ಸುದ್ದಿಗಳು

ಕೋವಿಡ್ ಇಳಿಮುಖ: ನ್ಯಾಯಾಲಯ ಕಲಾಪಗಳಿಗಿರುವ ನಿರ್ಬಂಧ ಸಡಿಲಗೊಳಿಸುವಂತೆ ಸಿಜೆಗೆ ಬೆಂಗಳೂರು ವಕೀಲರ ಸಂಘ ಮನವಿ

Bar & Bench

’ಕೋವಿಡ್‌ ಸಾಂಕ್ರಾಮಿಕದ ಪರಿಣಾಮ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಹೈಕೋರ್ಟ್‌ ಮತ್ತು ವಿಚಾರಣಾ ಕೋರ್ಟ್‌ಗಳ ಕಲಾಪಗಳಿಗೆ ವಿಧಿಸಲಾಗಿರುವ ನಿರ್ಬಂಧ ಸಡಿಲಿಸಬೇಕು‘ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದ್ದಾರೆ.

“ರಾಜ್ಯದಲ್ಲಿ ಕೋವಿಡ್‌ ಸಾಂಕ್ರಾಮಿಕ ತನ್ನ ತೀವ್ರತೆ ಕಳೆದುಕೊಂಡಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ರಾತ್ರಿ ಕ‌ರ್ಫ್ಯೂ ಸಡಿಲಿಕೆ ಸೇರಿದಂತೆ ಹಲವು ನಿರ್ಬಂಧಗಳನ್ನು ತೆಗೆದುಹಾಕಿದೆ. ಇದನ್ನು ಪರಿಗಣಿಸಿ ಹೈಕೋರ್ಟ್‌, ವಿಚಾರಣಾ ಕೋರ್ಟ್‌ಗಳಲ್ಲಿ ಪೂರ್ಣ ಪ್ರಮಾಣದ ಖುದ್ದು ಹಾಜರಿಯಲ್ಲಿ ಕಲಾಪ ನಡೆಯಲು ವಕೀಲರಿಗೆ ಅನುವು ಮಾಡಿಕೊಡಬೇಕು” ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

“ಈಗಾಗಲೇ ಕೋವಿಡ್‌ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲ ವೃಂದ ಮತ್ತಷ್ಟು ಕಷ್ಟಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಕಾರಣಕ್ಕಾಗಿ ಮುಕ್ತ ಕಲಾಪಗಳಿಗೆ ಅವಕಾಶ ನೀಡಬೇಕು” ಎಂದು ವಿವೇಕ್ ರೆಡ್ಡಿ ಕೋರಿದ್ದಾರೆ.