೋನಲ್ಲಿ ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದ ಪತಿ ಮರಣ ಹೊಂದಿದ ಬಳಿಕ ಅನುಕಂಪದ ಉದ್ಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಯೋಮಿತಿ ಮೀರಿದ್ದ ಕಾರಣಕ್ಕೆ ತಿರಸ್ಕರಿಸಿದ್ದ ಕೆಎಸ್‌ಆರ್‌ಟಿಸಿ ಗದಗ ವಿಭಾಗೀಯ ನಿಯಂತ್ರಕರ ಕ್ರಮ ಪ್ರಶ್ನಿಸಿ ಲಕ್ಷ್ಮವ್ವ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಮೃತ ನೌಕರನ ಪತ್ನಿಯನ್ನು (ಅರ್ಜಿದಾರ ಮಹಿಳೆ) ನಿಗಮದ ಡಿ ಗ್ರೂಪ್ ಉದ್ಯೋಗಿಗೆ ಅನ್ವಯವಾಗುವ ಸಾಮಾನ್ಯ ನಿಯಮಗಳ ಅನುಸಾರ ಗರಿಷ್ಠ ವಯೋಮಿತಿಯನ್ನು ಉಲ್ಲೇಖಿಸದೆಯೇ ಶಿರಹಟ್ಟಿ ಡಿಪೋನಲ್ಲಿ ಡಿ ದರ್ಜೆಯ ಹುದ್ದೆಗೆ ನೇಮಕ ಮಾಡುವಂತೆ ಗದಗ ವಿಭಾಗದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ನಿರ್ದೇಶಿಸಿದೆ.

ಇದೇ ವೇಳೆ, ಇಂಥ ಪ್ರಕರಣಗಳನ್ನು ಪರಿಶೀಲಿಸಿ ಸೇವೆಯಲ್ಲಿರುವ ನೌಕರರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರ ಹಿತದೃಷ್ಟಿಯಿಂದ ಸೂಕ್ತ ಮಾನವೀಯ ನೀತಿಯೊಂದನ್ನು ರೂಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಾಯುವ್ಯ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪೀಠ ಸೂಚನೆ ನೀಡಿದೆ.

