Bengaluru City civil court and CBI 
ಸುದ್ದಿಗಳು

ಮೂಡಾಗೆ ₹5 ಕೋಟಿ ವಂಚನೆ: ಎಫ್‌ಡಿಎ ಸೇರಿ ಐವರಿಗೆ ತಲಾ 7 ವರ್ಷ ಜೈಲು, ₹1 ಕೋಟಿ ದಂಡ ವಿಧಿಸಿದ ಸಿಬಿಐ ವಿಶೇಷ ನ್ಯಾಯಾಲಯ

ಮಂಡ್ಯದ ಇಂಡಿಯನ್‌ ಬ್ಯಾಂಕ್‌ನಲ್ಲಿದ್ದ ಮೂಡಾ ಖಾತೆಗೆ ನಿಶ್ಚಿತ ಠೇವಣಿ ಇಡಲು ತಲಾ ₹1 ಕೋಟಿ ಮೌಲ್ಯದ ಐದು ಚೆಕ್‌ಗಳನ್ನು ಸಹಿ ಮಾಡಿ ಅಂದಿನ ಆಯುಕ್ತರು ಹಣಕಾಸು ವಿಭಾಗದ ಉಸ್ತುವಾರಿ ಎಫ್‌ಡಿಎ ನಾಗರಾಜ್‌ಗೆ ನೀಡಿದ್ದರು. ಈತ ಹಣ ದುರ್ಬಳಕೆ ಮಾಡಿದ್ದ.

Bar & Bench

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಸೇರಿದ ನಿಶ್ಚಿತ ಠೇವಣಿಯ ಹಣಕ್ಕೆ ನಕಲಿ ದಾಖಲೆ ಸೃಷ್ಟಿಸಿ, ₹5 ಕೋಟಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದ ಮೂಡಾದ ಉದ್ಯೋಗಿ ಸೇರಿದಂತೆ ಐವರನ್ನು ತಪ್ಪಿತಸ್ಥರು ಎಂದು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಎಲ್ಲಾ ಆರೋಪಿಗಳಿಗೂ ತಲಾ ₹1 ಕೋಟಿ ದಂಡ ವಿಧಿಸಿದ್ದು, ಪ್ರತಿಯೊಬ್ಬರಿಗೆ ತಲಾ ಏಳು ವರ್ಷಗಳ ಕಠಿಣ ಸಜೆ ವಿಧಿಸಿದೆ.

