ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಮತ್ತು ಯೋಜನಾ ಸಚಿವ ವಿ ಮುನಿರತ್ನ ಅವರು ಹೂಡಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ಅನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಬುಧವಾರ ವಜಾ ಮಾಡಿದೆ.
ಸಿಆರ್‌ಪಿಸಿ ಸೆಕ್ಷನ್ 204(2)ರ ಅಡಿ ದೂರುದಾರ ಮುನಿರತ್ನ ಅವರು ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಇದರ ಅನುಪಾಲನೆಯ ಅನ್ವಯ ಸಮನ್ಸ್ ಜಾರಿ ಮಾಡಬೇಕಿತ್ತು. ಆದರೆ, ಹಾಲಿ ಪ್ರಕರಣದಲ್ಲಿ ಅದು ಪಾಲನೆಯಾಗಿಲ್ಲ. ಹೀಗಾಗಿ, ಕೆಂಪಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು 59ನೇ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್ ಕೃಷ್ಣಯ್ಯ ಅವರು ಮಾನ್ಯ ಮಾಡಿದ್ದಾರೆ.
“ಸಿಆರ್‌ಪಿಸಿ ಸೆಕ್ಷನ್ 379ರ ಅಡಿ ಸಲ್ಲಿಸಲಾಗಿರುವ ಮರುಪರಿಶೀಲನಾ ಅರ್ಜಿಯನ್ನು ಮಾನ್ಯ ಮಾಡಲಾಗಿದೆ. ಹೀಗಾಗಿ, 8ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹೊರಡಿಸಿದ್ದ ಸಮನ್ಸ್ ಅನ್ನು ಬದಿಗೆ ಸರಿಸಲಾಗಿದ್ದು, ಪ್ರಕರಣವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಲಾಗಿದೆ. ಪ್ರತಿವಾದಿ/ದೂರುದಾರರು ಸಾಕ್ಷಿಗಳ ಪಟ್ಟಿ ಸಲ್ಲಿಸಬೇಕು. ಸಾಕ್ಷಿಗಳು ಇಲ್ಲ ಎಂದಾದರೆ ಅವರು ಮೆಮೊ ಸಲ್ಲಿಸಬೇಕು. ಮೆಮೊ ಸಲ್ಲಿಸಿದ ಬಳಿಕ ಮ್ಯಾಜಿಸ್ಟ್ರೇಟ್ ಅವರು ಹೊಸದಾಗಿ ಎಲ್ಲಾ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ, ಕಾನೂನಿನ ಪ್ರಕಾರ ಮುಂದುವರಿಯಬಹುದಾಗಿದೆ. ಮುಖ್ಯ ಅರ್ಜಿಯನ್ನು ಮಾನ್ಯ ಮಾಡಿರುವುದರಿಂದ ಅರ್ಜಿದಾರರು ಸಲ್ಲಿಸಿರುವ ಮಧ್ಯಂತರ ಅರ್ಜಿಯು ಮಾನ್ಯತೆ ಕಳೆದುಕೊಂಡಿದ್ದು, ಹೀಗಾಗಿ ಅದನ್ನು ತಿರಸ್ಕರಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಕಮಿಷನ್ ಅಥವಾ ಪರ್ಸೆಂಟೇಜ್‌ಗೆ ಸಂಬಂಧಿಸಿದಂತೆ ಫಿರ್ಯಾದಿಯಾಗಿರುವ ಸಚಿವ ಮುನಿರತ್ನ ಅವರ ವಿರುದ್ಧ ಪ್ರತಿವಾದಿಗಳಾದ ಡಿ ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಉಪಾಧ್ಯಕ್ಷರಾದ ವಿ ಕೃಷ್ಣ ರೆಡ್ಡಿ, ಎಂ ಎಸ್ ಸಂಕ ಗೌಡಶನಿ, ಕೆ ಎಸ್ ಶಾಂತೇಗೌಡ, ಕೆ ರಾಧಾಕೃಷ್ಣ ನಾಯಕ್, ಆರ್ ಮಂಜುನಾಥ್, ಆರ್ ಅಂಬಿಕಾಪತಿ, ಬಿ ಸಿ ದಿನೇಶ್, ಸಿ ಡಿ ಕೃಷ್ಣ, ಕಾರ್ಯದರ್ಶಿ ಜಿ ಎಂ ರವೀಂದ್ರ, ಖಜಾಂಚಿ ಎಚ್ ಎಸ್ ನಟರಾಜ್, ಜಂಟಿ ಕಾರ್ಯದರ್ಶಿಗಳಾದ ಎಂ ರಮೇಶ್, ಎನ್ ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ್ ಬಿ. ಶೆಗಜಿ, ಸುರೇಶ್ ಎಸ್ ಭೋಮ ರೆಡ್ಡಿ, ಕೆ ಎ ರವಿಚಂಗಪ್ಪ, ಬಿ ಎಸ್ ಗುರುಸಿದ್ದಪ್ಪ, ಕರ್ಲೆ ಇಂದ್ರೇಶ್ ಅವರು ನೀಡಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟ, ಪ್ರಸಾರವಾಗಿದ್ದು, ಇದು ಫಿರ್ಯಾದಿಯ ವರ್ಚಸ್ಸಿಗೆ ಮೇಲ್ನೋಟಕ್ಕೆ ಧಕ್ಕೆ ಉಂಟು ಮಾಡಿದೆ ಎಂದು ವಿಚಾರಣಾಧೀನ ನ್ಯಾಯಾಲಯ ಆದೇಶಿಸಿತ್ತು.
ಅಲ್ಲದೇ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 499 ಮತ್ತು 500ರ ಅಡಿ ಸಂಜ್ಞೇಯ ಪರಿಗಣಿಸಲಾಗಿತ್ತು. ಇದರ ಭಾಗವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿದ್ದ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು. ಆನಂತರ ಜಾಮೀನುರಹಿತ ವಾರೆಂಟ್ ಅನ್ನೂ ನ್ಯಾಯಾಲಯ ಹೊರಡಿಸಿತ್ತು. ಕೆಂಪಣ್ಣ ಅವರನ್ನು ವಕೀಲರಾದ ಕೆ ವಿ ಧನಂಜಯ ಅವರು ಪ್ರತಿನಿಧಿಸಿದ್ದರು.