ಗರಿಷ್ಠ ವಯೋಮಿತಿ ಮೀರಿದ ಕಾರಣಕ್ಕೆ ವಿಧವೆಯೊಬ್ಬರಿಗೆ ಅನುಕಂಪದ ನೇಮಕಾತಿ ನಿರಾಕರಿಸಿದ ದುಃಖಕರ ಪ್ರಕರಣ ಇದಾಗಿದೆ. ಮೃತ ಉದ್ಯೋಗಿಯ ಅವಲಂಬಿತರ ಜೀವನ ಯಾವುದೇ ಸಮಸ್ಯೆ ಇಲ್ಲದೆ ಮುಂದುವರಿಯುವುದನ್ನು ಖಾತ್ರಿಪಡಿಸುವುದೇ ಅನುಕಂಪದ ಆಧಾರದ ನೇಮಕಾತಿಯ ಉದ್ದೇಶವಾಗಿದೆ. ಇದರಿಂದ, ಉದ್ಯೋಗಿಗೆ ತನ್ನ ಮರಣದ ನಂತರವೂ ತನ್ನ ಅವಲಂಬಿತರನ್ನು ಉದ್ಯೋಗದಾತರು ನೋಡಿಕೊಳ್ಳುತ್ತಾರೆ ಎಂಬ ಭರವಸೆ ಮೂಡುತ್ತದೆ. ಈ ಪ್ರಕರಣದಲ್ಲಿ ಮಹಿಳೆಯ ವಯಸ್ಸು ನಿಗಮ ನಿಗದಿಪಡಿಸಿರುವ ಗರಿಷ್ಠ ವಯೋಮಿತಿ ಮೀರಿದೆ ಎನ್ನುವುದು ಪ್ರತಿವಾದಿಗಳ ವಾದವಾಗಿದ್ದರೂ, ಮಹಿಳೆಯ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಅದನ್ನು ಮಾನವೀಯವಾಗಿ ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿದಾರ ಮಹಿಳೆ ಮೃತ ಉದ್ಯೋಗಿಯ ಪತ್ನಿಯಾಗಿದ್ದು, ಅವರಿಗೆ ಮಕ್ಕಳು ಸಹ ಇಲ್ಲ. ಇಂಥ ಸಂದರ್ಭದಲ್ಲಿ ಗರಿಷ್ಠ ವಯೋಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಆಕೆಗೆ ಅನ್ಯಾಯವಾಗಲಿದೆ. ಅರ್ಜಿದಾರರು ವಿಧವೆಯಾಗಿದ್ದು, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂಬ ವಿಶೇಷ ಸನ್ನಿವೇಶವನ್ನು ಪರಿಗಣಿಸಿದಾಗ, ಪ್ರತಿವಾದಿಗಳು ಅರ್ಜಿದಾರರಿಗೆ ಅನುಕಂಪದ ಉದ್ಯೋಗ ನಿರಾಕರಿಸಿರುವುದು ಮಾನವೀಯ ನಡೆಯಲ್ಲ. ಇದರಿಂದ, ಮೃತ ಉದ್ಯೋಗಿಯ ಪತ್ನಿಗೆ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಮಹಿಳೆಗೆ ಉದ್ಯೋಗ ನಿರಾಕರಿಸಿ ನೀಡಲಾಗಿದ್ದ ಹಿಂಬರಹಗಳನ್ನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: ಗದಗ ಜಿಲ್ಲೆಯ ಶಿರಹಟ್ಟಿ ಡಿಪೊದಲ್ಲಿ ನಿಯಂತ್ರಕರಾಗಿ ಕೆಲಸ ಮಾಡುತ್ತಿದ್ದ ರಾಮಣ್ಣ ಗೋಶೆಲ್ಲನವರ್ 2021ರ ಜೂನ್ 25ರಂದು ಮರಣ ಹೊಂದಿದ್ದರು. ಆನಂತರ, ರಾಮಣ್ಣ ಪತ್ನಿ ಲಕ್ಷ್ಮವ್ವ ತಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಡಿ ದರ್ಜೆಯ ಹುದ್ದೆಗೆ ಅನುಕಂಪದ ಆಧಾರದಲ್ಲಿ ನೇಮಕಾತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಮಹಿಳೆಯ ವಯಸ್ಸು 45 ವರ್ಷ ದಾಟಿದ್ದ ಕಾರಣಕ್ಕೆ ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಲ್ಲ ಎಂದು ತಿಳಿಸಿ ಅರ್ಜಿ ತಿರಸ್ಕರಿಸಿ ಹಿಂಬರಹ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮಹಿಳೆಯ ಪರ ವಾದ ಮಂಡಿಸಿದ್ದ ವಕೀಲ ಹೇಮಂತ್ ಕುಮಾರ್ ಎಲ್. ಹಾವರಗಿ ಅವರು “ಅರ್ಜಿದಾರರು ಮೃತ ಉದ್ಯೋಗಿಯ ಪತ್ನಿಯಾಗಿದ್ದು, ಮಕ್ಕಳಿಲ್ಲದ ಅವರನ್ನು ನೋಡಿಕೊಳ್ಳಲು ಬೇರೆ ಯಾರೂ ಇಲ್ಲ. ಅವರ ಜೀವನೋಪಾಯಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕಲ್ಪಿಸಲು ನಿಗಮಕ್ಕೆ ನಿರ್ದೇಶಿಸಬೇಕು” ಎಂದು ಕೋರಿದ್ದರು.

ನಿಗಮದ ಪರ ವಕೀಲ ಪ್ರಶಾಂತ್ ಹೊಸಮನಿ ಅವರು “ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ಪ್ರಕರಣದಲ್ಲಿ ಮಹಿಳೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ದಿನಾಂಕದಂದು ಅವರಿಗೆ 45 ವರ್ಷ 7 ತಿಂಗಳು ವಯಸ್ಸಾಗಿತ್ತು. ಗರಿಷ್ಠ ವಯೋಮಿತಿ ಮೀರಿದ್ದರಿಂದ ಅವರು ಅನುಕಂಪದ ನೇಮಕಾತಿಗೆ ಅರ್ಹತೆ ಹೊಂದಿರಲಿಲ್ಲ. ಆದ್ದರಿಂದ, ಅವರ ಅರ್ಜಿ ತಿರಸ್ಕರಿಸಿ ಹೊರಡಿಸಲಾದ ಆದೇಶ ಸರಿಯಾಗಿದ್ದು, ಅದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ‌‌” ಎಂದು ವಾದಿಸಿದ್ದರು.

Lakshmavva Vs State of Karnataka.pdf
Preview