ಮಂಡ್ಯದ ಕೆ ಆನಂದ ಅಲಿಯಾಸ್‌ ಕೆಬ್ಬಳ್ಳಿ ಆನಂದ, ಮಳಿವಳ್ಳಿಯ ಡಿ ಹಾಲಸಹಳ್ಳಿಯ ಎಚ್‌ ಎಸ್‌ ನಾಗಲಿಂಗಸ್ವಾಮಿ, ಮದ್ದೂರಿನ ಹೆಮ್ಮನಹಳ್ಳಿಯ ಚಂದ್ರಶೇಖರ, ಮೂಡಾದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ, ಮಂಡ್ಯದ ಕೆರಸವಾಡಿಯ ಎಚ್‌ ಕೆ ನಾಗರಾಜ ಮತ್ತು ಜಿ ಕೆಬ್ಬಳ್ಳಿಯ ಎಚ್‌ ಬಿ ಹರ್ಷನ್‌ಗೆ ಐಪಿಸಿ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪ್ರತ್ಯೇಕ ಶಿಕ್ಷೆ ಮತ್ತು ದಂಡ ವಿಧಿಸಿದ್ದು, ಶಿಕ್ಷೆ ಏಕಕಾಲಕ್ಕೆ ಅನ್ವಯಸಲಿದೆ. ದಂಡದ ಮೊತ್ತವನ್ನು ಪ್ರತ್ಯೇಕವಾಗಿ ಪಾವತಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗಳು ದಂಡದ ಮೊತ್ತ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಎರಡು ವರ್ಷ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಅಪರಾಧಿಗಳಿಗೆ ವಿಧಿಸಲಾಗಿರುವ ಒಟ್ಟು ₹7. 75 ಕೋಟಿ ದಂಡದ ಮೊತ್ತದ ಪೈಕಿ ₹5.2 ಕೋಟಿಯನ್ನು ಮೂಡಾಗೆ ಪರಿಹಾರವಾಗಿ, ಉಳಿದ ಹಣವನ್ನು ರಾಜ್ಯ ಸರ್ಕಾರಕ್ಕೆ ವರ್ಗಾಯಿಸಲು ನ್ಯಾಯಾಲಯವು ಆದೇಶಿಸಿದೆ. 2012-13ರ ಅವಧಿಯಲ್ಲಿ ಹಗರಣ ಬಯಲಾಗಿದ್ದು, 2015ರಲ್ಲಿ ಕೇಂದ್ರೀಯ ತನಿಖಾ ದಳವು ವಿಚಾರಣೆ ಆರಂಭಿಸಿ, ಆರೋಪ ಪಟ್ಟಿ ಸಲ್ಲಿಸಿತ್ತು. ಸುದೀರ್ಘ ಏಳು ವರ್ಷಗಳ ವಿಚಾರಣೆಯ ಬಳಿಕ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯದ ಇಂಡಿಯನ್‌ ಬ್ಯಾಂಕ್‌ನಲ್ಲಿದ್ದ ಮೂಡಾ ಖಾತೆಗೆ ನಿಶ್ಚಿತ ಠೇವಣಿ ಇಡಲು ತಲಾ ₹1 ಕೋಟಿ ಮೌಲ್ಯದ ಐದು ಚೆಕ್‌ಗಳನ್ನು ಸಹಿ ಮಾಡಿ ಅಂದಿನ ಮೂಡಾ ಆಯುಕ್ತರು ಮೂಡಾದಲ್ಲಿ ಎಫ್‌ಡಿಎ ಹಾಗೂ ಹಣಕಾಸು ವಿಭಾಗದ ಉಸ್ತುವಾರಿ ನಿರ್ವಹಿಸುತ್ತಿದ್ದ ನಾಗರಾಜ್‌ಗೆ ನೀಡಿದ್ದರು. ಈತ ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ₹5 ಕೋಟಿ ಹಣವನ್ನು ದುರ್ಬಳಕೆ ಮಾಡಿ, ಮೂಡಾದ ಹೆಸರಿನಲ್ಲಿ ಠೇವಣಿ ಇಡುವ ಬದಲಿಗೆ ಅದನ್ನು ಚಂದ್ರಶೇಖರ್‌ ಒಡೆತನದ ಆಕಾಶ್‌ ಎಂಟರ್‌ಪ್ರೈಸಸ್‌ ಖಾತೆಗೆ ವರ್ಗಾಯಿಸಿದ್ದ. ಅಲ್ಲಿಂದ ಮುಂದಕ್ಕೆ ಇತರ ಆರೋಪಿಗಳ ಖಾತೆಗೆ ಹಣವನ್ನು ವರ್ಗಾಯಿಸಲಾಗಿತ್ತು.

ಠೇವಣಿ ಇಡಬೇಕಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡು ಅದಕ್ಕೆ ಐದು ನಕಲಿ ಎಫ್‌ಡಿಆರ್‌ ಸ್ವೀಕೃತಿಗಳನ್ನು ಸೃಷ್ಟಿಸಿ, ಅವುಗಳನ್ನು ಅಸಲಿ ಎಂದು ಮೂಡಾ ರಿಜಿಸ್ಟ್ರಾರ್‌ನಲ್ಲಿ ಉಲ್ಲೇಖಿಸಲಾಗಿತ್ತು. ಆ ಮೂಲಕ ಮುಡಾಗೆ ವಂಚಿಸಲಾಗಿತ್ತು.