A prisoner walking out of jail 
ಸುದ್ದಿಗಳು

ಡಿಫಾಲ್ಟ್ ಜಾಮೀನು ರದ್ದುಪಡಿಸಲಾಗದ ಹಕ್ಕು, ಅದನ್ನು ಸಾಂಕ್ರಾಮಿಕದ ವೇಳೆಯೂ ಅನೂರ್ಜಿತಗೊಳಿಸಲಾಗದು: ದೆಹಲಿ ಹೈಕೋರ್ಟ್

ಆದ್ದರಿಂದ ಡಿಫಾಲ್ಟ್ ಜಾಮೀನು ಕೋರುವ ವಿಚಾರಣಾಧೀನ ಕೈದಿಗಳ ಹಕ್ಕುಗಳನ್ನು ಮೊಟಕುಗೊಳಿಸದಂತೆ ಮತ್ತು ಯಾಂತ್ರಿಕವಾಗಿ ವಿಚಾರಣಾಧೀನ ಕೈದಿಗಳ ಕಸ್ಟಡಿ ವಿಸ್ತರಿಸದಂತೆ ನ್ಯಾಯಾಲಯ ವಿವಿಧ ನಿರ್ದೇಶನಗಳನ್ನು ನೀಡಿತು.

Bar & Bench

ಡಿಫಾಲ್ಟ್‌ ಜಾಮೀನು ಮೂಲಭೂತ ಹಕ್ಕಾಗಿದ್ದು ಸಂವಿಧಾನದ 21ನೇ ಪರಿಚ್ಛೇದದಿಂದ ಶಕ್ತಿಯನ್ನು ಪಡೆಯುತ್ತದೆ; ಅದನ್ನು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿಯೂ ಕೂಡ ರದ್ದುಪಡಿಸಲು ಸಾಧ್ಯವಿಲ್ಲ ಎಂದು ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವಾಗ ದೆಹಲಿ ಹೈಕೋರ್ಟ್‌ ತಿಳಿಸಿದೆ (ಅಭಿಷೇಕ್‌ ಮತ್ತು ಸರ್ಕಾರದ ನಡುವಣ ಪ್ರಕರಣ).

ವಿಚಾರಣಾಧೀನ ಕೈದಿಯನ್ನು ಬಂಧಿಸುವ ಅಥವಾ ಅಂತಹ ಬಂಧನ ವಿಸ್ತರಿಸುವ ಆದೇಶ ನ್ಯಾಯಾಂಗದ ಕಾರ್ಯವಾಗಿದ್ದು ಸೂಕ್ತ ವಿವೇಚನೆಯನ್ನು ಬಳಸಿ ಇದನ್ನು ಮಾಡುವ ಅಗತ್ಯವಿದೆ ಎಂದು ಕೂಡ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅಕ್ಟೋಬರ್ 18, 2021 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಡಿಫಾಲ್ಟ್‌ ಜಾಮೀನು ಕೋರುವ ವಿಚಾರಣಾಧೀನ ಕೈದಿಗಳ ಹಕ್ಕುಗಳನ್ನು ಮೊಟಕುಗೊಳಿಸದಂತೆ ಮತ್ತು ಯಾಂತ್ರಿಕವಾಗಿ ವಿಚಾರಣಾಧೀನ ಕೈದಿಗಳ ಕಸ್ಟಡಿ ವಿಸ್ತರಿಸದಂತೆ ನ್ಯಾಯಾಲಯ ವಿವಿಧ ನಿರ್ದೇಶನಗಳನ್ನು ನೀಡಿತು.

ಡಿಫಾಲ್ಟ್‌ ಜಾಮೀನು ಅರ್ಜಿ ನಿರಾಕರಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀಡಿದ್ದ ತೀರ್ಪನ್ನು ಸೆಷನ್ಸ್‌ ನ್ಯಾಯಾಲಯವೊಂದು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಐಪಿಸಿ ಸೆಕ್ಷನ್ 304B (ವರದಕ್ಷಿಣೆ ಸಾವು) 498A ( ಒಳಗಾಗುವ ಮಹಿಳೆಯನ್ನು ಕ್ರೌರ್ಯಕ್ಕೆ ಈಡುಮಾಡುವ ಪತಿ ಅಥವಾ ಅವರ ಸಂಬಂಧಿ), 406 (ವಿಶ್ವಾಸಘಾತ), 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಜನವರಿ 16, 2020ರಂದು ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣೆ ವೇಳೆ ಹೈಕೋರ್ಟ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭೌತಿಕವಾಗಿ ಅರ್ಜಿಯನ್ನು ದಾಖಲಿಸುವುದು ಸಾಧ್ಯವಿರಲಿಲ್ಲ ಎನ್ನುವ ಅಂಶವನ್ನು ಪರಿಗಣನೆಗೆ ತೆಗೆದುಕೊಂಡಿತು. “ಸಾಂಕ್ರಾಮಿಕದ ಸಂದರ್ಭದಲ್ಲಿ ಅರ್ಜಿದಾರರು ಬೇರೇನನ್ನೂ ಮಾಡಬೇಕಿಲ್ಲ. ಅಂತಹ ಅರ್ಜಿಯನ್ನು ಪಟ್ಟಿ ಮಾಡುವುದು ಅವರ ಕೈಯಲ್ಲಿ ಇರುವುದಿಲ್ಲ. ಈ ನ್ಯಾಯಾಲಯದ ಅಭಿಪ್ರಾಯದಲ್ಲಿ ಅರ್ಜಿದಾರರ ಪರವಾಗಿ ಇಮೇಲ್‌ ಕಳುಹಿಸುವುದು ಆತ ಡಿಫಾಲ್ಟ್‌ ಜಾಮೀನು ಪಡೆಯುವ ಹಕ್ಕನ್ನು ಬಳಸುವುದಾಗಿರುತ್ತದೆ. ʼಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿರಲಿಲ್ಲ ಅಥವಾ ಅರ್ಜಿದಾರರು ಅದನ್ನು ಮುಂದುವರೆಸಿರಲಿಲ್ಲʼ ಎನ್ನುವ ಸರ್ಕಾರದ ಪರವಾಗಿ ಮಂಡಿಸಲಾದ ವಾದವನ್ನು ಅರ್ಹತೆ ಇಲ್ಲದ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂಬುದಾಗಿ ನ್ಯಾಯಾಲಯ ಹೇಳಿದೆ.