Justice M Nagaprasanna 
ಸುದ್ದಿಗಳು

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಕಠಿಣ ಶಿಸ್ತು ಕ್ರಮ ನೀತಿ ಮರುಪರಿಶೀಲಿಸಲು ಶಾಲೆಗಳಿಗೆ ಹೈಕೋರ್ಟ್‌ ಸಲಹೆ

ಶಾಲೆಗಳಲ್ಲಿ ಕೈಗೊಳ್ಳುವ ಶಿಸ್ತು ಕ್ರಮ ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಹೀಗಾಗಿ, ಶಾಲೆಗಳು ತಮ್ಮ ಪುರಾತನ ಮನಸ್ಥಿತಿ ಬದಲಿಸಿಕೊಳ್ಳಬೇಕು ಮತ್ತು ಮಕ್ಕಳ ಜೀವಹರಣವಾಗುವುದನ್ನು ತಪ್ಪಿಸಬೇಕು ಎಂದ ನ್ಯಾಯಾಲಯ.

Bar & Bench

ಶಾಲೆಗಳು ವಿದ್ಯಾರ್ಥಿಗಳ ಮೇಲೆ ಕಠಿಣ ಶಿಸ್ತು ಕ್ರಮಗಳನ್ನು ಜರುಗಿಸುವುದು ಆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಅಂತಹ ನೀತಿ ಮರುಪರಿಶೀಲಿಸಬೇಕು ಎಂದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಶಾಲೆಗಳಿಗೆ ಸಲಹೆ ನೀಡಿದೆ.

ಕೊಡಗಿನ ಶಾಲಾ ಸಿಬ್ಬಂದಿ ಗೌರಮ್ಮ, ದತ್ತ ಕುರುಂಬಯ್ಯ ಮತ್ತು ಚೇತನಾ ಬೋಪಣ್ಣ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.

ಶಾಲೆಗಳಲ್ಲಿ ಕೈಗೊಳ್ಳುವ ಕಠಿಣ ಶಿಸ್ತು ಕ್ರಮಗಳು ಕೆಲವೊಮ್ಮೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿವೆ. ಹೀಗಾಗಿ, ಶಾಲೆಗಳು ತಮ್ಮ ಪುರಾತನ ಮನಸ್ಥಿತಿ ಬದಲಿಸಿಕೊಳ್ಳಬೇಕು ಮತ್ತು ಮಕ್ಕಳ ಜೀವಹರಣವಾಗುವುದನ್ನು ತಪ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಹಾಲಿ ಪ್ರಕರಣದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದು ಐಪಿಸಿ ಸೆಕ್ಷನ್ 107 ಮತ್ತು ಜತೆಗೆ ಅದು ಸೆಕ್ಷನ್ 305 ಕೂಡ ಅನ್ವಯವಾಗುತ್ತದೆ. ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ತಲುಪಲು ಶಾಲೆಯ ಸಿಬ್ಬಂಂದಿಯೇ ಪ್ರಚೋದನೆ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ವಿಚಾರಣೆಯಲ್ಲಿ ಸಾಬೀತಾಗಲಿ ಎಂದು ಪೀಠ ಹೇಳಿದೆ.

ಬಾಲಕ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 15 ನಿಮಿಷದವರೆಗೆ ಶಾಲೆಯ ಜೊತೆ ಸಂಪರ್ಕದಲ್ಲಿದ್ದನು. ಹೀಗಾಗಿ ಮೇಲ್ನೋಟಕ್ಕೆ ಪ್ರಕರಣದಲ್ಲಿ ಸತ್ಯಾಂಶವಿದೆ ಎಂದೆನಿಸುತ್ತಿದೆ. ಪ್ರಕರಣದಲ್ಲಿ ಶಾಲೆ ತನ್ನ ತಪ್ಪು ಮುಚ್ಚಿಹಾಕಿಕೊಳ್ಳಲು ವಿದ್ಯಾರ್ಥಿಯ ಮೇಲೆ ಆರೋಪ ಹೊರಿಸುತ್ತಿದೆ. ಹೀಗಾಗಿ, ಪ್ರಕರಣದಲ್ಲಿ ಮುಂದಿನ ವಿಚಾರಣೆ ನಡೆದು ಸತ್ಯಾಸತ್ಯತೆ ಹೊರಬೀಳಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಕೊಡಗಿನ ಒಂಭತ್ತನೇ ತರಗತಿಯ ವಿದ್ಯಾರ್ಥಿಯನ್ನು ಆತ ಶಾಲೆಗೆ ಮದ್ಯ ತಂದಿದ್ದ ಆರೋಪದಡಿ ಶಾಲಾ ಆಡಳಿತ ಮಂಡಳಿ ಆ ವಿದ್ಯಾರ್ಥಿಯನ್ನು ಅಮಾನತುಪಡಿಸಿತ್ತು. ಪರೀಕ್ಷೆಗೂ ಕೂರಿಸದೇ ಮನೆಯಿಂದಲೇ ಪರೀಕ್ಷೆ ಬರೆಸುವುದಾಗಿ ಭರವಸೆ ನೀಡಿತ್ತು. ಆದರೆ, ಆನ್ ಲೈನ್ ಲಿಂಕ್ ಕಳಿಸದ ಹಿನ್ನೆಲೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಹೀಗಾಗಿ, ಶಾಲಾ ಸಿಬ್ಬಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ʼಬಿʼ ವರದಿ ಸಲ್ಲಿಸಿದ್ದರು. ಆದರೆ, ಆ ಬಿ ವರದಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿ, ಶಾಲೆಯ ನಿರ್ದೇಶಕರು, ಪ್ರಾಂಶುಪಾಲರು ಮತ್ತು ವಾರ್ಡನ್ ವಿರುದ್ಧದ ಪ್ರಕರಣ ಮುಂದುವರಿಸಿತ್ತು. ಇದನ್ನು ವಜಾ ಮಾಡಬೇಕು ಎಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.