Deer and Karnataka HC 
ಸುದ್ದಿಗಳು

ಬಂಡೀಪುರದಲ್ಲಿ ಜಿಂಕೆ ಬೇಟೆ: '16 ವರ್ಷ ಪ್ರಕರಣ ತಳ್ಳುತ್ತಾ ಕೂತರೆ ಹೇಗೆ?' ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

“2008ರಲ್ಲಿ ಜಿಂಕೆ ಕೊಂದಿರುವುದಕ್ಕೆ ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿ, 2024ರಲ್ಲಿ ಅದರ ವಿಚಾರಣೆ ಎಂದರೆ ಹೇಗೆ? ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿಲ್ಲ ಎಂದು ಎಷ್ಟು ವರ್ಷ ಕಾಯ್ತೀರಿ?” ಎಂದು ಸರ್ಕಾರಕ್ಕೆ ಕುಟುಕಿದ ನ್ಯಾಯಾಲಯ.

Siddesh M S

ಬಂಡೀಪುರ ಅರಣ್ಯದಲ್ಲಿ ಕೇರಳದ ಮೂವರು ಆರೋಪಿಗಳು ಜಿಂಕೆ ಬೇಟೆಯಾಡಿದ್ದ ಪ್ರಕರಣದ ವಿಚಾರಣೆ 16 ವರ್ಷವಾದರೂ ತೆವಳುತ್ತಿರುವುದಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ವಿಚಾರಣಾಧೀನ ನ್ಯಾಯಾಲಯಕ್ಕೆ ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಆದೇಶಿಸಿತು.

ಕೇರಳದ ಅಬ್ದುಲ್‌ ರೆಹಮಾನ್‌, ಮೊಹಮ್ಮದ್‌ ಕುಟ್ಟಿ, ಅಬ್ದುಲ್‌ ಮಜೀದ್‌ ಅವರು ಗುಂಡ್ಲುಪೇಟೆಯ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿತು.

“2008ರಲ್ಲಿ ಪ್ರಕರಣ ನಡೆದಿದ್ದು, ನಾವೀಗ 2024ರಲ್ಲಿದ್ದೇವೆ. ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಿದ್ದು, ಅರ್ಜಿದಾರರು ವಿಚಾರಣೆಗೆ ಹಾಜರಾಗುತ್ತಿಲ್ಲ. ಅರ್ಜಿದಾರರು ವಿಚಾರಣೆಯಿಂದ ನುಣಿಚಿಕೊಳ್ಳುತ್ತಿರುವುದರಿಂದ ಅರ್ಜಿದಾರರಿಗೆ ಯಾವುದೇ ರಕ್ಷಣೆ ನೀಡಲಾಗದು. ವಿಚಾರಣಾಧೀನ ನ್ಯಾಯಾಲಯವು ಮೂರು ತಿಂಗಳಲ್ಲಿ ಪ್ರಕರಣದ ಅರ್ಜಿ ಇತ್ಯರ್ಥಪಡಿಸಬೇಕು. ಅರ್ಜಿದಾರರು ವಿಚಾರಣೆಗೆ ಸಹಕರಿಸಬೇಕು” ಎಂದು ಪೀಠವು ಅರ್ಜಿ ವಜಾ ಮಾಡಿದೆ.

ಅರ್ಜಿದಾರರ ಪರ ವಕೀಲರು “ಅರ್ಜಿದಾರರ ವಿರುದ್ಧ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ನ್ಯಾಯಾಲಯ ರಕ್ಷಣೆ ಒದಗಿಸಿದರೆ ವಿಚಾರಣೆಗೆ ಹಾಜರಾಗಲಾಗುವುದು” ಎಂದರು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “2008ರಲ್ಲಿ ಅರ್ಜಿದಾರರು ಬಂಡೀಪುರ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಕಾಲು ಕೈ ಎಲ್ಲಾ ಇಲ್ಲೇ ಬಿಟ್ಟು, ಮಾಂಸ ಮಾತ್ರ ಕೊಂಡೊಯ್ದಿದ್ದರು. ಅಲ್ಲಿ ಕೇರಳದ ಸುಲ್ತಾನ್‌ ಬತ್ತೇರಿಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಅವರ ಮಾಹಿತಿ ಆಧರಿಸಿ ಆರೋಪಿಗಳನ್ನು ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದಾಗ ಜಿಂಕೆಯ ಕಾಲು ಸಿಕ್ಕಿವೆ. ಆರೋಪ ನಿಗದಿಗೊಳಿಸಿ, ಸಾಕ್ಷಿ ದಾಖಲಿಸುವ ಹಂತದಲ್ಲಿ ಪ್ರಕರಣವಿದೆ. ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಿರಲಿಲ್ಲ. ಪ್ರತೀ ಬಾರಿ ಸಮಯ ತೆಗೆದುಕೊಂಡಿದ್ದಾರೆ” ಎಂದರು.

