ಮಹೇಂದ್ರ ಸಿಂಗ್ ಧೋನಿ ಮತ್ತು ಮಿಹಿರ್ ದಿವಾಕರ್ ಮಹೇಂದ್ರ ಸಿಂಗ್ ಧೋನಿ, ಮಿಹಿರ್ ದಿವಾಕರ್ (ಫೇಸ್ಬುಕ್)
ಸುದ್ದಿಗಳು

ಕ್ರಿಕೆಟಿಗ ಧೋನಿ ವಿರುದ್ಧ ಮಾಜಿ ಪಾಲುದಾರ ಮಿಹಿರ್ ದಿವಾಕರ್ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ

ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯುವ ಒಪ್ಪಂದದ ಅಡಿಯಲ್ಲಿ 15 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಧೋನಿ ಈ ಹಿಂದೆ ದಿವಾಕರ್ ಮತ್ತು ಅವರ ಕಂಪನಿಯ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದರು.

Bar & Bench

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅವರ ಮಾಜಿ ವ್ಯವಹಾರ ಪಾಲುದಾರ ಮಿಹಿರ್ ದಿವಾಕರ್ ಮತ್ತು ದಿವಾಕರ್ ಪತ್ನಿ ಸೌಮ್ಯ ದಾಸ್‌ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ (ಮಿಹಿರ್ ದಿವಾಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಇನ್ನಿತರರ ನಡುವಣ ಪ್ರಕರಣ).

ಈ ಪ್ರಕರಣವನ್ನು ನಾಳೆ (ಜನವರಿ 18ರಂದು) ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿರುವ ಪೀಠ ವಿಚಾರಣೆ ನಡೆಸಲಿದೆ.

2017 ರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ತಡೆ ನೀಡಬೇಕೆಂದು ದಿವಾಕರ್ ಮತ್ತು ಸೌಮ್ಯ ಕೋರಿದ್ದಾರೆ.

ಭಾರತ ಮತ್ತು ವಿವಿಧ ದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಧೋನಿ ಅವರು ಮಿಹಿರ್‌ ಮತ್ತು ಸೌಮ್ಯ ಒಡೆತನದ ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು.

ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವ ಒಪ್ಪಂದ ಪಾಲಿಸದೆ ತನಗೆ ಸುಮಾರು 15 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ಮಿಹಿರ್‌ ಮತ್ತು ಸೌಮ್ಯ ವಿರುದ್ಧ ಆರೋಪ ಮಾಡಿದ್ದರು. ಇದು ಮಾನಹಾನಿಕರ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವ ಮೊದಲೇ ಧೋನಿ ಪರ ವಕೀಲ ದಯಾನಂದ ಶರ್ಮಾ ಅವರು ಜನವರಿ 6, 2024 ರಂದು ಪತ್ರಿಕಾಗೋಷ್ಠಿ ನಡೆಸಿ ಮಾನನಷ್ಟ ಉಂಟುಮಾಡುವಂತಹ ಆರೋಪಗಳನ್ನು ಮಾಡಿದ್ದರು.

ಮಿಹಿರ್‌ ಮಾಜಿ ಕ್ರಿಕೆಟರ್‌ ಆಗಿದ್ದು, 2000ನೇ ಇಸವಿಯಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತಂಡದಲ್ಲಿದ್ದರು.

ಧೋನಿ ಮತ್ತು ಅವರ ಹತ್ ಈ ಆರೋಪಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಇದು ಅವರ ವರ್ಚಸ್ಸಿಗೆ ಕಳಂಕ ತಂದಿದೆ. ಆದ್ದರಿಂದ, ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವವರು ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಆರೋಪಗಳನ್ನು ಮಾಡದಂತೆ ತಡೆ ನೀಡುವಂತೆ ಮಿಹಿರ್‌ ಮತ್ತು ಸೌಮ್ಯ ವಾದಿಸಿದ್ದಾರೆ.

ತಮ್ಮ ವಿರುದ್ಧದ ಅವಹೇಳನಕರ ಲೇಖನ/ ಹೇಳಿಕೆಗಳನ್ನು ತೆಗೆಯುವಂತೆ ಎಕ್ಸ್‌, ಗೂಗಲ್‌, ಯೂಟ್ಯೂಬ್‌ ಮೆಟಾ ಹಾಗೂ ವಿವಿಧ ಸುದ್ದಿ ವೇದಿಕೆಗಳಿಗೆ ನಿರ್ದೇಶನ ನೀಡುವಂತೆಯೂ ಅವರು ಕೋರಿದ್ದಾರೆ.

'ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ', 'ಎಂಎಸ್ ಧೋನಿ ಸ್ಪೋರ್ಟ್ಸ್ ಅಕಾಡೆಮಿ' ಅಥವಾ 'ಎಂಎಸ್ ಧೋನಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್' ಹೆಸರಿನಲ್ಲಿ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿ ಮತ್ತು ಕ್ರೀಡಾ ಸಂಕೀರ್ಣಗಳನ್ನು ತೆರೆಯಲು 2017ರಲ್ಲಿ ಮಾಡಿಕೊಂಡ ಒಪ್ಪಂದ ಉಲ್ಲಂಘಿಸಿದ ಆರೋಪದ ಮೇಲೆ ಧೋನಿ ಈ ಹಿಂದೆ ಮಿಹಿರ್‌ ಮತ್ತು ಸೌಮ್ಯ ವಿರುದ್ಧ ರಾಂಚಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ತಾವು ನೀಡಿದ್ದ ಅಧಿಕಾರ ಪತ್ರವನ್ನು ಹಿಂತೆಗೆದುಕೊಂಡ ನಂತರವೂ ಮಿಹಿರ್‌ ಮತ್ತು ಸೌಮ್ಯ ಒಪ್ಪಂದದಲ್ಲಿ ಉಲ್ಲೇಖಿಸಲಾದ ಹೆಸರಿನಲ್ಲಿ ಅನೇಕ ಕ್ರಿಕೆಟ್ ಅಕಾಡೆಮಿಗಳನ್ನು ತೆರೆದಿದ್ದಾರೆ ಎಂದು ಧೋನಿ ಆರೋಪಿಸಿದ್ದರು.