Mehbooba Mufti
Mehbooba Mufti 
ಸುದ್ದಿಗಳು

ಮುಫ್ತಿ ಪಾಸ್‌ಪೋರ್ಟ್‌ ನವೀಕರಣ ಅರ್ಜಿ 3 ತಿಂಗಳಲ್ಲಿ ನಿರ್ಧರಿಸಿ: ಪಾಸ್‌ಪೋರ್ಟ್‌ ಅಧಿಕಾರಿಗೆ ದೆಹಲಿ ಹೈಕೋರ್ಟ್‌ ಆದೇಶ

Bar & Bench

ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪಾಸ್‌ಪೋರ್ಟ್‌ ನವೀಕರಣ ಅರ್ಜಿಯ ಕುರಿತು ಮೂರು ತಿಂಗಳ ಒಳಗೆ ನಿರ್ಧಾರ ಕೈಗೊಳ್ಳುವಂತೆ ಶ್ರೀನಗರದ ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿಗೆ ಶುಕ್ರವಾರ ದೆಹಲಿ ಹೈಕೋರ್ಟ್‌ ಆದೇಶಿಸಿದೆ.

“ಪ್ರಕರಣವನ್ನು ಪಾಸ್‌ಪೋರ್ಟ್‌ ಅಧಿಕಾರಿಗೆ ವಾಪಸ್‌ ಕಳುಹಿಸಿರುವುದನ್ನು ಪರಿಗಣಿಸಿ ಮತ್ತು ಪ್ರಾರಂಭದ ತಿರಸ್ಕೃತಿಗೆ ಎರಡು ವರ್ಷಗಳಾಗಿದ್ದು, ಸಂಬಂಧಿತ ಪಾಸ್‌ಪೋರ್ಟ್‌ ಅಧಿಕಾರಿ ತುರ್ತಾಗಿ ನಿರ್ಧರಿಸಬೇಕು. ಅದು ಮೂರು ತಿಂಗಳ ಒಳಗೆ ನಿರ್ಧಾರವಾಗಬೇಕು” ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಆದೇಶದಲ್ಲಿ ಹೇಳಿದ್ದಾರೆ.

ಶ್ರೀನಗರದಲ್ಲಿರುವ ಪಾಸ್‌ಪೋರ್ಟ್‌ ಪ್ರಾಧಿಕಾರಕ್ಕೆ ಮುಫ್ತಿ ಅವರ ಅರ್ಜಿಗೆ ಸಂಬಂಧಿಸಿದಂತೆ ಹೊಸದಾಗಿ ಪರಿಶೀಲಿಸಲು ನಿರ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ತಮ್ಮ ಪಾಸ್‌ಪೋರ್ಟ್‌ ನವೀಕರಣಕ್ಕೆ ನಿರಾಕರಿಸಿರುವುದನ್ನು ಪ್ರಶ್ನಿಸಿ, ತುರ್ತಾಗಿ ನಿರ್ಧಾರ ಕೈಗೊಳ್ಳುವಂತೆ ಆದೇಶಿಸಲು ಮುಫ್ತಿ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 2021ರ ಮಾರ್ಚ್‌ 26ರಂದು ಪಾರ್ಸ್‌ಪೋರ್ಟ್‌ ರದ್ದುಪಡಿಸಲಾಗಿದ್ದು, ಇದನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ಮೆಟ್ಟಿಲೇರಲಾಗಿ, ಬಳಿಕ ಮುಫ್ತಿ ಅವರಿಗೆ ಪಾಸ್‌ಪೋರ್ಟ್‌ ಕಾಯಿದೆ ಅಡಿ ಮೇಲ್ಮನವಿ ಲಭ್ಯವಿರಲಿದೆ ಎಂದು ತಿಳಿಸಲಾಗಿತ್ತು.

2021ರ ಏಪ್ರಿಲ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಹಲವು ಬಾರಿ ನೆನಪಿಸಿದರೂ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. ಸದರಿ ವಿಚಾರವನ್ನು ಮುಫ್ತಿ ಅವರು ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರ ಗಮನಕ್ಕೂ ತಂದಿದ್ದು, ತಮ್ಮ ಮತ್ತು ತನ್ನ ಅಮ್ಮನ ಪಾಸ್‌ಪೋರ್ಟ್‌ ಕೊಡಿಸಲು ಮಧ್ಯಪ್ರವೇಶಿಸುವಂತೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ತಾಯಿಯನ್ನು ಮೆಕ್ಕಾ ಪ್ರವಾಸಕ್ಕೆ ಕರೆದೊಯ್ಯಬೇಕಿದ್ದು, ತುಚ್ಛಮಟ್ಟದ ರಾಜಕಾರಣದಿಂದಾಗಿ ಅದನ್ನೂ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. 2021ರಲ್ಲಿ ಹಲವು ಬಾರಿ ಭಾರತೀಯ ಪಾಸ್‌ಪೋರ್ಟ್‌ ಪ್ರಾಧಿಕಾರ ಸಂಪರ್ಕಿಸಿದ್ದು, ಯಾವುದೇ ಸಹಾಯವಾಗಿಲ್ಲ ಎಂದೂ ಹೇಳಿದ್ದಾರೆ. “ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವೇಚ್ಛೆಯಿಂದ ಸಾವಿರಾರು ಮಂದಿಯ ಪಾಸ್‌ಪೋರ್ಟ್‌ ತಿರಸ್ಕರಿಸುವುದು ನಿಯಮವಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಯ ಸೋಗಿನಲ್ಲಿ ವಿದ್ಯಾರ್ಥಿಗಳು, ಪತ್ರಕರ್ತ ಮತ್ತು ಇತರರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ” ಎಂದು ಮುಫ್ತಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.