ಆಗ ಪೀಠವು “ಎರಡು ಕಾಲು? ಅದು ಪ್ರಾಣಿ, ಏನಿದು ಇಷ್ಟು ಉಪೇಕ್ಷೆಯಿಂದ ಎರಡು ಕಾಲು ಮಾತ್ರ ಬಿಟ್ಟೋಗಿರೋದು ಎಂದು ಹೇಳುತ್ತೀರಿ. ಕಾಲು ಕಟ್‌ ಮಾಡಿ ಇಲ್ಲಿಬಿಟ್ಟು ದೇಹವನ್ನು ಸುಲ್ತಾನ್‌ ಬತ್ತೇರಿಗೆ ತೆಗೆದುಕೊಂಡು ಹೋಗಿದ್ದೀರಿ. ಎರಡು ಕಡೆ ಪ್ರಕರಣ ದಾಖಲಾಗಿದೆ. ತೆಗೆದುಕೊಂಡು ಹೋದ ಮಾಂಸ ತಿಂದಿರಾ? ಜಿಂಕೆಯ ಮಾಂಸವೇ ಏಕೆ ಬೇಕಿತ್ತು? ಪ್ರಕರಣ ಯಾವ ಹಂತದಲ್ಲಿದೆ?” ಎಂದಿತು.

ಸರ್ಕಾರದ ಸಮರ್ಥನೆಯಿಂದ ಅತೃಪ್ತಿಗೊಂಡ ಪೀಠವು “16 ವರ್ಷ ಸಮಯ ಏಕೆ ತೆಗೆದುಕೊಂಡಿದ್ದೀರಿ? ಇಷ್ಟು ದೀರ್ಘಾವಧಿ ಏಕೆ? ಒಂದು ತಿಂಗಳಲ್ಲಿ ಇತ್ಯರ್ಥ ಮಾಡಲು ಅಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ನೀವು ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಆದೇಶ ಮಾಡಲಾಗುವುದು. ಅರಣ್ಯ ಅಪರಾಧವನ್ನು ಇತ್ಯರ್ಥ ಮಾಡಲು 16 ವರ್ಷ ಏಕೆ ತೆಗೆದುಕೊಂಡಿರಿ? ಹೀಗಾದರೆ, ಆರೋಪಿಗಳು ಎದೆಯುಬ್ಬಿಸಿ ಓಡಾಡುತ್ತಾರೆ. ಯಾರನ್ನಾದರೂ ಶಿಕ್ಷೆಗೆ ಗುರಿಯಾಗುವಂತೆ ಮಾಡಬೇಕಾದರೆ, ಬೇಗ ಮಾಡಿ. 16 ವರ್ಷ ಒಂದು ಪ್ರಕರಣ ತಳ್ಳುತ್ತಾ ಕೂತರೆ ಹೇಗೆ? 2008ರಲ್ಲಿ ಜಿಂಕೆ ಕೊಂದಿರುವುದಕ್ಕೆ ಅರಣ್ಯ ಕಾಯಿದೆ ಅಡಿ ಪ್ರಕರಣ ದಾಖಲಿಸಿ, 2024ರಲ್ಲಿ ಅದರ ವಿಚಾರಣೆ ಎಂದರೆ ಹೇಗೆ? ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿಲ್ಲ ಎಂದು ಎಷ್ಟು ವರ್ಷ ಕಾಯುತ್ತೀರಿ” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು 30.11.2008ರಂದು ಬಂಡೀಪುರದ ಅರಣ್ಯದಲ್ಲಿ ಜಿಂಕೆ ಕೊಂದು, ಕಾಲು ಕತ್ತರಿಸಿ ಬಿಸಾಡಿ ಆನಂತರ ಅದರ ದೇಹವನ್ನು ಸುಲ್ತಾನ್‌ ಬತ್ತೇರಿಗೆ ಕೊಂಡೊಯ್ದಿದ್ದರು. ಕರ್ನಾಟಕದ ವ್ಯಾಪ್ತಿಯಲ್ಲಿ ಜಿಂಕೆ ಕೊಂದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಗುಂಡ್ಲುಪೇಟೆಯ ಮದ್ದೂರು ವಿಭಾಗದ ವಲಯ ಅರಣ್ಯಾಧಿಕಾರಿಯು ವನ್ಯಜೀವಿ ರಕ್ಷಣಾ ಕಾಯಿದೆಯ ಸೆಕ್ಷನ್‌ಗಳಾದ 2(36),9,31,34,35(6,8) 48(ಎ) ಜೊತೆಗೆ 51 ಅಡಿ ಪ್ರಕರಣ ದಾಖಲಾಗಿತ್ತು.

ಮೊದಲಿಗೆ ಕೇರಳದ ಸುಲ್ತಾನ್‌ ಬತ್ತೇರಿ ಪೊಲೀಸರು 35 ಕೆಜಿ ಮಾಂಸ, ಚರ್ಮವನ್ನು ವಶಪಡಿಸಿಕೊಂಡಿದ್ದರು. ಆನಂತರ ಪರವಾನಗಿ ಇಲ್ಲದ ಗನ್‌, ಕಾಟ್ರಿಜ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ, ವನ್ಯಜೀವಿ ರಕ್ಷಣಾ ಕಾಯಿದೆ ಅಡಿ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸುಲ್ತಾನ್‌ ಬತ್ತೇರಿಯಲ್ಲಿ ಪ್ರತ್ಯೇಕವಾಗಿ ಅರ್ಜಿದಾರರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.